ಯೋಚನೆಗಳನ್ನು ಯೋಜನೆಯಾಗಿ ರೂಪಿಸುವುದು ಇಂದಿನ ಅಗತ್ಯ: ಡಾ.ಮೂಡಿತ್ತಾಯ

Update: 2019-01-08 14:30 GMT

ಶಿರ್ವ, ಜ.8: ಉದ್ಯಮಾಡಳಿತ ಅಧ್ಯಯನ ಇಂದಿನ ಅನಿವಾರ್ಯವಾಗಿದೆ. ಸಾಮಾಜಿಕವಾಗಿ ಪರಿಣಾಮ ಬೀರಬಲ್ಲ ಯೋಚನೆಗಳನ್ನು ಯೋಜನೆಯಾಗಿ ರೂಪಿಸುವ ಅಗತ್ಯ ಈಗ ಬಹಳಷ್ಟಿದೆ ಎಂದು ನಿಟ್ಟೆ ವಿಶ್ವವಿದ್ಯಾಲಯದ ಸಹ ಕುಲಪತಿ ಡಾ.ಎಂ.ಎಸ್.ಮೂಡಿತ್ತಾಯ ಹೇಳಿದ್ದಾರೆ.

ಬಂಟಕಲ್ಲಿನ ಶ್ರೀಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಉದ್ಯಮಾಡಳಿತ ಶಿಕ್ಷಣ ಕ್ಷೇತ್ರದಲ್ಲಿನ ನೂತನ ಅವಕಾಶಗಳ ಬಗ್ಗೆ ಉಪನ್ಯಾಸ ಮಾಲಿಕೆಯನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಅಮೆರಿಕಾದ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದ ಸಾಮಾಜಿಕ ನ್ಯಾಯ ಮತ್ತು ಅನುಷ್ಠಾನ ವಿಭಾಗದ ಪ್ರಾಧ್ಯಾಪಕಿ ಪ್ರೊ.ಡಾ.ಫಾಮಿಡಾ ಹ್ಯಾಂಡಿ ಉಪನ್ಯಾಸ ನೀಡಿ, ಜಾಗತೀಕರಣವು ಶೈಕ್ಷಣಿಕ ಕ್ಷೇತ್ರದ ಮೇಲೆ ಪರಿಣಾಮ ಬೀರುತ್ತಿದ್ದು, ಪ್ರತಿಯೊಂದು ವಿಶ್ವವಿದ್ಯಾಲಯಗಳು ಜಾಗತಿಕವಾಗಿ ತೆರೆದು ಕೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ಈ ಸಂಸ್ಥೆಗಳು ಅಂತರ್ಜಾಲದ ಮೂಲಕ ವಿವಿಧ ಕೋರ್ಸ್ ಗಳನ್ನು ಒದಗಿಸುತ್ತಿವೆ. ಜಗತ್ತಿನಾದ್ಯಂತ ಎಲ್ಲ ಸ್ತರದ ವಿದ್ಯಾಕಾಂಕ್ಷಿಗಳು ಇವು ಗಳನ್ನು ಆಸಕ್ತಿಯಿಂದ ಪಡೆದುಕೊಳ್ಳುತ್ತಿದ್ದಾರೆ ಎಂದರು.

ಅಧ್ಯಕ್ಷತೆಯನ್ನು ವಹಿಸಿದ್ದ ಉಡುಪಿ ಸೋದೆ ವಾದಿರಾಜ ಮಠದ ಶ್ರೀ ವಿಶ್ವವಲ್ಲಭ ತೀರ್ಥ ಸ್ವಾಮೀಜಿ ಮಾತನಾಡಿ, ಅಧ್ಯಯನದ ಪರಿಣಾಮಕಾರಿ ಅಂಶಗಳನ್ನು 500 ವರ್ಷಗಳ ಹಿಂದೆಯೇ ವಾದಿರಾಜರು ಉಡುಪಿಯಲ್ಲಿ ಅಳವಡಿಸಿದ್ದು, ಅಂದು ರೂಪಿಸಿದ ವಿವಿಧ ಅಲಿಖಿತ ನಿಯಮಾವಳಿಗಳು ಇಂದಿಗೂ ಪಾಲಿಸಲ್ಪಡುತ್ತಿವೆ ಎಂದರು.

ವೇದಿಕೆಯಲ್ಲಿ ಸಂಸ್ಥೆಯ ಕಾರ್ಯದರ್ಶಿ ರತ್ನಕುಮಾರ್ ಉಪಸ್ಥಿತರಿದ್ದರು. ಪ್ರಾಂಶುಪಾಲ ಪ್ರೊ.ಡಾ.ತಿರುಮಲೇಶ್ವರ ಭಟ್ ಸ್ವಾಗತಿಸಿದರು. ಸಹಾಯಕ ಪ್ರಾಧ್ಯಾಪಕ ಅನುಜ್ಞಾ ರಾವ್ ಮತ್ತು ಶರೀನ್ ನೊರೊನ್ಹಾ ಅತಿಥಿಗಳನ್ನು ಪರಿಚಯಿಸಿದರು. ಗಣಕಯಂತ್ರ ವಿಭಾಗದ ಮುಖ್ಯಸ್ಥ ಡಾ.ವಾಸುದೇವ ವಂದಿಸಿದರು. ಸೌಮ್ಯ ಭಟ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News