ಮಂಗನ ಕಾಯಿಲೆ: ಹೆಚ್ಚುವರಿ ವೈದ್ಯರ ತಂಡ, ಔಷಧಿ ಪೂರೈಸಲು ಸಿಎಂ ಭರವಸೆ-ಐವನ್ ಡಿಸೋಜ

Update: 2019-01-11 13:21 GMT

ಮಂಗಳೂರು, ಜ.11: ಕರಾವಳಿ ಭಾಗದಲ್ಲಿ ಮಂಗನ ಕಾಯಿಲೆ ರೋಗ ಹರಡುತ್ತಿರುವ ಬಗ್ಗೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಮಾಹಿತಿ ನೀಡಿದ್ದು, ಹೆಚ್ಚುವರಿ ವೈದ್ಯರ ತಂಡ, ಔಷಧಿ ಪೂರೈಸುವುದಾಗಿ ಮುಖ್ಯಮಂತ್ರಿ ಭರವಸೆ ನೀಡಿದರು ಎಂದು ಸಂಸದೀಯ ಕಾರ್ಯದರ್ಶಿ ಐವನ್ ಡಿಸೋಜ ತಿಳಿಸಿದರು.

ಶುಕ್ರವಾರ ಬೆಳಗ್ಗೆ ಮುಖ್ಯಮಂತ್ರಿಯನ್ನು ಭೇಟಿ ಮಾಡಿದ ಸಂಸದೀಯ ಕಾರ್ಯದರ್ಶಿ ಐವನ್ ಡಿಸೋಜ, ಈ ರೋಗದಿಂದ ಪಾರಾಗಲು ನಡೆಸಬೇಕಾದ ಕ್ರಮಗಳ ಬಗ್ಗೆ ಚರ್ಚಿಸಿದರು. ರೋಗ ಪತ್ತೆ ಹಚ್ಚಲು ಲ್ಯಾಬ್ ಮತ್ತು ಔಷಧಿಗಳನ್ನು ಎಲ್ಲ ಕಡೆಗಳಲ್ಲಿ ಲಭಿಸುವಂತಾಗಲು ಕ್ರಮಕೈಗೊಳ್ಳಬೇಕು. ಖಾಸಗಿ ಆಸ್ಪತ್ರೆಯಲ್ಲಿ ಈ ರೋಗದ ತಪಾಸಣೆ ಮಾಡುವಂತೆ ವೈದ್ಯಕೀಯ ಆಸ್ಪತ್ರೆ ಮತ್ತು ಜಿಲ್ಲಾಸ್ಪತ್ರೆಗಳಿಗೆ ಸೂಚಿಸಬೇಕು ಎಂದು ಮುಖ್ಯಮಂತ್ರಿಗೆ ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ಕೂಡಲೇ ಆರೋಗ್ಯ ಇಲಾಖೆಗೆ ಈ ರೋಗ ಹರಡದಂತೆ ಎಲ್ಲ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಔಷಧಿ ಹಾಗೂ ವೈದ್ಯರನ್ನು ವಿಶೇಷ ತಂಡಗಳಾಗಿ ರಚಿಸಿ ಯಾವುದೇ ಅನುಮಾನ ಇದ್ದಲ್ಲಿ ಕೂಡಲೇ ಪರೀಕ್ಷಿಸಿ ಔಷಧಿಗಳನ್ನು ನೀಡಲಾಗುವುದು ಎಂದರು.

ರಕ್ತದಲ್ಲಿ ವೈರಾಣುಗಳು ಕಂಡು ಬಂದರೆ ಒಂದು ತಿಂಗಳ ಅಂತರದಲ್ಲಿ 6ರಿಂದ 65 ವರ್ಷಗಳ ಎಲ್ಲ ಜನರಿಗೆ ಲಸಿಕೆ ನೀಡುವಂತೆ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ತಿಳಿಸಿದ್ದಾರೆ ಎಂದು ಸಂಸದೀಯ ಕಾರ್ಯದರ್ಶಿ ಐವನ್ ಡಿಸೋಜ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News