ಮೇಲ್ಜಾತಿಗೆ ಮೀಸಲಾತಿ ವಿರೋಧಿಸಿ ಎಸ್‌ಐಒ ಪ್ರತಿಭಟನೆ

Update: 2019-01-11 13:21 GMT

ಮಂಗಳೂರು, ಜ.11: ಜಾತಿಯ ಹೆಸರಿನಲ್ಲಿ ಮೀಸಲಾತಿ ನೀಡುತ್ತಿದ್ದುದನ್ನು ವಿರೋಧಿಸುತ್ತಿದ್ದ ಬಿಜೆಪಿಯು ಅಧಿಕಾರಕ್ಕೇರಿದ ಬಳಿಕ ಜಾತಿಯ ಹೆಸರಿನಲ್ಲೇ ಮೀಸಲಾತಿ ಕಲ್ಪಿಸುವ ಮೂಲಕ ತನ್ನ ಸಿದ್ಧಾಂತವನ್ನು ಬದಲಾಯಿಸುತ್ತಿದೆ ಎಂದು ಆರೋಪಿಸಿ ಮತ್ತು ಉದ್ಯೋಗ-ಶಿಕ್ಷಣದಲ್ಲಿ ಮೇಲ್ಜಾತಿಗೆ ಶೇ.10ರಷ್ಟು ಮೀಸಲಾತಿ ನೀಡಲು ಮುಂದಾಗಿರುವ ಕ್ರಮವನ್ನು ವಿರೋಧಿಸಿ ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಝೇಶನ್ (ಎಸ್‌ಐಒ) ದ.ಕ.ಜಿಲ್ಲಾ ಸಮಿತಿಯು ಶುಕ್ರವಾರ ದ. ಕ.ಜಿಲ್ಲಾಧಿಕಾರಿಯ ಕಚೇರಿ ಮುಂದೆ ಪ್ರತಿಭಟನೆ ನಡೆಸಿತು.

ಈ ಸಂದರ್ಭ ಮಾತನಾಡಿದ ಸನ್ಮಾರ್ಗ ವಾರಪತ್ರಿಕೆಯ ಸಂಪಾದಕ ಎ.ಕೆ.ಕುಕ್ಕಿಲ, ಈ ಹಿಂದೆ ಬಿಜೆಪಿಯು ಜಾತಿಯ ಹೆಸರಿನಲ್ಲಿ ಮೀಸಲಾತಿ ಕಲ್ಪಿಸುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ವಿ.ಪಿ.ಸಿಂಗ್ ಸರಕಾರ ಮಂಡಲ್ ಆಯೋಗದ ವರದಿಯನ್ನು ಜಾರಿಗೊಳಿಸಲು ಮುಂದಾದಾಗಲೂ ಕೂಡಾ ಇದೇ ಬಿಜೆಪಿಯು ದೇಶಾದ್ಯಂತ ಪ್ರತಿಭಟನೆ ನಡೆಸಿತ್ತು. ಸಾಮಾಜಿಕವಾಗಿ, ಆರ್ಥಿಕವಾಗಿ ಹಿಂದುಳಿದಿದ್ದ ದಲಿತರಿಗೆ ಮೀಸಲಾತಿ ನೀಡಲು ವಿರೋಧ ವ್ಯಕ್ತಪಡಿಸಿತ್ತು. ಇದೀಗ ಅಧಿಕಾರಕ್ಕೇರಿದ ಬಿಜೆಪಿಯು ಮುಂದಿನ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಮೇಲ್ಜಾತಿಗೆ ಶೇ.10 ಮೀಸಲಾತಿ ನೀಡಲು ಮುಂದಾಗಿದೆ. ಇದು ಸಂವಿಧಾನ ವಿರೋಧಿ ನೀತಿಯಾಗಿದೆ ಎಂದರು.

ಯಾವುದೇ ಸರಕಾರವು ನಿರ್ದಿಷ್ಟ ಸಮುದಾಯ, ವರ್ಗಕ್ಕೆ ಸೌಲಭ್ಯ ಕಲ್ಪಿಸುವಾಗ ಆ ಸಮುದಾಯದ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಮತ್ತಿತರ ಸ್ಥಿತಿಗತಿಯನ್ನು ಅಧ್ಯಯನ ಮಾಡಲು ಆಯೋಗ, ಸಮಿತಿ, ಮಂಡಳಿ ಇತ್ಯಾದಿಯನ್ನು ರಚಿಸಿ ಅದರ ವರದಿಯ ಆಧಾರದಂತೆ ಯೋಜನೆಗಳನ್ನು ಜಾರಿಗೊಳಿಸುತ್ತಿತ್ತು. ಆದರೆ, ಬಿಜೆಪಿ ನೇತೃತ್ವದ ಕೇಂದ್ರ ಸರಕಾರವು ಅದ್ಯಾವುದನ್ನೂ ಮಾಡದೆ ಮೀಸಲಾತಿ ಕಲ್ಪಿಸಲು ಮುಂದಾಗಿದೆ ಎಂದು ಎ.ಕೆ.ಕುಕ್ಕಿಲ ಆರೋಪಿಸಿದರು.

ಎಪಿಸಿಆರ್‌ನ ದ.ಕ. ಜಿಲ್ಲಾಧ್ಯಕ್ಷ ನ್ಯಾಯವಾದಿ ಸರ್ಫರಾಝ್, ಎಸ್‌ಐಒ ದ.ಕ. ಜಿಲ್ಲಾಧ್ಯಕ್ಷ ರಿಝ್ವಾನ್ ಅಝ್ಹರಿ ಮಾತನಾಡಿದರು. ಎಸ್‌ಐಒ ರಾಜ್ಯ ಕಾರ್ಯದರ್ಶಿ ಡ್ಯಾನಿಶ್, ಜಿಐಒ ರಾಜ್ಯಾಧ್ಯಕ್ಷ ಉಮೈರಾ ಬಾನು ಮತ್ತಿತರರು ಪಾಲ್ಗೊಂಡಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News