ಇರಾನ್‌ ನಲ್ಲಿ ಬಂಧಿತ ಭಟ್ಕಳದ 18 ಮೀನುಗಾರರಿಗೆ ಬಿಡುಗಡೆ ಭಾಗ್ಯ

Update: 2019-01-08 17:36 GMT

ಭಟ್ಕಳ, ಜ.8: ದುಬೈಯಿಂದ ಮೀನುಗಾರಿಕೆಗೆ ತೆಳಿದ್ದ ಉತ್ತರಕನ್ನಡ ಜಿಲ್ಲೆಯ ಭಟ್ಕಳ, ಕುಮಟಾ, ಮುರುಡೇಶ್ವರ, ಮಂಕಿಯ ಸುಮಾರು 18 ಮಂದಿ ಮೀನುಗಾರರನ್ನು ಇರಾನ್ ಗಡಿ ಪ್ರವೇಶಿಸಿದ್ದ ಆರೋಪದಲ್ಲಿ ಕಳೆದ 8 ತಿಂಗಳ ಹಿಂದೆ ಜುಲೈ 27ರಂದು ಬಂಧಿಸಿದ್ದ ಇರಾನ್ ಸರಕಾರ ದುಬೈ ಕರ್ನಾಟಕ ಫೋರಂನ ನಿರಂತರ ಪ್ರಯತ್ನದಿಂದಾಗಿ ಮಂಗಳವಾರ ಅವರನ್ನು ಬಿಡುಗಡೆಗೊಳಿಸಿದೆ ಎಂದು ಅಧಿಕೃತ ಮಾಹಿತಿ ಲಭ್ಯವಾಗಿದೆ.

ಬಿಡುಗಡೆಗೊಂಡ ಉತ್ತರ ಕನ್ನಡ ಮೀನುಗಾರರನ್ನು ಮುರುಡೇಶ್ವರದ ಇಬ್ರಾಹೀಂ ಮುಲ್ಲಾ ಫಖೀರಾ, ಮುಹಮ್ಮದ್ ಅನ್ಸಾರ್ ಇಸ್ಮಾಯೀಲ್ ಬಾಪು, ನಯೀಮ್ ಹಸನ್ ಭಾಂಡಿ, ಭಟ್ಕಳ ತಾಲೂಕಿನ ಹೆಬಳೆ ಪಂಚಾಯತ್ ವ್ಯಾಪ್ತಿಯ ತೆಂಗಿನಗುಂಡಿಯ ಖಲೀಲ್ ಪಾನಿಬುಡು, ಉಸ್ಮಾನ್ ಬೊಂಬಾಯಿಕರ್ ಮುಹಮ್ಮದ್ ಇಸ್ಹಾಖ್, ಅಬ್ದುಲ್ ಮುಹಮ್ಮದ್ ಹುಸೇನ್, ಮುಹಮ್ಮದ್ ಷರೀಫ್ ಯೂಸುಫ್ ಬಾಪು, ಅಬ್ದುಲ್ಲಾ ಸುಲೈಮಾನ್ ಡಾಂಗಿ, ಕುಮಟಾ ತಾಲೂಕಿನ ಅತಿಖ್ ಸುಲೈಮಾನ್ ಧಾರು, ಯಾಖೂಬ್ ಇಸ್ಮಾಯೀಲ್ ಶಮು, ಇಲ್ಯಾಸ್ ಅಂಬಾಡಿ, ಇಲ್ಯಾಸ್ ಘರಿ, ಇನಾಯತ್ ಅಬ್ದುಲ್ ಖಾದಿರ್ ಶಮ್ಸು, ಖಾಸಿಮ್ ಶೇಖ್, ಅಜ್ಮಲ್ ಮೂಸಾ ಶಮು ಎಂದು ತಿಳಿದು ಬಂದಿದ್ದು, ಇವರ ಬಿಡುಗಡೆಯಿಂದಾಗಿ ಕಳೆದ 8 ತಿಂಗಳಿಂದ ಆತಂಕದಲ್ಲಿದ್ದ ಕುಟುಂಬಗಳಲ್ಲಿ ಸಂತಸ ಮನೆಮಾಡಿದೆ.

ಕಳೆದ ಅಕ್ಟೋಬರ್ ತಿಂಗಳ 11ರಂದು ದುಬೈ ಮೂಲಕ ಮೀನುಗಾರಿಕೆಗೆ ತೆರಳಿದ್ದ ಉತ್ತರಕನ್ನಡ ಜಿಲ್ಲೆಯ 18 ಮೀನುಗಾರರು ಮಹಾರಾಷ್ಟ್ರದ ಐದು ಮಂದಿ ಹಾಗೂ ದುಬೈಯ 5 ಮೀನುಗಾರರನ್ನು ಅಕ್ರಮ ಗಡಿ ಪ್ರವೇಶದ ಆರೋಪದಲ್ಲಿ ಇರಾನ್ ಸರಕಾರ ಬಂಧಿಸಿ ಗೃಹಬಂಧನದಲ್ಲಿ ಇರಿಸಿತ್ತು. ಅಂದಿನಿಂದ ಬಂಧಿತ ಮೀನುಗಾರರ ಕುಟುಂಬದಲ್ಲಿ ಆತಂಕದ ಛಾಯೆ ಮನೆಮಾಡಿತ್ತು. ಇದೀಗ ದುಬೈಯ ಕರ್ನಾಟಕ ಎನ್.ಆರ್.ಐ. ಫೋರಂ ಸಂಘಟನೆಯ ನಿರಂತರ ಪ್ರಯತ್ನದಿಂದ ಎಲ್ಲ ಮೀನುಗಾರರಿಗೆ ಬಿಡುಗಡೆಯ ಭಾಗ್ಯ ಲಭಿಸಿದೆ.

ಈ ಕುರಿತಂತೆ ಭಟ್ಕಳದ ಮಜ್ಲಿಸೆ ಇಸ್ಲಾಹ್ ತಂಝೀಮ್ ಸಂಸ್ಥೆ ಅಕ್ಟೋಬರ್ 12 ರಂದು ಮೀನುಗಾರರ ಕುಟುಂಬದವರೊಂದಿಗೆ ಮಾತುಕತೆ ನಡೆಸಿ ಬಳಿಕ ಮೀನುಗಾರರನ್ನು ಬಿಡುಗಡೆಗೊಳಿಸುವಂತೆ ಕೇಂದ್ರ ಸಚಿವೆ ಸುಶ್ಮಾ ಸ್ವರಾಜ್ ಅವರನ್ನು ಆಗ್ರಹಿಸಿ ಮನವಿ ಸಲ್ಲಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News