ಕರಾವಳಿ ರಂಗಾಯಣಕ್ಕೆ ಮೈಮ್ ರಮೇಶ್
ಮಂಗಳೂರು, ಜ.8: ಉಡುಪಿಯಲ್ಲಿ ಸ್ಥಾಪಿಸಲು ಉದ್ದೇಶಿಸಿದ ಕರಾವಳಿ ರಂಗಾಯಣ ನಿರ್ದೇಶಕರಾಗಿ ಮೈಸೂರು ರಂಗಾಯಣ ರೆಪರ್ಟರಿಯ ಹಿರಿಯ ಕಲಾವಿದ, ರಂಗ ನಿರ್ದೇಶಕ ಮೈಮ್ ರಮೇಶ್ ಹೆಸರು ಮಂಚೂಣಿಯಲ್ಲಿದೆ.
ತಡವಾಗಿಯಾದರೂ ಕರಾವಳಿಯ ರಂಗಾಯಣವನ್ನು ಉಡುಪಿಯಲ್ಲಿ ಸ್ಥಾಪಿಸಲು ರಾಜ್ಯ ಸರಕಾರ ನಿರ್ಧರಿಸಿದ್ದು, ನಿರ್ದೇಶಕನ ಸ್ಥಾನಕ್ಕೆ ಮೂರು ಮಂದಿ ರಂಗಕರ್ಮಿಗಳ ಪಟ್ಟಿ ಸಿದ್ಧವಾಗಿದೆ. ಬಿ.ವಿ.ಕಾರಂತರು 1989ರಲ್ಲಿ ಮೈಸೂರಿನಲ್ಲಿ ರಂಗಾಯಣ ಸ್ಥಾಪಿಸಿದಾಗ ಆರಂಭದಲ್ಲಿಯೇ ರಂಗಾಯಣದ ನಾಲ್ಕು ರೆಪರ್ಟರಿಗಳನ್ನು ಸ್ಥಾಪಿಸುವ ಉದ್ದೇಶ ಹೊಂದಿದ್ದರು. ಅವುಗಳೆಂದರೆ, ಮೈಸೂರು ರಂಗಾಯಣ, ಕರಾವಳಿ ರಂಗಾಯಣ, ಮಲೆನಾಡು ರಂಗಾಯಣ, ಮತ್ತು ಹೈದರಾಬಾದ್-ಕರ್ನಾಟಕ ರಂಗಾಯಣ. ಅವುಗಳನ್ನು ಸ್ಥಾಪಿಸುವ ಮೂಲಕ ಪ್ರಾದೇಶಿಕ ಭಾಷೆ ಮತ್ತು ಸಂಸ್ಕೃತಿಯ ಸೊಗಡನ್ನು ಜೀವಂತವಾಗಿಡುವ ಪ್ರಯತ್ನ ಇದಾಗಿದೆ. ಶಿವಮೊಗ್ಗ, ಧಾರವಾಡ, ಮತ್ತು ಕಲಬುರಗಿ ರಂಗಾಯಣ ಕೇಂದ್ರಗಳು ಈಗಾಗಲೇ ಕಾರ್ಯಾರಂಭ ಮಾಡಿವೆ. ಕರಾವಳಿಯ ರಂಗಾಯಣವನ್ನು ಉಡುಪಿಯಲ್ಲಿ ಸ್ಥಾಪಿಸಿಲು ರಂಗಾಯಣ ಸಂಬಂಧಿಸಿದ ರಂಗಸಮಾಜ ನಿರ್ಧರಿಸಿದೆ.
ಬಿ.ವಿ.ಕಾರಂತರ ಹುಟ್ಟೂರು ಬಂಟ್ವಾಳದ ಮಂಚಿ ಅಥವಾ ಮಂಗಳೂರಿನಲ್ಲಿ ಕರಾವಳಿ ರಂಗಾಯಣ ಸ್ಥಾಪಿಸುವ ಇರಾದೆ ಸರಕಾರದಾಗಿತ್ತು. ಈ ನಿಟ್ಟಿನಲ್ಲಿ ಕನ್ನಡ ಸಂಸ್ಕೃತಿ ಇಲಾಖೆಯ ನಿರ್ದೇಶಕರು ಕಳೆದ ವರ್ಷ ಪಿಲಕುಳ ಮತ್ತು ಕುಕ್ಕಾಜೆ-ಮಂಚಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದರು.
ದ.ಕ. ಜಿಲ್ಲೆಯ ರಂಗಾಸಕ್ತರಿಂದ ಹೆಚ್ಚಿನ ಒತ್ತಾಯ ಇಲ್ಲದಿರುವ ಹಿನ್ನೆಲೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹೊಂದಿದ್ದ ಸಚಿವೆ ಜಯಮಾಲ ಕರಾವಳಿ ರಂಗಾಯಣಕ್ಕೆ ಉಡುಪಿಯನ್ನು ಆಯ್ಕೆ ಮಾಡಿದ್ದರು. ಆದರೆ ನಿರ್ದೇಶಕನ ಸ್ಥಾನಕ್ಕೆ ಮೂಲತಃ ಮಂಗಳೂರಿನವರಾದ ಮೈಮ್ ರಮೇಶ್ ಹೆಸರು ಮಂಚೂಣಿಯಲ್ಲಿದೆ. ಇವರೊಂದಿಗೆ ಸುರೇಶ್ ಆನಗಳ್ಳಿ ಮತ್ತು ವಾಲ್ಟರ್ ಹೆಸರುಗಳೂ ಇವೆ.
ಸುಮಾರು 48 ವರ್ಷಗಳಿಂದ ಕಾಸರಗೋಡು, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ರಂಗಭೂಮಿಯಲ್ಲಿ ಸಕ್ರಿಯರಾಗಿದ್ದ ಮೈಮ್ ರಮೇಶ್ 1989ರಿಂದ ಮೈಸೂರು ರಂಗಾಯಣದಲ್ಲಿ ಕಲಾವಿದ ನಿರ್ದೇಶಕರಾಗಿದ್ದಾರೆ.
‘ಥ್ಯಾಂಕ್ಯೂ ಮಿಸ್ಟರ್ ಗ್ಲಾಡ್’, ‘ಧರ್ಮಾಪುರಿಯ ಶ್ವೇತವೃತ್ತ’, ‘ಡಾಲ್‌ಹೌಸ್’, ‘ಸೀತಾಮಾಧವನ ಸಲ್ಲಾಪ’, ‘ತ್ರಿ ಪೆನ್ನಿ ಓಪೇರಾ’, ‘ಕತ್ತಲೆದಾರಿದೊರೆ’ ಇವರಿಗೆ ಹೆಸರು ತಂದು ಕೊಟ್ಟ ನಾಟಕಗಳು. ಮಂಗಳೂರಿನಲ್ಲಿ ‘ಅಭಿವ್ಯಕ್ತಿ’, ಅರಸೀಕೆರೆಯಲ್ಲಿ ‘ಅಭಿನಯ’ ಎಂಬ ರಂಗತಂಡವನ್ನು ಹುಟ್ಟುಹಾಕಿದರು. ಮೈಸೂರಿನಲ್ಲಿ ಪ್ರಾರಂಭಿಸಿದ ಜಿಪಿಐಆರ್ ರಂಗ ಸಂಸ್ಥೆಯಿಂದ ಸಾಕಷ್ಟು ಯುವಪ್ರತಿಭೆಗಳು ಇಂದು ಸಿನಿಮಾ, ಕಿರುತೆರೆಯಲ್ಲಿ ಹೆಸರು ಮಾಡುತ್ತಿವೆ.
ಯಕ್ಷಗಾನ ಕಲಾವಿದನಾಗಿ ತಮ್ಮ 12ನೇ ವಯಸ್ಸಿನಿಂದಲೇ ಬಣ್ಣ ಹಚ್ಚಲು ಶುರು ಮಾಡಿದ ಮೈಮ್ ರಮೇಶ್ ತುಳು ರಂಗಭೂಮಿ ಜತೆಗೆ ಆಧುನಿಕ ರಂಗಭೂಮಿಯಲ್ಲೂ ತಮ್ಮದೇ ಆದ ಛಾಪು ಮೂಡಿಸಿರುವ ಅಪರೂಪದ ಕಲಾವಿದರು. ರಂಗಕರ್ಮಿ ಪ್ರಸನ್ನ ಅವರು ಬೆಂಗಳೂರಿನಲ್ಲಿ ಆರಂಭಿಸಿದ ‘ಸಮುದಾಯ’ದಲ್ಲೂ ಮೈಮ್ ರಮೇಶ್ ಗುರುತಿಸಿಕೊಂಡಿದ್ದಾರೆ.
ಇಲ್ಲಿಯವರೆಗೂ 60ಕ್ಕೂ ಹೆಚ್ಚು ನಾಟಕಗಳನ್ನು ನಿರ್ದೇಶನ ಮಾಡಿದ್ದಾರೆ. ರಂಗಾಯಣದ ಬಹುತೇಕ ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಶೇಕ್ಸ್ ಪಿಯರ್ ರಚನೆಯ ಜೂಲಿಯಸ್ ಸೀಸರ್, ಮ್ಯಾಕ್‌ಬೆತ್, ಓಥೆಲೋ, ಕಿಂಗ್‌ಲಿಯರ್ ಹಾಗೂ ಹ್ಯಾಮ್ಲೆಟ್ ನಾಟಕಗಳಲ್ಲಿ ಅಭಿನಯಿಸಿದ ಹೆಗ್ಗಳಿಕೆ ಇವರದು. 2016ರಲ್ಲಿ ಚಂದನ ಪ್ರಶಸ್ತಿ ಪಡೆದಿದ್ದರು. ದಕ್ಷಿಣ ಭಾರತದ ಶ್ರೇಷ್ಠ ಪ್ರಶಸ್ತಿಗಳಲ್ಲಿ ಒಂದಾದ ‘ಚೆನ್ನೈ ಕಲೈಸೆಲ್ವಂ’ ಪ್ರಶಸ್ತಿಯೂ ರಮೇಶ್ ಅವರಿಗೆ ಒಲಿದಿದೆ.