ಟೋಲ್ ವಿನಾಯಿತಿಗೆ ಆಗ್ರಹಿಸಿ ಧರಣಿ ಎರಡನೇ ದಿನಕ್ಕೆ: ಉಪತಹಶೀಲ್ದಾರ್ ಭೇಟಿ

Update: 2019-01-08 17:20 GMT

ಪಡುಬಿದ್ರಿ, ಜ. 8: ಕರ್ನಾಟಕ ರಕ್ಷಣಾ ವೇದಿಕೆ ನೇತೃತ್ವದಲ್ಲಿ ಪಡುಬಿದ್ರಿಯ ಟೆಂಪೋ ನಿಲ್ದಾಣದ ಬಳಿ ಸ್ಥಳೀಯ ವಾಹನಗಳಿಗೆ ಟೋಲ್ ವಿನಾಯಿತಿ ನೀಡಬೇಕು ಎಂದು ಆಗ್ರಹಿಸಿ ಹಾಗೂ ನವಯುಗ ಕಂಪೆನಿಯ ಅವೈಜ್ಞಾನಿಕ ಕಾಮಗಾರಿ ನಡೆಸುತ್ತಿರುವ ಅನಿರ್ಧಿಷ್ಠಾವಧಿ ಧರಣಿ ಎರಡನೇ ದಿನಕ್ಕೆ ಕಾಲಿಟ್ಟಿದೆ.

ಧರಣಿ ನಿರತ ಸ್ಥಳಕ್ಕೆ ಮಂಗಳವಾರ ದಲಿತ ಸಂಘರ್ಷ ಸಮಿತಿಯು ಬೆಂಬಲ ಸೂಚಿಸಿ ಧರಣಿಯಲ್ಲಿ ನೂರಾರು ಮಂದಿ ಪಾಲ್ಗೊಂಡರು. ಕಾಪು ಉಪತಹಸೀಲ್ದಾರ್ ಕಲ್‍ಮುರುಪ್ಪ ಆಗಮಿಸಿ ಮನವಿ ಸ್ವೀಕರಿಸಿದರು. ಮನವಿ ಸ್ವೀಕರಿಸಿದ ಅವರು, ಜಿಲ್ಲಾಧಿಕಾರಿಗಳಿಗೆ ಮನವಿಯ ಬಗ್ಗೆ ಗಮನಕ್ಕೆ ತರುವುದಾಗಿ ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕರವೇ ಜಿಲ್ಲಾಧ್ಯಕ್ಷ ಅನ್ಸಾರ್ ಅಹಮದ್, ಬೇಡಿಕೆ ಈಡೇರುವವರೆಗೆ ಯಾವುದೇ ಕಾರಣಕ್ಕೂ ಧರಣಿಯನ್ನು ಹಿಂದೆಗೆದುಕೊಳ್ಳುವುದಿಲ್ಲ. ಪಡುಬಿದ್ರಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ವಾಹನಗಳಿಗೂ ಟೋಲ್‍ನಲ್ಲಿ ವಿನಾಯಿತಿ ನೀಡಬೇಕು. ಹಾಗೂ ಹೆದ್ದಾರಿ ಚತುಷ್ಪಥ ಕಾಮಗಾರಿ ಕೂಡಲೇ ಪೂರ್ಣಗೊಳಿಸಬೇಕು ಎಂದು ಆಗ್ರಹಿಸಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ಶಶಿಕಾಂತ್ ಪಡುಬಿದ್ರಿ, ದಸಂಸ ಲೋಕೇಶ್ ಕಂಚಿನಡ್ಕ, ಉದ್ಯಮಿ ಸಂತೋಷ್ನ ಶೆಟ್ಟಿ, ಗ್ರಾಮ ಪಂಚಾಯಿತಿ ಸದಸ್ಯರಾದ ಬುಡಾನ್ ಸಾಹೇಬ್, ಕರುಣಾಕರ, ಹಸನ್ ಬಾವ, ಕರವೇ ತಾಲೂಕು ಅಧ್ಯಕ್ಷ ನಿಝಾಮ್ ಅಹಮದ್, ಉಡುಪಿ ಜಿಲ್ಲಾ ಉಪಾಧ್ಯಕ್ಷ ಆಸೀಫ್ ಆಪದ್ಬಾಂಧವ, ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಉಪಾಧ್ಯಕ್ಷ ಎಂ.ಎಚ್.ಅಬ್ದುಲ್ ಖಾದರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News