ಸಂಜೀವ್ ಭಟ್ ಪತ್ನಿ, ಪುತ್ರ ಇದ್ದ ಕಾರಿಗೆ ಅಪ್ಪಳಿಸಿದ ವಾಹನ: ಘಟನೆಯ ಸುತ್ತ ಸಂಶಯದ ಹುತ್ತ

Update: 2019-01-11 03:48 GMT
ಪತ್ನಿ, ಮಕ್ಕಳೊಂದಿಗೆ ಮಾಜಿ ಐಪಿಎಸ್ ಅಧಿಕಾರಿ ಸಂಜೀವ್ ಭಟ್

ಮಾಜಿ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ಅವರ ಪತ್ನಿ ಹಾಗೂ ಪುತ್ರ ಇದ್ದ ಕಾರಿಗೆ ಜನವರಿ 7ರಂದು ದೈತ್ಯ ಡಂಪರ್ ಢಿಕ್ಕಿ ಹೊಡೆದ ಘಟನೆ ಬಗ್ಗೆ ಹಲವು ಅನುಮಾನಗಳು ಹುಟ್ಟಿಕೊಂಡಿದ್ದು, ಪ್ರಾಣಾಪಾಯದಿಂದ ಪವಾಡಸದೃಶವಾಗಿ ಪಾರಾದ ಶ್ವೇತಾ ಭಟ್ ಅವರು ಸಂಜೀವ್ ಭಟ್ ಅವರ ಫೇಸ್‌ಬುಕ್ ಪೋಸ್ಟ್‌ನಲ್ಲಿ ಈ ಭಯಾನಕ ಅನುಭವವನ್ನು ಹಂಚಿಕೊಂಡಿದ್ದಾರೆ.

"ಈ ತಿಂಗಳ 7ರಂದು ನಾನು ಹಾಗೂ ಮಗ ಸಾವನ್ನು ತೀರಾ ಹತ್ತಿರದಿಂದ ನೋಡಿಬಂದೆವು. ದೈತ್ಯಾಕಾರದ ಡಂಪರ್ ಒಂದು ನೋಡನೋಡುತ್ತಿದ್ದಂತೆಯೇ ವಾಹನದಟ್ಟಣೆಯ ಐಐಎಂ ರಸ್ತೆಯಲ್ಲಿ ಚಾಲಕನ ಬದಿಯಿಂದ ನಮ್ಮ ಕಾರಿಗೆ ಢಿಕ್ಕಿ ಹೊಡೆಯಿತು. ವಾಹನ ನಜ್ಜುಗುಜ್ಜಾಗಿದ್ದು, ರಸ್ತೆ ವಿಭಜಕದ ಆಚೆಗೆ ಬಿತ್ತು. ವಾಹನದ ಅವಶೇಷದಲ್ಲಿ ಸಿಕ್ಕಿಹಾಕಿಕೊಂಡಿದ್ದ ನನಗೆ ಋಣಾತ್ಮಕ ಯೋಚನೆಗಳು ಬರತೊಡಗಿದವು. ನನ್ನ ಸಾವಿಗಿಂತ ಹೆಚ್ಚಾಗಿ ನನ್ನ ಮಗನನ್ನು ಕಳೆದುಕೊಳ್ಳುತ್ತೇನೆ ಎಂಬ ಭೀತಿ ನನಗೆ ಆವರಿಸಿತು. ಆದರೆ ಕೇವಲ ಕೆಲ ಗಾಯಗಳೊಂದಿಗೆ ಬದುಕಿ ಉಳಿದದ್ದು ನಿಜಕ್ಕೂ ಪವಾಡ"

''ದೇವರ ದಯೆ, ಸಂಜೀವ್ ಅವರ ಒಳ್ಳೆಯ ಕಾರ್ಯಗಳು ಹಾಗೂ ನಿಮ್ಮೆಲ್ಲರ ಪ್ರಾರ್ಥನೆಯಿಂದಾಗಿ ನಾವು ಸುರಕ್ಷಿತವಾಗಿದ್ದು, ಇಂದು ಈ ಪೋಸ್ಟ್ ಮಾಡಲು ಸಾಧ್ಯವಾಗುತ್ತಿದೆ. ಈ ಆಘಾತದಿಂದ ಹೊರಬರಲು ಮತ್ತು ವಿಷಯನಿಷ್ಠವಾಗಿ ಘಟನೆಯನ್ನು ವಿಶ್ಲೇಷಿಸಲು ಎರಡು ದಿನಗಳು ಬೇಕಾದವು. ಗುಜರಾತ್ ಹೈಕೋರ್ಟ್‌ನಲ್ಲಿ ವಿಚಾರಣೆ ನಡೆಯಬೇಕಿದ್ದ ಒಂದು ದಿನ ಮೊದಲು ಈ ಅಪಘಾತ ನಡೆದಿತ್ತು. ಕುತೂಹಲದ ವಿಚಾರವೆಂದರೆ ಡಂಪರ್ ಚಾಲಕನ ಬದಿಯಿಂದ ಹಿಂದಿನಿಂದ ಢಿಕ್ಕಿ ಹೊಡೆದಿದೆ. ಡಂಪರ್ ನಮ್ಮ ಕಾರನ್ನು ಎಳೆದುಕೊಂಡು ಹೋಗಿದೆ. ಆಂದರೆ ಢಿಕ್ಕಿ ಬಳಿಕ ವಾಹನ ನಿಲ್ಲಿಸುವ ಬದಲು ವೇಗವಾಗಿ ಚಲಿಸುತ್ತಲೇ ಇತ್ತು. ಡಂಪರ್‌ಗೆ ನಂಬರ್ ಪ್ಲೇಟ್ ಆಗಲೀ ವಾಹನದ ರಿಜಿಸ್ಟ್ರೇಷನ್ ಪೇಪರ್ ಕೂಡಾ ಇರಲಿಲ್ಲ.''

''ಘಟನೆಯ ಉದ್ದೇಶ ನಮ್ಮಲ್ಲಿ ಭೀತಿ ಹುಟ್ಟಿಸುವುದು ಅಥವಾ ಸಂಜಯ್ ಅವರನ್ನು ಮಣಿಸುವುದಾಗಿದ್ದರೆ ನಾನು ಸ್ಪಷ್ಟವಾಗಿ ಹೇಳಬಯಸುವುದು ನಾವು ಒಂದಷ್ಟು ಭೀತಿಗೊಂಡಿರಬಹುದು. ಆದರೆ ಸಂಜೀವ್ ಭಟ್ ಅವರ ಕುಟುಂಬ ಅವರ ಬಲವಾಗಿರುತ್ತದೆಯೇ ವಿನಃ ದೌರ್ಬಲ್ಯವಾಗಿರುವುದಿಲ್ಲ. ತೀರಾ ವಿಳಂಬವಾದ ಬಳಿಕ ನಾಳೆ ಅಪರಾಹ್ನ 3:30ಕ್ಕೆ ಗುಜರಾತ್ ಹೈಕೋರ್ಟ್‌ನಲ್ಲಿ ವಿಚಾರಣೆ ನಡೆಯಲಿದೆ. ನಮಗೆಲ್ಲರಿಗೂ ಹೊಸ ವರ್ಷ, ಹೊಸ ನ್ಯಾಯದ ನಿರೀಕ್ಷೆಯಲ್ಲಿ ನಾವಿದ್ದೇವೆ..'' ಎಂದು ಶ್ವೇತಾ ಭಟ್ ಫೇಸ್‌ಬುಕ್ ಪೋಸ್ಟ್‌ನಲ್ಲಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News