ರಖೈನ್: ಬಂಡುಕೋರರ ದಮನಕ್ಕೆ ಸೂ ಕಿ ಕರೆ

Update: 2019-01-08 16:10 GMT

ಯಾಂಗನ್ (ಮ್ಯಾನ್ಮಾರ್), ಜ. 8: ಸೋಮವಾರ ಸೇನಾ ಮುಖ್ಯಸ್ಥರೊಂದಿಗೆ ಅಪರೂಪದ ಸಭೆ ನಡೆಸಿದ ಮ್ಯಾನ್ಮಾರ್ ನಾಯಕಿ ಆಂಗ್ ಸಾನ್ ಸೂ ಕಿ, ಪೊಲೀಸರ ಮೇಲೆ ಬಂಡುಕೋರರು ನಡೆಸಿದ ಆಕ್ರಮಣಗಳ ಬಗ್ಗೆ ಚರ್ಚಿಸಿದ್ದಾರೆ ಹಾಗೂ ಬಂಡುಕೋರರನ್ನು ದಮನಿಸುವಂತೆ ಸಶಸ್ತ್ರ ಪಡೆಗಳಿಗೆ ಕರೆ ನೀಡಿದ್ದಾರೆ ಎಂದು ಸರಕಾರಿ ವಕ್ತಾರರೊಬ್ಬರು ಹೇಳಿದ್ದಾರೆ.

ಮ್ಯಾನ್ಮಾರ್‌ನ ಪಶ್ಚಿಮದ ರಾಜ್ಯ ರಖೈನ್‌ನಲ್ಲಿ ಸರಕಾರಿ ಪಡೆಗಳು ಮತ್ತು ಬಂಡುಕೋರ ‘ಅರಕಾನ್ ಆರ್ಮಿ’ ನಡುವೆ ಕಾಳಗ ನಡೆಯುತ್ತಿದ್ದು, ಡಿಸೆಂಬರ್ ಆದಿ ಭಾಗದಿಂದ ಸಾವಿರಾರು ಮಂದಿ ನಿರ್ವಸಿತರಾಗಿದ್ದಾರೆ ಎಂದು ವಿಶ್ವಸಂಸ್ಥೆ ತಿಳಿಸಿದೆ.

ರಖೈನ್‌ಗೆ ಹೆಚ್ಚಿನ ಸ್ವಾಯತ್ತೆ ನೀಡಬೇಕೆಂದು ಅರಕಾನ್ ಆರ್ಮಿ ಬಯಸಿದೆ. ರಖೈನ್ ರಾಜ್ಯದಲ್ಲಿ ಬೌದ್ಧ ರಖೈನ್ ಮೂಲ ನಿವಾಸಿ ಗುಂಪು ಬಹುಸಂಖ್ಯಾತರು. ಅರಕಾನ್ ಆರ್ಮಿ ಅವರ ಪರವಾಗಿ ಸಶಸ್ತ್ರ ಹೋರಾಟದಲ್ಲಿ ತೊಡಗಿದೆ.

‘ಸೂ ಕಿ, ಅಧ್ಯಕ್ಷ ವಿನ್ ಮ್ಯಿಂಟ್ ಮತ್ತು ಸಂಪುಟ ಸದಸ್ಯರು ಸೇನಾ ಮುಖ್ಯಸ್ಥ ಮಿನ್ ಆಂಗ್ ಹಲಯಿಂಗ್, ಉಪ ಮುಖ್ಯಸ್ಥ ಮತ್ತು ಸೇನಾ ಗುಪ್ತಚರ ಮುಖ್ಯಸ್ಥರನ್ನು ಭೇಟಿಯಾಗಿ ವಿದೇಶ ವ್ಯವಹಾರಗಳು ಮತ್ತು ರಾಷ್ಟ್ರೀಯ ಭದ್ರತೆ’ಯ ಬಗ್ಗೆ ಚರ್ಚಿಸಿದರು ಎಂದು ಮ್ಯಾನ್ಮಾರ್ ಸರಕಾರದ ವಕ್ತಾರ ಜಾವ್ ಹಟಯ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News