ನಾಪತ್ತೆಯಾದ ಏಳು ಮೀನುಗಾರರ ಪತ್ತೆಗೆ ಒತ್ತಾಯಿಸಿ ಪ್ರಧಾನಿಗೆ ಪೇಜಾವರ ಶ್ರೀ ಪತ್ರ

Update: 2019-01-10 14:28 GMT

ಉಡುಪಿ, ಜ.10: ಮಲ್ಪೆಯಿಂದ ಮೀನುಗಾರಿಕೆಗೆ ತೆರಳಿ ಕಳೆದ 26 ದಿನಗಳಿಂದ ನಾಪತ್ತೆಯಾಗಿರುವ ಏಳು ಮಂದಿ ಮೀನುಗಾರರ ಪತ್ತೆಗೆ ಶೀಘ್ರ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಶ್ರೀಪಾದರು ಪ್ರಧಾನಿ, ಕೇಂದ್ರ ಗೃಹ ಸಚಿವರು ಹಾಗೂ ರಕ್ಷಣಾ ಸಚಿವರಿಗೆ ಪತ್ರ ಬರೆದಿದ್ದಾರೆ.

ನಾಪತ್ತೆಯಾದ ಏಳು ಮಂದಿ ಮೀನುಗಾರರನ್ನು ಸುರಕ್ಷಿತವಾಗಿ ಮರಳಿ ಕರೆತರುವಲ್ಲಿ ಕೇಂದ್ರ ಸರಕಾರ ಉನ್ನತ ಮಟ್ಟದ ತನಿಖೆ ಕೈಗೊಂಡು, ಶೀಘ್ರವೇ ಪತ್ತೆ ಮಾಡಬೇಕೆಂದು ಪೇಜಾವರ ಶ್ರೀಗಳು ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ರಾಜನಾಥ ಸಿಂಗ್ ಹಾಗೂ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ರಿಗೆ ಇ-ಮೈಲ್ ಮೂಲಕ ಕಳುಹಿಸಿರುವ ಮನವಿ ಪತ್ರದಲ್ಲಿ ಒತ್ತಾಯಿಸಿದ್ದಾರೆ.

ಸಚಿವೆ ಜಯಮಾಲ ಹೇಳಿಕೆ: ಅರಬ್ಬಿಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿ ನಾಪತ್ತೆಯಾಗಿರುವ ಏಳು ಮಂದಿ ಮೀನುಗಾರರ ಶೋಧ ಕಾರ್ಯಕ್ಕೆ ಸರಕಾರ ಎಲ್ಲಾ ರೀತಿಯ ಕ್ರಮಗಳನ್ನು ಆದ್ಯತೆಯ ಮೇಲೆ ಕೈಗೊಂಡಿದೆ. ಅಲ್ಲದೇ ಈಗಾಗಲೇ ಮುಖ್ಯಮಂತ್ರಿಗಳು ಸಂತ್ರಸ್ತರ ಕುಟುಂಬಗಳಿಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ತಾತ್ಕಾಲಿಕವಾಗಿ ಒಂದು ಲಕ್ಷ ರೂ. ಪರಿಹಾರ ನೀಡುವುದಾಗಿ ಘೋಷಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನಾಪತ್ತೆಯಾದ ಮೀನುಗಾರರ ಸಮಗ್ರ ವಿವರಗಳನ್ನು ತಕ್ಷಣವೇ ಕಳುಹಿಸುವಂತೆ ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಜಯಮಾಲ ಪತ್ರಿಕೆಗಳಿಗೆ ಬಿಡುಗಡೆಗೊಳಿಸಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ನಾಪತ್ತೆಯಾಗಿರುವ ಮೀನುಗಾರರನ್ನು ಕಡಲ್ಗಳ್ಳರು ಅಥವಾ ಭಯೋತ್ಪಾದಕ ರು ಅಪಹರಿಸಿದ್ದಾರೆಂಬ ಮಾತುಗಳು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ಈ ವಿಷಯದ ಕುರಿತು ಈಗಾಗಲೇ ಕೇಂದ್ರ ಗೃಹ ಸಚಿವ ರೊಂದಿಗೆ ಮಾತನಾಡಿ ಹೆಚ್ಚಿನ ಶೋಧಕ್ಕೆ ವಿನಂತಿಸಿದ್ದಾರೆ. ಕರಾವಳಿ ರಕ್ಷಣಾ ಪಡೆಯೂ ಸೇರಿದಂತೆ ವಿವಿಧ ಸುರಕ್ಷತಾ ಪಡೆಗಳ ನೆರವನ್ನು ಪತ್ತೆ ಕಾರ್ಯದಲ್ಲಿ ಬಳಸಿಕೊಳ್ಳಲಾಗುತ್ತಿದೆ.

ಅಲ್ಲದೇ ನಾಪತ್ತೆಯಾದ ಮೀನುಗಾರರನ್ನು ಸುರಕ್ಷಿತವಾಗಿ ಕರೆತರುವ ತನಕವೂ ಶೋಧನಾ ಕಾರ್ಯ ಮುಂದುವರಿಯಲಿದೆ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ ಎಂದು ಜಯಮಾಲ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News