ಕೇಜ್ರಿವಾಲ್ ಪದಚ್ಯುತಿ ಕೋರಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್

Update: 2019-01-08 15:25 GMT

ಹೊಸದಿಲ್ಲಿ,ಜ.8: ಕ್ರಿಮಿನಲ್ ಪ್ರಕರಣದಲ್ಲಿ ಕಾನೂನು ಕ್ರಮವನ್ನು ಎದುರಿಸುತ್ತಿರುವ ಆಪ್ ನಾಯಕ ಅರವಿಂದ್ ಕೇಜ್ರಿವಾಲ್ ಅವರನ್ನು ದಿಲ್ಲಿ ಮುಖ್ಯಮಂತ್ರಿ ಹುದ್ದೆಯಿಂದ ತೆಗೆಯುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ದಿಲ್ಲಿ ಉಚ್ಚ ನ್ಯಾಯಾಲಯವು ಮಂಗಳವಾರ ವಜಾಗೊಳಿಸಿದೆ.

ಪ್ರಕರಣದಲ್ಲಿ ಕಾನೂನು ಕ್ರಮವು ಇನ್ನೂ ಬಾಕಿಯಿದೆ ಮತ್ತು ಚುನಾಯಿತ ಜನಪ್ರತಿನಿಧಿಗಳನ್ನು ಹೀಗೆ ವಜಾಗೊಳಿಸುವಂತಿಲ್ಲ ಎಂದು ಮುಖ್ಯ ನ್ಯಾಯಾಧೀಶ ರಾಜೇಂದ್ರ ಮೆನನ್ ಮತ್ತು ನ್ಯಾ.ವಿ.ಕೆ.ರಾವ್ ಅವರ ಪೀಠವು ತಿಳಿಸಿತು.

ಕಾನೂನು ಕ್ರಮವು ಇನ್ನೂ ಜಾರಿಯಲ್ಲಿದೆ. ಅವರು ಬಿಡುಗಡೆಗೊಳ್ಳಬಹುದು. ಆಗ ನೀವೇನು ಮಾಡುತ್ತೀರಿ? ಅವರ ದೋಷನಿರ್ಣಯವಾದ ಬಳಿಕ ಬನ್ನಿ ಎಂದು ಪೀಠವು ಅರ್ಜಿದಾರರಾದ ನ್ಯಾಯವಾದಿ ಹರಿನಾಥ ರಾಮ್ ಅವರಿಗೆ ಸೂಚಿಸಿತು.

ಆಗಿನ ದಿಲ್ಲಿ ಮುಖ್ಯ ಕಾರ್ಯದರ್ಶಿ ಅಂಶು ಪ್ರಕಾಶ್ ಅವರ ಮೇಲೆ ಹಲ್ಲೆಗೆ ಸಂಬಂಧಿಸಿದ ಕ್ರಿಮಿನಲ್ ಪ್ರಕರಣದಲ್ಲಿ ಆರೋಪಿಗಳಾಗಿರುವ ಕೇಜ್ರಿವಾಲ್ ಮತ್ತು ಇತರ ಸಚಿವರನ್ನು ತಕ್ಷಣವೇ ಹುದ್ದೆಗಳಿಂದ ವಜಾಗೊಳಿಸುವಂತೆ ದಿಲ್ಲಿ ಉಪರಾಜ್ಯಪಾಲರಿಗೆ ನಿರ್ದೇಶವನ್ನು ಕೋರಿ ರಾಮ್ ಈ ಅರ್ಜಿಯನ್ನು ಸಲ್ಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News