ಪೌರತ್ವ ಮಸೂದೆ ವಿರುದ್ಧ ಈಶಾನ್ಯ ರಾಜ್ಯಗಳಲ್ಲಿ ಮುಂದುವರಿದ ಪ್ರತಿಭಟನೆ

Update: 2019-01-10 17:13 GMT

ಗುವಾಹತಿ, ಜ. 10: ನೆರೆಯ ದೇಶಗಳ ಮುಸ್ಲಿಮೇತರ ವಲಸಿಗರಿಗೆ ಭಾರತೀಯ ಪೌರತ್ವ ನೀಡುವ ಉದ್ದೇಶ ಹೊಂದಿರುವ ವಿವಾದಾತ್ಮಕ ಪೌರತ್ವ ತಿದ್ದುಪಡಿ ಮಸೂದೆ -2016 ಲೋಕಸಭೆಯಲ್ಲಿ ಅಂಗೀಕಾರವಾದ ಬಳಿಕ ಈಶಾನ್ಯ ರಾಜ್ಯಗಳಲ್ಲಿ ಪ್ರತಿಭಟನೆ ಮುಂದುವರಿದಿದೆ.

ಪ್ರತಿಭಟನೆಯ ನಡುವೆಯೂ ಮಂಗಳವಾರ ಲೋಕಸಭೆಯಲ್ಲಿ ಮಸೂದೆ ಅಂಗೀಕಾರಗೊಂಡಿತ್ತು. ಈಗ ಬಿಜೆಪಿಯ ಮಿತ್ರ ಪಕ್ಷಗಳಾದ ಅಸ್ಸಾಂ ಗಣ ಪರಿಷದ್ ಹಾಗೂ ನ್ಯಾಶನಲ್ ಪೀಪಲ್ಸ್ ಪಾರ್ಟಿ ಅಸಮಾಧಾನಗೊಂಡಿವೆ. ‘‘ಇದು ದುರಾದೃಷ್ಟಕರ. ನಾವು ಪಕ್ಷವಾಗಿ ಹಾಗೂ ಸರಕಾರವಾಗಿ ನಮ್ಮ ಕಳವಳವನ್ನು ಎತ್ತಿದ್ದೇವೆ. ನಮ್ಮ ಸಂಪುಟ ಇದರ ವಿರುದ್ಧ ಬಹು ಹಿಂದೆಯೇ ನಿರ್ಧಾರ ಕೈಗೊಂಡಿದೆ. ನಮ್ಮ ಮೈತ್ರಿಯಲ್ಲಿ ಹಲವು ಪಕ್ಷಗಳಿವೆ. ಹೇಗೆ ಮುಂದುವರಿಯಬೇಕು ಎಂಬ ಬಗ್ಗೆ ನಾವು ಶೀಘ್ರ ಸಭೆ ನಡೆಸಲಿದ್ದೇವೆ’’ ಎಂದು ಎನ್‌ಪಿಪಿ ವರಿಷ್ಠ ಕಾನ್ರಾಡ್ ಸಂಗ್ಮಾ ಹೇಳಿದ್ದಾರೆ.

 ಈ ವಲಯದಲ್ಲಿ ಅಸಮಾಧಾನ ವ್ಯಕ್ತವಾದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ತನ್ನ ಮಿತ್ರ ಪಕ್ಷಗಳಿಗೆ ಭರವಸೆ ನೀಡಿದ್ದಾರೆ. ಈಶಾನ್ಯ ರಾಜ್ಯಗಳಲ್ಲಿ ಬಿಜೆಪಿಗೆ 25 ಲೋಕಸಭಾ ಸ್ಥಾನಗಳಿವೆ. ಈ ಹಿನ್ನೆಲೆಯಲ್ಲಿ ಇಲ್ಲಿನ ಹಿತಾಸಕ್ತಿ ಬಿಜೆಪಿಗೆ ಮುಖ್ಯವಾಗಿದೆ. ಈ ಮಸೂದೆ ಅಂಗೀಕಾರವಾಗಿರುವುದರಿಂದ ವಂದೇ ಮಾತರಂ ಹಾಡುವ ಪಾಕಿಸ್ತಾನ, ಅಫ್ಘಾನಿಸ್ತಾನ ಹಾಗೂ ಬಾಂಗ್ಲಾದೇಶ ವಲಸಿಗ ಮಕ್ಕಳು ಇನ್ನು ಸುಲಭವಾಗಿ ಭಾರತದ ನಾಗರಿಕರಾಗಲಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಈನಡುವೆ, ‘‘ಈಶಾನ್ಯ ರಾಜ್ಯಗಳ ಯುವಜನರ ಹಿತಾಸಕ್ತಿಗಳನ್ನು ರಕ್ಷಿಸಲಾಗುವುದು’’ ಎಂದು ನರೇಂದ್ರ ಮೋದಿ ಮಹಾರಾಷ್ಟ್ರದಲ್ಲಿ ನಡೆದ ರ್ಯಾಲಿಯಲ್ಲಿ ಭರವಸೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News