×
Ad

‘ದೇವ ಭಯದ ಶಿಕ್ಷಣದಿಂದ ಉತ್ತಮ ಸಮಾಜ ನಿರ್ಮಾಣ’

Update: 2019-01-08 19:59 IST

ಮೂಡಬಿದರೆ, ಜ.8: ದೇವನನ್ನು ಅರಿಯುವ ಮೂಲವೇ ನಿಜವಾದ ವಿದ್ಯೆ ಎಂದು ಪ್ರವಾದಿಯವರು ಹೇಳಿದ್ದಾರೆ. ವಿಜ್ಞಾನ ಗಣಿತಗಳೂ ದೇವನನ್ನು ಅರಿಯಲಿಕ್ಕಿರುವ ವಿದ್ಯೆಗಳಾಗಿವೆ. ಪ್ರತಿಭಾವಂತರೇ ಸಾರಥಿಗಳಾಗಲು ಸಾಧ್ಯ ಎಂದು ಇಸ್ಲಾಮಿ ವಿದ್ವಾಂಸ ಮೌಲಾನಾ ಅಹ್ಮದ್ ಸಿರಾಜ್ ಹೇಳಿದ್ದಾರೆ.

ಇತ್ತೀಚೆಗೆ ನಡೆದ ಮೂಡಬಿದಿರೆ ಅಲ್ ಇಸ್ಲಾಹ್ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು. ಡಾಕ್ಟರ್, ಇಂಜಿನಿಯರ್‌ಗಳಾಗುವವರಿಗೆ ದೇವ ಭಯದ ಶಿಕ್ಷಣ ದೊರೆತರೆ ಪ್ರಾಮಾಣಿಕ ವ್ಯವಹಾರಗಳು ನಡೆದು ಉತ್ತಮ ಸಮಾಜ ನಿರ್ಮಾಣವಾಗಲು ಸಾಧ್ಯ. ಭೌತಿಕ ಜ್ಞಾನದ ಜೊತೆಗೆ ನೈತಿಕ ಶಿಕ್ಷಣ ತರಬೇತಿ ಅತ್ಯಗತ್ಯ ಎಂದರು.

ಮಂಗಳೂರಿನ ಶಾಂತಿ ಪ್ರಕಾಶನದ ವ್ಯವಸ್ಥಾಪಕ ಮುಹಮ್ಮದ್ ಕುಂಞ ಮಾತನಾಡಿ, ಸಮುದಾಯದಲ್ಲಿರುವ ವಿದ್ವಾಂಸರಲ್ಲಿ ಹೆಚ್ಚಿನವರು ತಮ್ಮ ಹೊಣೆಗಾರಿಕೆಯನ್ನು ನಿಭಾಯಿಸುವ ಸಾಮರ್ಥ್ಯ ಹೊಂದಿಲ್ಲ. ಪ್ರವಾದಿಯವರು ಭಾಷಾ ತಜ್ಞರು, ಕವಿಗಳನ್ನು ಬೆಳೆಸಿದರು. ವಂಚನೆ ಮತ್ತು ಬಡ್ಡಿ ಇತ್ಯಾದಿ ಶೋಷಣೆಗಳ ಮಾರಕಟ್ಟೆಯನ್ನು ಪ್ರಾಮಾಣಿಕ ಮತ್ತು ಸ್ವಸ್ಥ ಮಾರಕಟ್ಟೆಯಾಗಿ ಪರಿವರ್ತಿಸಿದರು ಎಂದು ಅವರು ತಿಳಿಸಿದರು.

ಮಂಗಳೂರು ಮುಸ್ಲಿಮ್ ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಮುಹಮ್ಮದ್ ಮಸೂದ್, ಅಬುಧಾಬಿಯ ಸಿತಾರಾ ಕಂಸ್ಟ್ರಕ್ಷ ನ್ಸ್ನ ಮಾಲಕ ಮುಹಮ್ಮದ್ ಅಕ್ರಮ್, ಮಂಗಳೂರಿನ ಮರ್ವ ಬಿಲ್ಡರ್ಸ್ ಮಾಲಕ ಅಬ್ದುಲ್ ರಶೀದ್, ಕಾಲೇಜಿನ ಅಧ್ಯಕ್ಷ ಝಾಹಿದ್ ಹುಸೈನ್, ಕಾರ್ಯದರ್ಶಿ ಡಾ.ಸಯ್ಯದ್ ಇಹ್ತಿಶಾಮುದ್ದೀನ್ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ತಮ್ಮ ಪ್ರತಿಭೆಗಳನ್ನು ಪ್ರದರ್ಶಿಸಿದರು. ಆಟೋಟ, ಪ್ರಬಂಧ, ಭಾಷಣ ಸೇರಿದಂತೆ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News