ಐಎಂಎಫ್ ಪ್ರಥಮ ಮಹಿಳಾ ಆರ್ಥಿಕ ತಜ್ಞೆಯಾಗಿ ಗೀತಾ ಗೋಪಿನಾಥ್ ಅಧಿಕಾರ ಸ್ವೀಕಾರ

Update: 2019-01-08 16:24 GMT

ವಾಶಿಂಗ್ಟನ್,ಜ.8: ಭಾರತೀಯ ಸಂಜಾತೆ ಮೈಸೂರಿನಲ್ಲಿ ಜನಿಸಿದ ಗೀತಾ ಗೋಪಿನಾಥ್ ಅಂತರ್‌ರಾಷ್ಟ್ರೀಯ ಹಣಕಾಸು ಸಂಸ್ಥೆಯ ಮುಖ್ಯ ಆರ್ಥಿಕ ತಜ್ಞೆಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಆಮೂಲಕ ಈ ಸ್ಥಾನಕ್ಕೇರಿದ ಮೊದಲ ಮಹಿಳೆ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. ಭಾರತೀಯ ರಿಸರ್ವ್ ಬ್ಯಾಂಕ್‌ನ ಮಾಜಿ ಗವರ್ನರ್ ರಘುರಾಮ್ ರಾಜನ್ ನಂತರ ಐಎಂಎಫ್‌ನಲ್ಲಿ ಆರ್ಥಿಕ ತಜ್ಞರ ಸ್ಥಾನವನ್ನು ಅಲಂಕರಿಸಿದ ಎರಡನೇ ಭಾರತೀಯ ಪ್ರಜೆ ಎಂಬ ಹೆಗ್ಗಳಿಕೆಗೂ ಗೀತಾ ಪಾತ್ರರಾಗಿದ್ದಾರೆ. ಹಾರ್ವರ್ಡ್ ವಿಶ್ವವಿದ್ಯಾನಿಲಯದ ಅಂತರ್‌ರಾಷ್ಟ್ರೀಯ ಅಧ್ಯಯನ ಮತ್ತು ಆರ್ಥಿಕತೆಯ ಜಾನ್ ಝ್ವಾನ್‌ ಸ್ಟ್ರಾ ಉಪನ್ಯಾಸಕಿಯಾಗಿರುವ ಗೀತಾ ಐಎಂಎಫ್‌ನಲ್ಲಿ ಮೌರಿಸ್ ಆಬ್ಸ್‌ಟ್‌ಫೆಲ್ಡ್ ಅವರ ಜಾಗವನ್ನು ತುಂಬಲಿದ್ದಾರೆ. ಗೀತಾ ಗೋಪಿನಾಥ್ ನೇಮಕವನ್ನು ಕಳೆದ ಅಕ್ಟೋಬರ್ ಒಂದರಂದು ಘೊಷಿಸಿದ್ದ ಐಎಂಎಫ್ ವ್ಯವಸ್ಥಾಪನಾ ನಿರ್ದೇಶಕ ಕ್ರಿಸೀನ್ ಲೆಗರ್ಡೆ, ಗೀತಾ ಜಗತ್ತಿನ ಅತ್ಯದ್ಭುತ ಅರ್ಥಶಾಸ್ತ್ರಜ್ಞರಲ್ಲಿ ಒಬ್ಬರಾಗಿದ್ದು, ಅದ್ಭುತ ಶೈಕ್ಷಣಿಕ ಜ್ಞಾನವನ್ನು ಹೊಂದಿದ್ದಾರೆ. ಅವರು ಅಗಾಧವಾದ ಅಂತರ್‌ರಾಷ್ಟ್ರೀಯ ಅನುಭವವನ್ನೂ ಹೊಂದಿದ್ದಾರೆ ಎಂದು ವಿವರಿಸಿದ್ದರು.

ಈ ಕುರಿತು ಹಾರ್ವರ್ಡ್ ಗೆಝೆಟ್‌ಗೆ ನೀಡಿದ ಸಂದರ್ಶನದಲ್ಲಿ, ಐಎಂಎಫ್‌ಗೆ ತನ್ನ ನೇಮಕ ಅಪೂರ್ವ ಗೌರವವಾಗಿದೆ ಎಂದು ವ್ಯಾಖ್ಯಾನಿಸಿದ್ದಾರೆ. ಇದಕ್ಕಾಗಿ ಲೆಗರ್ಡೆಯನ್ನು ಅಭಿನಂದಿಸಿರುವ ಗೀತಾ, ಈ ಹಿಂದೆಯೂ ಉನ್ನತ ಸ್ಥಾನಗಳಿಗೆ ಅನೇಕ ಪ್ರಬಲ ಮತ್ತು ಅರ್ಹ ಮಹಿಳೆಯರು ಇದ್ದರು. ಆದರೆ ಈ ನಿರ್ಧಾರವನ್ನು ತೆಗೆದುಕೊಳ್ಳಲು ಲೆಗರ್ಡೆ ಬರಬೇಕಾಯಿತು ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News