ಭಾರತ ಬಂದ್ : ತೊಕ್ಕೊಟ್ಟುವಿನಲ್ಲಿ ಸಿಐಟಿಯುನಿಂದ ಪ್ರತಿಭಟನಾ ಸಭೆ
ಉಳ್ಳಾಲ, ಜ. 8: ಕೇಂದ್ರ ಸರಕಾರದ ನೀತಿಗಳಿಂದಾಗಿ ರೈತರು, ಕಾರ್ಮಿಕರು, ಜನರಿಗೆ ಅಭಿವೃದ್ಧಿ ಸಾಧ್ಯವಾಗದೆ ದೇಶಕ್ಕೆ ಬಹಳ ಹಿನ್ನೆಡೆಯಾಗಿದೆ. ಕೇಂದ್ರ ಜಾರಿಗೊಳಿಸಿದ ಜಿಎಸ್ ಟಿಯಿಂದಾಗಿ ದೇಶಾದ್ಯಂತ ಎಲ್ಲಾ ಚಟುವಟಿಕೆಗಳು ನಿಂತು ಹೋಗಿದೆ. ಯುವಸಮುದಾಯವೂ ಉದ್ಯೋಗವಿಲ್ಲದೆ ಸರ್ಟಿಫಿಕೇಟು ಹಿಡಿದು ಬೀದಿ ಸುತ್ತುವಂತಹ ಸ್ಥಿತಿ ನಿರ್ಮಾಣವಾಗಿದೆ ಎಂದು ಸಿಪಿಐಎಂ ಉಳ್ಳಾಲ ವಲಯ ಕಾರ್ಯದರ್ಶಿ ಕೃಷ್ಣಪ್ಪ ಸಾಲ್ಯಾನ್ ಹೇಳಿದರು.
ಅವರು ತೊಕ್ಕೊಟ್ಟು ಜಂಕ್ಷನ್ನಿನಲ್ಲಿ ಭಾರತ್ ಬಂದ್ ಪ್ರಯುಕ್ತ ಸಿಐಟಿಯು ಉಳ್ಳಾಲ ವಲಯ ಹಮ್ಮಿಕೊಂಡ ಪ್ರತಿಭಟನಾ ಮೆರವಣಿಗೆ ಹಾಗೂ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಚುನಾವಣೆ ಸಂದರ್ಭ ನೀಡಿದ ಭರವಸೆ ಎಲ್ಲವೂ ಹುಸಿಯಾಗಿದೆ. ಕೆಲಸವಿಲ್ಲದೆ ಬೀದಿ ಸುತ್ತುವ ಯುವಕರನ್ನು ದೇಶದ ಒಳಗಿನ, ವಿದೇಶದ ಭಯೋತ್ಪಾದಕ ಶಕ್ತಿಗಳು ತಮ್ಮತ್ತ ಸೇರಿಸಿಕೊಂಡು ದೇಶವಿರೋಧಿ ಚಟುವಟಿಕೆಗಳಿಗೆ ಉಪಯೋಗಿಸುತ್ತಿದೆ. ಸರಕಾರಿ ಕಚೇರಿಗಳಲ್ಲಿ ಖಾಲಿಯಿರುವ ಲಕ್ಷಾಂತರ ಹುದ್ದೆಗಳನ್ನು ತುಂಬಿಸುವ ಕೆಲಸವಾಗುತ್ತಿಲ್ಲ. ಅಧಿಕಾರ ಸಾಧಿಸಲು ವಿವಿಧ ಭರವಸೆಗಳನ್ನು ನೀಡಿದರೂ ವಿದೇಶದ ಕಪ್ಪು ಹಣವನ್ನು ತಂದಿಲ್ಲ, ಉದ್ಯೋಗ ಸೃಷ್ಟಿಯೂ ಇಲ್ಲ, ಬೆಲೆ ಏರಿಕೆ ಕಡಿಮೆಯಾಗಿಲ್ಲ, ರೈತರಿಗೆ ಸಹಾಯ, ಸಬ್ಸಿಡಿಯೂ ಇಲ್ಲದಂತಹ ಸ್ಥಿತಿ ಇದೆ. ಪ್ರಧಾನಿ ಮೋದಿ ವಿದೇಶ ತಿರುಗುತ್ತಲೇ ದೇಶದಲ್ಲಿ ಇದ್ದಂತಹ ಹಣವನ್ನು ಖಾಲಿ ಮಾಡಿದರು. ಕಪ್ಪು ಹಣ ದೇಶದ ಒಳಗೆ ಇದೆ ಎಂದು ಕಾರಣ ನೀಡಿ ನೋಟು ಅಮಾನ್ಯಗೊಳಿಸುವ ಮೂಲಕ ಬಡವರನ್ನು ಇಕ್ಕಟ್ಟಿನಲ್ಲಿ ಸಿಲುಕಿಸಿದರು. ಬ್ಯಾಂಕ್ ಎದುರು ನೋಟು ಬದಲಾವಣೆಗೆಂದು ಸಾಲಿನಲ್ಲಿ ನಿಂತ 17 ಮಂದಿ ಸತ್ತವರು ಎಲ್ಲರೂ ಬಡವರಾಗಿದ್ದಾರೆ. ಇದೆಲ್ಲವನ್ನು ಖಂಡಿಸಿ ದೇಶವ್ಯಾಪಿ ಮುಷ್ಕರವನ್ನು ವಿವಿಧ ಕಾರ್ಮಿಕ ಸಂಘಟನೆಗಳು ಸೇರಿಸಿಕೊಂಡು ಇಂದು ನಡೆಸಲಿದೆ ಎಂದರು.
ಸಿಐಟಿಯು ಮುಖಂಡ ಜಯಂತ್ ನಾಯ್ಕ್ ಮಾತನಾಡಿ `ನಷ್ಟದ ಹಾದಿಯಲ್ಲಿರುವ ಬ್ಯಾಂಕ್ ಗಳನ್ನು ವಿಲೀನಗೊಳಿಸುವ ಮೂಲಕ ಯುವ ಸಮುದಾಯ ದವರಿಗೆ ಕೆಲಸವಿಲ್ಲದಂತೆ ಕೇಂದ್ರ ಸರಕಾರ ಮಾಡಿದೆ. ಲಕ್ಷಾಂತರ ಕೈಗಾರಿಕೆಗಳನ್ನು ಬಂದ್ ನಡೆಸಿ ಕಾರ್ಮಿಕರನ್ನು ಬೀದಿಗೆ ಹಾಕಿದೆ. ಐದು ಲಕ್ಷ ಮಂದಿ ಕೆಲಸವಿಲ್ಲದೆ ಬೀದಿಯಲ್ಲಿದ್ದಾರೆ. ವ್ಯಾಪಾರಸ್ಥರು ವ್ಯಾಪಾರವಿಲ್ಲದೆ ಜೀವನ ನಿರ್ವಹಣೆಗೆ ಕಷ್ಟಪಡುತ್ತಿದ್ದಾರೆ. ದೇಶಾದ್ಯಂತ ಎಫ್ ಬಿಎ ಜಾರಿಗೆ ತಂದರು, ದೊಡ್ಡ ಮಹಲುಗಳಲ್ಲಿ ಚಿಲ್ಲರೆ ವ್ಯಾಪಾರವೂ ಬಂತು. ಜನರ ಆಕರ್ಷಣೆಗೆ ಅವರು ಕಡಿಮೆ ರೇಟುಗಳಲ್ಲಿ ಸಾಮಾನು ನೀಡುತ್ತಾರೆ. ಇದರಿಂದ ಸ್ಥಳೀಯ ವ್ಯಾಪಾರಿಗಳಿಗೆ ವ್ಯಾಪಾರವೇ ಇಲ್ಲ. ನೋಟು ಅಮಾನ್ಯೀಕರಣದ ಮೂಲಕ ವೃದ್ಧರು ಕೂಡಿಟ್ಟ, ಹೆಣ್ಮಕ್ಕಳ ಮದುವೆಗಾಗಿ ಇಟ್ಟ ನೋಟುಗಳನ್ನು ರಾತ್ರೋರಾತ್ರಿ ಅಮಾನ್ಯಗೊಳಿಸಿ ಬಡವರನ್ನು ಸಂಕಷ್ಟಕ್ಕೆ ಸಿಲುಕಿಸಲಾಯಿತು. ನೋಟು ಅಮಾನ್ಯದಿಂದ ಕೇಂದ್ರ ಸರಕಾರ ಸಾಧಿಸಿದ್ದಾದರೂ ಏನು? ಎಂದು ಪ್ರಶ್ನಿಸಿದರು.
ಸಿಐಟಿಯು ಮುಖಂಡರುಗಳಾದ ಪದ್ಮಾವತಿ ಯಸ್ ಶೆಟ್ಟಿ, ಬೀಡಿ ಸಂಘ ಕೋಶಾಧಿಕಾರಿ ವಿಲಾಸಿನಿ ತೊಕ್ಕೊಟ್ಟು , ಮಹಾಬಲ ಬಟ್ಟೆದಡಿ, ನಿತಿನ್ ಕುತ್ತಾರ್ , ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ಜನಾರ್ದನ ಕುತ್ತಾರ್, ಚಂದ್ರಹಾಸ್ ಪಿಲಾರ್, ರೋಹಿದಾಸ್ ಭಟ್ನಗರ, ಭವ್ಯ ಕುತ್ತಾರು, ಬೇಬಿ ತೊಕ್ಕೊಟ್ಟು, ಶೇಖರ ಕುಂದರ್ ಕುತ್ತಾರು, ಚಂದ್ರಹಾಸ್ ಕುತ್ತಾರು, ಸದಾಶಿವ ಕುತ್ತಾರು, ಜಯರಾಮ, ಕೇಶವ, ಸಂಕೇತ್, ಕುಂಞರಾಮ ಪಿಲಾರು, ರಾಮಚಂದ್ರ ಪಜೀರ್ ಉಪಸ್ಥಿತರಿದ್ದರು.