ಮಧುಕರ್ ಶೆಟ್ಟಿ ಸಾವಿನ ನೈಜ ಕಾರಣ ಬಯಲುಗೊಳಿಸಿ: ದಿನೇಶ್ ಅಮೀನ್ ಮಟ್ಟು ಒತ್ತಾಯ

Update: 2019-01-11 14:29 GMT

ಕುಂದಾಪುರ, ಜ.11: ನಿಗೂಢತೆಯನ್ನು ಉಳಿಸಿ ಹಲವು ಸಂಶಯಗಳಿಗೆ ಎಡೆ ಮಾಡಿಕೊಟ್ಟ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ಸಾವಿನ ನೈಜ ಕಾರಣ ವನ್ನು ಸಂಬಂಧಪಟ್ಟವರು ಬಯಲುಗೊಳಿಸಬೇಕು ಎಂದು ಚಿಂತಕ ದಿನೇಶ್ ಅಮೀನ್ ಮಟ್ಟು ಒತ್ತಾಯಿಸಿದ್ದಾರೆ.

ಕುಂದಾಪುರ ಅಂಕದಕಟ್ಟೆಯ ಸಹನಾ ಕನ್ವೆನ್ಶನ್ ಸೆಂಟರ್‌ನಲ್ಲಿ ಶುಕ್ರವಾರ ನಡೆದ ಐಪಿಎಸ್ ಅಧಿಕಾರಿ ದಿವಂಗತ ಡಾ.ಕೆ.ಮಧುಕರ ಶೆಟ್ಟಿ ಪ್ರಾರ್ಥನಾ ಸಭೆಯಲ್ಲಿ ಅವರು ಮಾತನಾಡಿದರು.

ವೈದ್ಯಕೀಯ ವಿಜ್ಞಾನ ಬಗ್ಗೆ ಹೆಚ್ಚಿನ ಜ್ಞಾನವನ್ನು ಹೊಂದಿದ್ದ ಮಧುಕರ್ ಶೆಟ್ಟಿಗೆ ಅವರ ಆರೋಗ್ಯದ ಬಗ್ಗೆಯೂ ಸಾಕಷ್ಟು ಕಾಳಜಿ ಇತ್ತು. ಅವರು ಹೃದಯಾ ಘಾತ, ಎಚ್1ಎನ್1 ಕಾಯಿಲೆಯಿಂದ ಮೃತಪಟ್ಟಿದ್ದಾರೆಂಬ ಮಾತುಗಳು ಕೇಳಿಬರುತ್ತಿವೆ. ಆದರೆ ಅವರ ಸಾವಿನ ನಿಜ ಕಾರಣ ತಿಳಿದುಕೊಳ್ಳಬೇಕಾಗಿದೆ ಎಂದು ಅವರು ತಿಳಿಸಿದರು.

ಮಧುಕರ್ ಶೆಟ್ಟಿ ತನ್ನ ತಂದೆಯ ವ್ಯಕ್ತಿತ್ವವನ್ನು ಮೀರಿದ ಕಡು ಆದರ್ಶವಾದಿ ಯಾಗಿದ್ದರು. ತಂದೆ ವಡ್ಡರ್ಸೆಯವರ ವ್ಯಕ್ತಿತ್ವದಿಂದ ರೂಪಿತಗೊಂಡ ಸ್ವತಂತ್ರ ವ್ಯಕ್ತಿತ್ವ ಅವರದ್ದಾಗಿತ್ತು. ಯಶಸ್ಸಿಗಾಗಿ ಮೇಲಾಧಿಕಾರಿ ಓಲೈಕೆ ಮಾಡದೆ, ಕೆಳಗಿನ ಸಿಬ್ಬಂದಿಗಳ ಮೇಲೆ ದಬ್ಬಾಳಿಕೆ ಮಾಡದೆ ಬದುಕಿ ತೋರಿಸಿದ್ದರು. ಅವರನ್ನು ವರ್ಗಾವಣೆ ಮಾಡುವಲ್ಲಿ ಪ್ರಧಾನ ಪಾತ್ರ ವಹಿಸಿದ್ದವರೇ ಇಂದು ಅವರ ಗುಣಗಾನವಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದರು.

ರಾಜ್ಯ ನಿವೃತ್ತ ಪೊಲೀಸ್ ಮಹಾನಿರ್ದೇಶಕ ಅಜಯ್ ಕುಮಾರ್ ಸಿಂಗ್ ಮಾತನಾಡಿ, ಪ್ರಾಮಾಣಿಕ, ದಕ್ಷ ಅಧಿಕಾರಿಯಾಗಿ ಸೇವೆ ಸಲ್ಲಿಸಿದ ಮಧುಕರ ಶೆಟ್ಟಿ ದೇಶದ ಪೊಲೀಸ್ ವ್ಯವಸ್ಥೆಯ ಹೊಳೆಯುವ ನಕ್ಷತ್ರ ಆಗಿದ್ದಾರೆ ಎಂದು ಹೇಳಿದರು.

ಮಂಗಳೂರು ಪಶ್ಚಿಮ ವಲಯ ಐಜಿಪಿ ಅರುಣ್ ಚಕ್ರವರ್ತಿ, ನಿವೃತ್ತ ಪೊಲೀಸ್ ಹೆಡ್‌ಕಾನ್ಸ್‌ಸ್ಟೇಬಲ್ ದಯಾನಂದ, ಹಿರಿಯ ಪತ್ರಕರ್ತ ಪುಟ್ಟಸ್ವಾಮಿ, ವಿಜ್ಞಾನಿ ಮುತ್ತುರಾಮನ್, ಅನಿವಾಸಿ ಭಾರತೀಯ ಜಿಜಿಲ್ ರಾಮಕೃಷ್ಣ, ಬೆಂಗಳೂರಿನ ನ್ಯಾಶನಲ್ ಕಾಲೇಜಿನ ಉಪನ್ಯಾಸಕರಾದ ಮೌಲೇಶ್, ಪ್ರಮೋದ್ ಮುತಾಲಿಕ್, ಸುಬ್ಬಾ ರಾವ್, ಹಿರಿಯ ಐಪಿಎಸ್ ಅಧಿಕಾರಿ ದೀಪಿಕಾ ಸೂರಿ, ಎಡಿಜಿಪಿ ರವೀಂದ್ರನಾಥ್, ಬೆಂಗಳೂರಿನ ಕಾಲೇಜು ಸಹಪಾಠಿ ತಾರಕೇಶ್ವರ, ದೆಹಲಿಯ ಕಾಲೇಜು ಸಹಪಾಠಿ ಐವನ್ ಲೋಬೋ, ಹೆಚ್ಚುವರಿ ಪೊಲೀಸ್ ಅಧೀಕ್ಷಕಿ ನಂದಿನಿ ನುಡಿ ನಮನ ಸಲ್ಲಿಸಿದರು.

ಸುವರ್ಣ ಮಧುಕರ್ ಶೆಟ್ಟಿ, ಪುತ್ರಿ ಸಮ್ಯ ಮಧುಕರ್ ಶೆಟ್ಟಿ, ಹಿರಿಯ ಸಹೋದರ ಮುರಳೀಧರ ಶೆಟ್ಟಿ, ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷಣ ನಿಂಬರ್ಗಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರಚಂದ್ರ ಉಪಸ್ಥಿತರಿದ್ದರು. ಸಹೋದರ ಸುಧಾಕರ ಶೆಟ್ಟಿ ವಂದಿಸಿದರು. ರಾಮಕೃಷ್ಣ ಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.

ಕಣ್ಣೀರಿಟ್ಟ ಕಾನ್‌ಸ್ಟೇಬಲ್
ಸಭೆಯಲ್ಲಿ ಮಾತನಾಡಿದ ಬೆಂಗಳೂರಿನ ಪೊಲೀಸ್ ಕಾನ್ಸ್‌ಟೇಬಲ್ ದಶರತ್, ಮಧುಕರ್ ಶೆಟ್ಟಿ ಅವರೊಂದಿಗಿನ ಕಳೆದ ದಿನಗಳನ್ನು ನೆನೆದು ಕಣ್ಣೀರಿಟ್ಟರು. ಗಾಂಧೀಜಿ, ಬುದ್ಧ, ಸುಭಾಶ್‌ಚಂದ್ರಬೋಸ್ ಅವರ ಆದರ್ಶ ಗಳು ಹಾಗೂ ಸಿದ್ದಾಂತಗಳು ಡಾ.ಮಧುಕರ್ ಶೆಟ್ಟಿ ಅವರಲ್ಲಿತ್ತು. ಯಾವುದೇ ತಾರಮತ್ಯ ಇಲ್ಲದೆ ಒಬ್ಬ ಸಾಮಾನ್ಯ ಪೇದೆಯೊಂದಿಗೂ ಕುಳಿತು ಊಟ ಮಾಡುತ್ತಿದ್ದರು. ಅವರಲ್ಲಿ ತಾಯಿ ಪ್ರೀತಿಯನ್ನು ಕಂಡಿದ್ದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News