‘ಸಾವಿರದ ಸತ್ಯಗಳು’ ಕೃತಿಯಲ್ಲಿ ತುಳುವಿನ ಮಣ್ಣಿನ ವಾಸನೆ: ಡಾ.ಬಿ.ಎ.ವಿವೇಕ ರೈ

Update: 2019-01-11 12:19 GMT

ಮಂಗಳೂರು, ಜ.11: ದೈವಾರಾಧನೆಗೆ ಸಂಬಂಧಿಸಿದ ಡಾ.ಗಣೇಶ ಅಮೀನ್ ಸಂಕಮಾರ್ ಅವರ ಅಧ್ಯಯನ ಗ್ರಂಥ ‘ಸಾವಿರದ ಸತ್ಯಗಳು’ ದೈವ ಕಟ್ಟುವವರಿಗೆ ಮತ್ತು ಆಧುನಿಕ ರಂಗಭೂಮಿ ಬಳಸುವವರಿಗೆ ಅತ್ಯಂತ ಉಪಯುಕ್ತ ಸಮಾಲೋಚನಾ ಗ್ರಂಥವಾಗಿದೆ ಎಂದು ವಿಶ್ರಾಂತ ಕುಲಪತಿ ಡಾ.ಬಿ.ಎ.ವಿವೇಕ ರೈ ಹೇಳಿದರು.

ಮಂಗಳೂರು ಆಕಾಶವಾಣಿಯ ತುಳು ವಿಭಾಗದ ಸ್ವರಮಂಟಮೆ ಪುಸ್ತಕ ಅನಾವರಣದ 23ನೇ ಸಂಚಿಕೆಯ ಕಾರ್ಯಕ್ರಮದಲ್ಲಿ ಕೃತಿ ವಿಮರ್ಶೆ ಮಾಡಿ ಅವರು ಮಾತನಾಡಿದರು.

ಆರಾಧನೆ ನುಡಿಗಟ್ಟು, ಪಾರಿ, ಮಧು, ಮದಿಪು, ಬಿರೊ ಹೇಗಿವೆ ಎಂಬುದನ್ನು ಮುಂದಿನ ತಲೆಮಾರಿಗೆ ತಿಳಿಸುವ ಪ್ರಯತ್ನ ಶ್ಲಾಘನೀಯ. ಹೊಸ ಕಾಲದಲ್ಲಿ ಎಲ್ಲವು ಹೊಸ ರೂಪ ಪಡೆಯುತ್ತಿದೆ. ಜನಪದವು ವೈದಿಕ ರೂಪಾಂತರವಾಗುತ್ತಿರುವ ಸಂದರ್ಭ ತುಳುವಿನ ಮಣ್ಣಿನ ವಾಸನೆಯ ಶ್ರೀಮಂತಿಕೆಯನ್ನು, ಅಪರೂಪದ ತುಳು ಪಾರಿಭಾಷಿಕ ಪದಬಳಕೆಯನ್ನು ತಿಳಿಸುವ ಅಪೂರ್ವ ಗ್ರಂಥ ಇದಾಗಿದೆ. ಹಣದ ಮುಂದೆ ಕಲೆ ಅವಸಾನವಾಗುತ್ತಿರುವಾಗ ಈ ಕೃತಿಯ ಮೂಲಕ ತುಳು ಸಂಸ್ಕೃತಿ ಪರಂಪರೆಯನ್ನು ಕಟ್ಟಿಕೊಡುವಲ್ಲಿ ಲೇಖಕರು ಯಶಸ್ವಿಯಾಗಿದ್ದಾರೆಂದು ಡಾ.ಬಿ.ಎ.ವಿವೇಕ ರೈ ಅಭಿಪ್ರಾಯಪಟ್ಟರು.

ಸಂತ ಅಲೋಶಿಯಸ್ ಕಾಲೇಜಿನ ಪ್ರಾಂಶುಪಾಲ ರೆ.ಫಾ. ಮೆಲ್ವಿನ್ ಮೆಂಡೋನ್ಸಾ ಕೃತಿ ಅನಾವರಣಗೊಳಿಸಿದರು. ಸಾರಂಗ್ ರೇಡಿಯೋ ನಿರ್ದೇಶಕ ಮೆಲ್ವಿನ್ ಪಿಂಟೊ, ಮುಲ್ಕಿಯ ಅಗೋಳಿ ಮಂಜಣ ಜಾನಪದ ಕೇಂದ್ರದ ಚಂದ್ರಶೇಖರ ನಾಣಿಲ್, ಆಕೃತಿ ಪ್ರಕಾಶನದ ಕಲ್ಲೂರು ನಾಗೇಶ್ ಮಾತನಾಡಿದರು.

ಆಕಾಶವಾಣಿಯ ಕಾರ್ಯಕ್ರಮ ಮುಖ್ಯಸ್ಥೆ ಉಷಾಲತಾ ಸರಪಾಡಿ ಸ್ವಾಗತಿಸಿದರು. ತುಳು ವಿಭಾಗದ ಕಾರ್ಯಕ್ರಮ ನಿರ್ವಹಣಾಧಿಕಾರಿ ಡಾ.ಸದಾನಂದ ಪೆರ್ಲ ಕೃತಿ ವಾಚಿಸಿ ನಿರೂಪಿಸಿದರು. ಮೋನಿ ವಿಟ್ಲ, ಅಕ್ಷತಾ ರಾಜ್ ಪೆರ್ಲ, ರೇವತಿ ಪ್ರವೀಣ್ ಹಾಗೂ ಮೋಹನ್ ದಾಸ್ ಮರೋಳಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News