ಮೇಲ್ವರ್ಗದ ಬಡವರಿಗೆ ಮೀಸಲಾತಿ ಸ್ವಾಗತಾರ್ಹ: ಕಾಂಗ್ರೆಸ್ ಮುಖಂಡ ಮಾಧವ ಮಾವೆ

Update: 2019-01-10 17:18 GMT

ಮಂಗಳೂರು, ಜ.10: ಕೇಂದ್ರ ಸರಕಾರವು ಮೇಲ್ವರ್ಗದ ಬಡವರಿಗೆ ಶೇ.10 ಮೀಸಲಾತಿ ಪ್ರಮಾಣವನ್ನು ಘೋಷಿಸಿರುವುದು ಸ್ವಾಗತಾರ್ಹ ಕ್ರಮವಾಗಿದೆ ಎಂದು ದ.ಕ. ಜಿಲ್ಲಾ ಕಾಂಗ್ರೆಸ್ ನೂತನ ಹಿಂದುಳಿದ ವರ್ಗಗಳ ಘಟಕದ ಅಧ್ಯಕ್ಷ ಮಾಧವ ಮಾವೆ ತಿಳಿಸಿದರು.

ನಗರದ ಮಲ್ಲಿಕಟ್ಟೆಯ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆಗೆ ಇನ್ನು ಆರು ತಿಂಗಳು ಹತ್ತಿರದಲ್ಲಿರುವಾಗ ಕೇಂದ್ರ ಸರಕಾರವು ನೂತನ ಕಾರ್ಯಕ್ರಮವನ್ನು ತರಾತುರಿಯಲ್ಲಿ ಜಾರಿಗೆ ತರಲು ಹೊರಟಿರುವುದು ಅನುಮಾನಕ್ಕೆಡೆ ಮಾಡಿಕೊಟ್ಟಿದೆ. ಇದರಲ್ಲಿ ಕೇವಲ ರಾಜಕೀಯದ ಲಾಭದ ಉದ್ದೇಶದಿಂದ ಮೀಸಲಾತಿ ಘೋಷಿಸಲಾಗಿದೆ ಎಂದು ತಿಳಿಸಿದರು.

ಈಗಾಗಲೇ ಸವೋರ್ಚ್ಚ ನ್ಯಾಯಾಲಯವು ಶೇ.50ಕ್ಕಿಂತ ಹೆಚ್ಚು ಮೀಸಲಾತಿ ಕಲ್ಪಿಸುವಂತಿಲ್ಲ ಹೇಳಿದೆ. ಅದರ ಹೊರತಾಗಿಯೂ ಕೇಂದ್ರ ಸರಕಾರ ಶೇ.10 ಮೀಸಲಾತಿ ನೀಡಲು ಮುಂದಾಗಿದೆ. ಇನ್ನು ಆರು ತಿಂಗಳಲ್ಲಿ ಲೋಕಸಭಾ ಚುನಾವಣೆ ನಡೆಯಲಿದ್ದು, ಇದು ಬಡವರ ಓಲೈಕೆಗೆ ಸೀಮಿತವಾಗಿದೆ. ಕೆಲವೇ ತಿಂಗಳಲ್ಲಿ ಮೇಲ್ವರ್ಗದ ಬಡವರ ಸಮೀಕ್ಷೆ ನಡೆಸಲು ಸಾಧ್ಯವಿಲ್ಲ. ಯಾವುದೇ ಕಾರಣಕ್ಕೂ ಹಿಂದುಳಿದ ವರ್ಗ ಹಾಗೂ ದಲಿತ, ದಮನಿತರಿಗೆ ಅನ್ಯಾಯವಾಗದಂತೆ ಮೀಸಲಾತಿ ಕಲ್ಪಿಸಬೇಕು ಎಂದು ಅವರು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಸದಾಶಿವ ಉಳ್ಳಾಲ್, ಪಿತಾಂಬರ, ಈಶ್ವರ ಪೂಜಾರಿ, ಗಣೇಶ್ ಪೂಜಾರಿ, ನಿರಜ್ ಪಾಲ್, ಜಿಲಾ ಕಾಂಗ್ರೆಸ್ ಕಚೇರಿ ಕಾರ್ಯದರ್ಶಿ ನಜೀರ್ ಬಜಾಲ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News