ಟಿವಿ ಶೋನಲ್ಲಿ ಮಾತಿನ ಎಡವಟ್ಟು: ಹಾರ್ದಿಕ್, ರಾಹುಲ್‌ಗೆ ಒಂದು ಪಂದ್ಯ ನಿಷೇಧ

Update: 2019-01-11 12:01 GMT

ಹೊಸದಿಲ್ಲಿ, ಜ.11: ಟಿವಿ ಕಾರ್ಯಕ್ರಮವೊಂದರಲ್ಲಿ ಮಹಿಳೆಯರ ಬಗ್ಗೆ ಅಸಭ್ಯವಾಗಿ ಮಾತನಾಡಿದ್ದ ಭಾರತೀಯ ಕ್ರಿಕೆಟಿಗರಾದ ಹಾರ್ದಿಕ್ ಪಾಂಡ್ಯ ಹಾಗೂ ಕೆಎಲ್ ರಾಹುಲ್‌ರನ್ನು ಶುಕ್ರವಾರ ಮೊದಲ ಏಕದಿನ ಪಂದ್ಯದಿಂದ ಅಮಾನತುಗೊಳಿಸಿರುವ ಆಡಳಿತಾಧಿಕಾರಿಗಳ ಸಮಿತಿ(ಸಿಒಎ)ಅಧ್ಯಕ್ಷ ವಿನೋದ್ ರಾಯ್, ವಿಚಾರಣೆಯನ್ನು ಕಾಯ್ದಿರಿಸಿದ್ದಾರೆ.

ಕರಣ್ ಜೋಹರ್ ನಡೆಸಿಕೊಡುವ ‘ಕಾಫಿ ವಿತ್ ಕರಣ್’ ಎಂಬ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಈ ಇಬ್ಬರು ಕ್ರಿಕೆಟಿಗರು ಮಹಿಳೆಯರ ಕುರಿತು ನೀಡಿರುವ ಹೇಳಿಕೆಯಿಂದ ಎಲ್ಲ ಕಂಗೆಣ್ಣಿಗೆ ಗುರಿಯಾಗಿದ್ದರು. ‘‘ಹಾರ್ದಿಕ್ ಹಾಗೂ ರಾಹುಲ್‌ರನ್ನು ಶನಿವಾರ ಆರಂಭವಾಗಲಿರುವ ಆಸ್ಟ್ರೇಲಿಯ ವಿರುದ್ಧ ಏಕದಿನ ಸರಣಿಯ ಮೊದಲ ಪಂದ್ಯದಿಂದ ಹೊರಗಿಡಲಾಗಿದೆ. ಈ ಇಬ್ಬರ ವಿರುದ್ಧ ವಿಚಾರಣೆಯನ್ನು ಕಾಯ್ದಿರಿಸಲಾಗಿದೆ. ಅಂತಿಮ ನಿರ್ಧಾರ ಇನ್ನಷ್ಟೇ ಬರಬೇಕಾಗಿದೆ’’ ಎಂದು ರಾಯ್ ಪಿಟಿಐಗೆ ತಿಳಿಸಿದ್ದಾರೆ.

ರಾಯ್ ಅವರ ಸಿಒಎ ಸಹೋದ್ಯೋಗಿ ಡಯಾನಾ ಎಡುಲ್ಜಿ ಶುಕ್ರವಾರ ಇಬ್ಬರು ಆಟಗಾರರ ಅಮಾನತಿಗೆ ಶಿಫಾರಸು ಮಾಡಿದ್ದು, ಬಿಸಿಸಿಐ ಕಾನೂನು ತಂಡ ನೀತಿ ಸಂಹಿತೆ ಉಲ್ಲಂಘನೆ ಕುರಿತು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಎಡುಲ್ಜಿ ಈ ಮೊದಲು ಇಬ್ಬರು ಆಟಗಾರರಿಗೆ ಎರಡು ಪಂದ್ಯಗಳ ನಿಷೇಧಕ್ಕೆ ಸಲಹೆ ನೀಡಿದ್ದರು. ಆದರೆ, ಈ ವಿಚಾರವನ್ನು ಕಾನೂನು ತಂಡದ ಮುಂದಿಡಲು ಬಯಸಿದ್ದರು. ಇದಕ್ಕೆ ರಾಯ್ ಕೂಡ ಸಹಮತ ವ್ಯಕ್ತಪಡಿಸಿದ್ದರು.

ನಾಯಕ ವಿರಾಟ್ ಕೊಹ್ಲಿ ಟಿವಿ ಶೋನಲ್ಲಿ ಸಹ ಆಟಗಾರರ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News