×
Ad

ನ್ಯಾನೋ ಜಗತ್ತಿನಲ್ಲಿ ಹಿಂದಿನ ಎಲ್ಲವೂ ಮಹತ್ವ ಕಳೆದುಕೊಳ್ಳುತ್ತಿವೆ: ಪ್ರೊ. ಕರಣಮ್ ಉಮಾ ಮಹೇಶ್ವರ್ ರಾವ್

Update: 2019-01-10 22:37 IST

ಮಂಗಳೂರು, ಜ.10: ವೈಜ್ಞಾನಿಕ ಕ್ಷೇತ್ರದಲ್ಲಿ ಸಾಕಷ್ಟು ಸಂಶೋಧನೆಗಳು ನಡೆದ ಪರಿಣಾಮ ಆಧುನಿಕ ಜಗತ್ತು ಸಂಪೂರ್ಣ ನ್ಯಾನೋಮಯವಾಗಿದೆ. ಜಗತ್ತು ಜುರಾಸಿಕ್ ಯುಗದಿಂದ ಸಾಕಷ್ಟು ಮುಂದೆ ಸಾಗಿದ್ದು, ಹಿಂದೆ ಯುರೇನಿಯಂ ಮತ್ತು ಚಿನ್ನ ಪ್ರಾಮುಖ್ಯತೆ ಪಡೆದಿದ್ದರೂ ಕೂಡ ಇಂದು ಅವು ಅಪ್ರಸ್ತುತಗೊಳ್ಳುತ್ತಿದೆ. ಗುರುತ್ವಾಕರ್ಷಣ ಜಗತ್ತು, ಆವರ್ತಕ ಕೋಷ್ಟಕಗಳು ಕೂಡಾ ಮಹತ್ವ ಕಳಕೊಳ್ಳುತ್ತಿವೆ. ಒಟ್ಟಿನಲ್ಲಿ ನ್ಯಾನೋ ಜಗತ್ತಿನಲ್ಲಿ ಹಿಂದಿನ ಎಲ್ಲವೂ ಮಹತ್ವ ಕಳೆದುಕೊಳ್ಳುತ್ತಿವೆ ಎಂದು ಸುರತ್ಕಲ್ ಎನ್‌ಐಟಿಕೆ ನಿರ್ದೇಶಕ ಪ್ರೊ. ಕರಣಮ್ ಉಮಾ ಮಹೇಶ್ವರ್ ರಾವ್ ಹೇಳಿದರು.

ನಗರದ ಸಂತ ಅಲೋಶಿಯಸ್ ಕಾಲೇಜಿ (ಸ್ವಾಯತ್ತ)ನ ಪದವಿ ಮತ್ತು ಸ್ನಾತಕೋತ್ತರ ರಸಾಯನ ಶಾಸ್ತ್ರ ವಿಭಾಗದ ವತಿಯಿಂದ ಕಾಲೇಜಿನಲ್ಲಿ ಅರಂಭಗೊಂಡ ‘ನ್ಯಾನೋ ತಂತ್ರಜ್ಞಾನ- 2019: ಅವಕಾಶಗಳು ಮತು ಸವಾಲುಗಳು’ ಎಂಬ ವಿಷಯದ ಕುರಿತು ಎರಡು ದಿನಗಳ ಅಂತಾರಾಷ್ಟ್ರೀಯ ಸಮ್ಮೇಳನವನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು.

ನ್ಯಾನೋ ತಂತ್ರಜ್ಞಾನವನ್ನು ಸರಿಯಾದ ಉದ್ದೇಶಕ್ಕಾಗಿ ಬಳಸಬೇಕು. ಅದರಿಂದ ಮನುಕುಲದ ಉದ್ಧಾರವಾದರೆ ನ್ಯಾನೋ ವಿಜ್ಞಾನ ಸಾರ್ಥಕತೆ ಪಡೆಯಲಿದೆ ಎಂದು ಪ್ರೊ. ಕರಣಮ್ ಉಮಾ ಮಹೇಶ್ವರ್ ರಾವ್ ಅಭಿಪ್ರಾಯಪಟ್ಟರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂತ ಅಲೋಶಿಯಸ್ ಶಿಕ್ಷಣ ಸಮೂಹ ಸಂಸ್ಥೆಗಳ ನಿರ್ದೇಶಕ ರೆ.ಫಾ.ಡೈನೀಶಿಯಸ್ ವಾಝ್ ನಿತ್ಯ ಬದುಕಿನಲ್ಲಿ ರಸಾಯನ ಶಾಸ್ತ್ರ ಹೇಗೆ ಬೆಸೆದುಕೊಂಡಿದೆಯೋ ಹಾಗೆಯೇ ನ್ಯಾನೋ ತಂತ್ರಜ್ಞಾನದಿಂದಾಗಿ ಆರೋಗ್ಯ, ಮಾಹಿತಿ ತಂತ್ರಜ್ಞಾನ, ಅಂತರಿಕ್ಷಯಾನವೂ ಹಾಸುಹೊಕ್ಕಿವೆ ಎಂದರು.

ಕಾಲೇಜಿನ ಪ್ರಾಂಶುಪಾಲ ರೆ.ಡಾ. ಪ್ರವೀಣ್ ಮಾರ್ಟಿಸ್ ಸಮಾವೇಶಕ್ಕೆ ಸಂಬಂಧಿಸಿದ ಲೇಖಗಳನ್ನು ಒಳಗೊಂಡ ಪುಸ್ತಕವನ್ನು ಬಿಡುಗಡೆಗೊಳಿಸಿ ಮಾತನಾಡಿದರು.

ಬೆಲ್ಜಿಯಂನ ನೆಮ್ಯೂರ್ ವಿವಿಯ ಸಿಇಎಸ್ ನಿರ್ದೇಶಕ ಪ್ರೊ.ಜಿನೆಬ್ ಮೆಖಾಲಿಫ್ ಮುಖ್ಯ ಭಾಷಣ ಮಾಡಿದರು. ಎಲ್‌ಸಿಆರ್‌ಐ ವಿಭಾಗದ ನಿರ್ದೇಶಕ ಡಾ.ರಿಚರ್ಡ್ ಗೊನ್ಸಾಲ್ವಿಸ್, ಅಂತಾರಾಷ್ಟ್ರೀಯ ಸಮಾವೇಶದ ಸಂಚಾಲಕ ಡಾ.ರೊನಾಲ್ಡೊ ನಝೆರತ್, ರಸಾಯನಶಾಸ್ತ್ರ ಸ್ನಾತಕ ವಿಭಾಗದ ಮುಖ್ಯಸ್ಥ ಪ್ರೊ. ರಾಜಗೋಪಾಲ್ ಭಟ್ ಉಪಸ್ಥಿತರಿದ್ದರು.

ನಿರ್ದೇಶಕ ಡಾ.ರಿಚರ್ಡ್ ಗೊನ್ಸಾಲ್ವಿಸ್ ಸ್ವಾಗತಿಸಿದರು. ಸಮಾವೇಶದ ಸಂಚಾಲಕ ಡಾ.ರೊನಾಲ್ಡ್ ನಝರೆತ್ ಅತಿಥಿಗಳನ್ನು ಪರಿಚಯಿಸಿದರು. ಸಮಾವೇಶದ ಸಂಘಟನಾ ಕಾರ್ಯದರ್ಶಿ ಪ್ರೀಮಾ ಪಾಯಸ್ ವಂದಿಸಿದರು. ಪ್ರಜ್ಞಾ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News