ಪ್ರವಾದಿ ನಿಂದನೆ ಆರೋಪ: ಸುನ್ನಿ ಸಂಘಟನೆಗಳ ಒಕ್ಕೂಟದಿಂದ ಮುಡಿಪುವಿನಲ್ಲಿ ಪ್ರತಿಭಟನೆ

Update: 2019-01-11 15:04 GMT

ಕೊಣಾಜೆ,ಜ.11: ಪ್ರತಿಯೊಬ್ಬ ಮುಸಲ್ಮಾನನೂ ಪ್ರವಾದಿ(ಸ)ಅವರನ್ನು ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಾರೆ. ಈ ಹಿನ್ನೆಲೆಯಲ್ಲಿ ಅವರಿಗೆ ನಿಂದಿಸುವ ಅಥವಾ ನೋವಾಗುವಂತಹ ಮಾತನ್ನು ಸಹಿಸಲು ಸಾಧ್ಯವಿಲ್ಲ. ಆದರೂ ನಮ್ಮ ಹೋರಾಟ ಶಾಂತಿಯುತವಾಗಿರಬೇಕು ಎಂದು ಸಯ್ಯಿದ್ ಮುಹಮ್ಮದ್ ಅಶ್ರಫ್ ತಂಙಳ್ ಆದೂರು ಅವರು ಹೇಳಿದರು. 

ಅವರು ಸುನ್ನಿ ಸಂಘಟನೆಗಳ ಒಕ್ಕೂಟ ಮುಡಿಪು ಇದರ ಆಶ್ರಯದಲ್ಲಿ ಪ್ರವಾದಿ ಮುಹಮ್ಮದ್(ಸಅ) ಅವರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ ಅಜಿತ್ ವಿರುದ್ದ ಶುಕ್ರವಾರ ಮುಡಿಪುವಿನಲ್ಲಿ ನಡೆದ ಬೃಹತ್ ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. 

ಕಾರ್ಯಕ್ರಮದಲ್ಲಿ ಮುಖ್ಯ ಪ್ರಭಾಷಣ ಮಾಡಿದ ಸಿರಾಜುದ್ದೀನ್ ಸಖಾಫಿ ಕನ್ಯಾನ ಅವರು, ಪ್ರವಾದಿಯವರನ್ನು ನಿಂದಿಸುವ ಮಾತನ್ನಾಡಿದ ಅಜಿತ್ ಅವರು ಒಂದು ಸಮುದಾಯಕ್ಕೆ ನೋವನ್ನು ತರುವ ಕೆಲಸ ಮಾಡಿದ್ದಾರೆ. ಪ್ರತಿಯೊಬ್ಬರೂ ಜಾತಿ ಮತ ವರ್ಗ ಬೇಧವನ್ನು ಮರೆತು ಪ್ರತಿಭಟಿಸುವುದು ಅನಿವಾರ್ಯವಾಗಿದೆ ಎಂದರು. 

ಮಾಧ್ಯಮವು ಸಮಾಜದ ಜವಾಬ್ದಾರಿತ ಅಂಗವಾಗಿದ್ದರೂ ಅಜಿತ್ ತನ್ನ ಜವಾಬ್ಧಾರಿಯನ್ನು ಮರೆತು ನಿಂದನೆಯ ಹೇಳಿಕೆ ನೀಡಿದ್ದಾರೆ. ಆದರೂ ಜನ ಅವರ ಮನೆಗೆ ಕಲ್ಲು ಎಸೆಯಲಿಲ್ಲ, ಮಂದಿರಗಳಿಗೆ ಕಲ್ಲು ಎಸೆಯಲಿಲ್ಲ, ಅವರ ಮಾಧ್ಯಮ ಕಚೇರಿಗೆ ಹಾನಿ ಮಾಡಿಲ್ಲ. ಅದಕ್ಕೆ ಬದಲಾಗಿ ಕೋಟ್ಯಂತರ ಮುಸ್ಲಿಂ ಸಮುದಾಯ ಶಾಂತಿಯುತವಾಗಿ ಕಾನೂನಿನ ಮೂಲಕ ಹೋರಾಟ ನಡೆಸಿ ಅವರ ಬಂಧನಕ್ಕೆ ಆಗ್ರಹಿಸುತ್ತಿದ್ದೇವೆ ಎಂದರು. 

ಖಾಝಿ ಸಯ್ಯಿದ್ ಫಝಲ್ ಕೋಯಮ್ಮ ತಂಙಳ್ ಕೂರತ್ ಅವರು ಪ್ರಾರ್ಥನೆ ನೆರವೇರಿಸಿದರು. ಕಾರ್ಯಕ್ರಮವನ್ನು ಶೈಖುನಾ ಪಿ.ಅಹ್ಮದ್ ಮುಸ್ಲಿಯಾರ್ ಪಾತೂರು ಅವರು ಉದ್ಘಾಟಿಸಿದರು. 

ಕಾರ್ಯಕ್ರಮದಲ್ಲಿ ಶೈಖುನಾ ಶರಫುಲ್ ಉಲಮಾ ಅಬ್ಬಾಸ್ ಉಸ್ತಾದ್, ಸಿದ್ದೀಖ್ ಸಖಾಫಿ ಮುಳೂರು, ಆಸೀಫ್ ಸಖಾಫಿ ಮುಡಿಪು, ಮದಕ ತಂಙಳ್, ಕಾರ್ಯಕ್ರಮ ಸಂಘಟಕ ಎಸ್.ಕೆ. ಅಬ್ದುಲ್ ಖಾದರ್ ಹಾಜಿ, ಉಮ್ಮರ್ ಹಾಜಿ ಪಾತೂರು. ಕೆ.ಎಂ.ಬಾವ ಹಾಜಿ ಮುಡಿಪು, ಪಿ.ಕೆ.ಮಹಮ್ಮದ್ ಮದನಿ ಸಾಂಬಾರ್‍ತೋಟ, ಮಜೀದ್ ಅಸದಿ, ಎಸ್.ಅಬ್ದುಲ್ ರಹ್ಮಾನ್ ಮೊದಲಾದವರು ಉಪಸ್ಥಿತರಿದ್ದರು. 

ಬ್ರೈಟ್ ಶಿಕ್ಷಣ ಸಂಸ್ಥೆಯ ಅಬ್ದುಲ್ ಜಲೀಲ್ ಮೋಂಟುಗೋಳಿ ಸ್ವಾಗತಿಸಿದರು. ಉಮ್ಮರ್ ಪಜೀರು ವಂದಿಸಿದರು. ಎಂ.ಎ.ಬಶೀರ್ ಮುಡಿಪು ವಂದಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News