×
Ad

ಅನ್ಯಧರ್ಮಗಳನ್ನೂ ತಿಳಿದುಕೊಂಡರೆ ಸಾಮರಸ್ಯ ಖಂಡಿತ: ಉಮಾನಾಥ ಕೋಟ್ಯಾನ್

Update: 2019-01-08 23:15 IST

ಮೂಡುಬಿದಿರೆ, ಜ. 8 'ತನಗೆ ತಾನೇ ಸ್ಪರ್ಧಿಯಾಗಿ ವ್ಯಕ್ತಿತ್ವ ವೃದ್ದಿಸಿಕೊಳ್ಳುವಂತಾದಾಗ ನಿಜವಾದ ಗೆಲುವು ಪ್ರಾಪ್ತಿ.  ಪ್ರತಿಯೊಬ್ಬರೂ ತನ್ನ ಧರ್ಮವನ್ನು ತಿಳಿದು ಆಚರಿಸುವಂತೆಯೇ ಅನ್ಯಧರ್ಮಗಳನ್ನೂ ತಿಳಿದುಕೊಂಡರೆ ಸಾಮಾಜಿಕ ಸಾಮರಸ್ಯ ನೆಲೆಯಾಗಲು ಸಾಧ್ಯ' ಎಂದು ಶಾಸಕ ಉಮಾನಾಥ  ಕೋಟ್ಯಾನ್ ಅಭಿಪ್ರಾಯಪಟ್ಟರು.

`ಪ್ರವಾದಿ ಮುಹಮ್ಮದ್ (ಸ) ಮಾನವ ಕುಲದ ಶ್ರೇಷ್ಠ ಮಾರ್ಗದರ್ಶಕ' ಶೀರ್ಷಿಕೆಯಡಿ ರಾಜ್ಯವ್ಯಾಪ್ತಿಯ ಸೀರತ್ ಅಭಿಯಾನದ ಪ್ರಯುಕ್ತ ಏರ್ಪಡಿಸಲಾದ ಪ್ರೌಢ-ಪದವಿ ಪೂರ್ವ ವಿದ್ಯಾರ್ಥಿಗಳಿಗೆ ನಡೆದ ಭಾಷಣ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು. ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ  ಸೋಮವಾರ ನಡೆದ ಈ ಸಮಾರಂಭದ ಅಧ್ಯಕ್ಷತೆಯನ್ನು ಸೀರತ್ ಅಭಿಯಾನ ಸ್ವಾಗತ ಸಮಿತಿಯ ದ.ಕ. ಜಿಲ್ಲಾಧ್ಯಕ್ಷ ಡಾ. ಸಿ.ಪಿ.ಹಬೀಬ್ ರಹ್ಮಾನ್ ವಹಿಸಿದ್ದರು.

ಶಾಂತಿ ಪ್ರಕಾಶನದ ವ್ಯವಸ್ಥಾಪಕ ಮುಹಮ್ಮದ್ ಕುಂಞಿ ಅಭಿನಂದನಾ ಭಾಷಣವನ್ನು ಮಾಡಿ 'ಪ್ರತಿಯೊಬ್ಬರೂ ತನ್ನನ್ನು ಮೊದಲು ಗೌರವಿಸಬೇಕು. ತನ್ನ ಗೌರವಕ್ಕೆ ಚ್ಯುತಿ ಬಾರದಂತೆ ನಡೆದುಕೊಳ್ಳುವವರಿಗೆ ಇತರರನ್ನೂ ಗೌರವಿಸು ಮನೋಭಾವ ರೂಢಿಯಾಗುತ್ತದೆ ಎಂದ ಅವರು, ಸಂಶಯದಿಂದ ಮುಕ್ತರಾದಾಗ, ಎಲ್ಲರಲ್ಲೂ ಎಲ್ಲದರಲ್ಲೂ ಒಳಿತನ್ನು ಕಾಣುವಂತಾದಾಗ ಸಮಸ್ಯೆಯೇ ಇರುವುದಿಲ್ಲ' ಎಂದು ಅವರು ಹೇಳಿದರು.

ಮುಖ್ಯಅತಿಥಿ, ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್ ಮಾತನಾಡಿ, ನಗು,ಸಂತೋಷ, ಪ್ರೀತಿ, ಅಸೂಯೆ ಇವುಗಳಲ್ಲಿ ಹೇಗೆ ವರ್ಗೀಕರಣ ಸಲ್ಲದೋ ಹಾಗೆಯೇ ನಂಬಿಕೆಗಳಲ್ಲೂ ವರ್ಗೀಕರಣ ಸಲ್ಲದು. ಇತರರ ನಂಬಿಕೆಗಳನ್ನು ಅಲ್ಲಗಳೆಯುವವರು ನಿಜಕ್ಕೂ ಅಪನಂಬಿಕೆ ಬಿತ್ತುವವರು ಮತ್ತು ಅಂಥವರು ಅಪಾಯಕಾರಿ' ಎಂದರು.

ಉದ್ಯಮಿ ಅಬುಲ್ ಅಲಾ ಪುತ್ತಿಗೆ, ಸಮಿತಿಯ ಮಾರ್ಗದರ್ಶಕ ಕೆ. ಎಂ. ಶರೀಫ್ ಉಪಸ್ಥಿತರಿದ್ದರು. ಅಮೀನ್ ಹನ್ಸನ್ ಸ್ವಾಗತಿಸಿ, ಪ್ರಸ್ತಾವನೆಗೈದರು. ಸಮಿತಿಯ ಸಂಚಾಲಕ ಹೈದರಾಲಿ ವಿಟ್ಲ ಬಹುಮಾನಿತರ ವಿವರ ನೀಡಿದರು. ಅಮಾನುಲ್ಲಾ ಖಾನ್ ತರೀಕೆರೆ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News