ಕಾಶ್ಮೀರದ ಜನತೆ ಆಶಿಸಿದಂತೆ ನಡೆಯುತ್ತೇನೆ: ಐಎಎಸ್ ಅಧಿಕಾರಿ ಶಾ ಫೈಝಲ್

Update: 2019-01-10 17:26 GMT

ಶ್ರೀನಗರ, ಜ.10: ಕಾಶ್ಮೀರದಲ್ಲಿ ನಡೆಯುತ್ತಿರುವ ಹತ್ಯೆಗಳನ್ನು ವಿರೋಧಿಸಿ ಆಡಳಿತಾತ್ಮಕ ಸೇವೆಗೆ ರಾಜೀನಾಮೆ ನೀಡಿದ್ದ ಶಾ ಫೈಝಲ್, ತನ್ನ ಮುಂದಿನ ನಡೆ ಕಾಶ್ಮೀರದ ಜನತೆಯ ಆಶಯವನ್ನು ಅವಲಂಬಿಸಿದೆ ಎಂದಿದ್ದಾರೆ.

 ‘ತನ್ನ ರಾಜಕೀಯ ಜೀವನ ಫೇಸ್‌ಬುಕ್‌ನಲ್ಲಿ ಬರುವ ಕಮೆಂಟ್‌ ಗಳು ಅಥವಾ ಲೈಕ್ ‌ಗಳನ್ನು ಆಧರಿಸಿಲ್ಲ. ಕಾಶ್ಮೀರದ ಜನತೆ ಏನು ಹೇಳುತ್ತಾರೋ ಆ ರೀತಿ ಮಾಡುತ್ತೇನೆ ಎಂದು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆ.

 ಸರಕಾರಿ ಉದ್ಯೋಗವನ್ನು ತ್ಯಜಿಸಿದ್ದಕ್ಕೆ ತನಗೆ ಶ್ಲಾಘನೆ ಹಾಗೂ ನಿಂದನೆ ಎರಡೂ ಸಿಕ್ಕಿದೆ. ಇದನ್ನು ಮೊದಲೇ ನಿರೀಕ್ಷಿಸಿದ್ದೆ ಎಂದಿರುವ ಫೈಝಲ್, ನೀವು ಫೇಸ್‌ಬುಕ್ ಅಥವಾ ಟ್ವಿಟರ್‌ನಿಂದ ಹೊರಬಂದು ನಾಳೆ (ಶುಕ್ರವಾರ) ಶ್ರೀನಗರದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಬಂದರೆ ಅಲ್ಲಿ ನನ್ನ ಭವಿಷ್ಯದ ಬಗ್ಗೆ ಚರ್ಚಿಸಬಹುದು ಎಂದು ಕಾಶ್ಮೀರದ ಜನತೆಗೆ ಮನವಿ ಮಾಡಿಕೊಂಡಿದ್ದಾರೆ.

ಯಾರೆಲ್ಲಾ ಕಾರ್ಯಕ್ರಮಕ್ಕೆ ಬರುತ್ತಾರೆ ಎಂಬುದನ್ನು ತಿಳಿದುಕೊಂಡ ಬಳಿಕ ಕಾರ್ಯಕ್ರಮ ನಡೆಯಲಿರುವ ಸ್ಥಳ ಮತ್ತಿತರ ವಿವರವನ್ನು ನೀಡುವುದಾಗಿ ಅವರು ತಿಳಿಸಿದ್ದಾರೆ

ಫೈಝಲ್ ಅವರು ಉಮರ್ ಅಬ್ದುಲ್ಲಾರ ನ್ಯಾಷನಲ್ ಕಾನ್ಫರೆನ್ಸ್ ಪಕ್ಷಕ್ಕೆ ಸೇರ್ಪಡೆಗೊಳ್ಳಲಿದ್ದಾರೆ ಎಂಬ ಊಹಾಪೋಹ ಕೇಳಿಬರುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News