ಮಂಗಳೂರಿನಲ್ಲಿ ಬೀಟ್ ಜನಸಂಪರ್ಕ ಸಭೆ ಕಡ್ಡಾಯ: ಡಿಸಿಪಿ ಹನುಮಂತರಾಯ

Update: 2019-01-11 15:13 GMT

ಮಂಗಳೂರು, ಜ.11: ನಗರ ಪೊಲೀಸ್ ಕಮಿಷನರೇಟ್‌ನ ಪ್ರತಿ ಬೀಟ್ ವ್ಯಾಪ್ತಿಯಲ್ಲಿ ಜನಸಂಪರ್ಕ ಸಭೆಯನ್ನು ಕಡ್ಡಾಯವಾಗಿ ಆಯೋಜಿಸುವ ಮೂಲಕ ಸ್ಥಳೀಯ ಕುಂದುಕೊರತೆ ನಿವಾರಿಸಲು ಆದ್ಯತೆ ನೀಡಲಾಗುವುದು ಎಂದು ಮಂಗಳೂರು ನಗರ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಹನುಮಂತರಾಯ ತಿಳಿಸಿದರು.

ನಗರದ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಶುಕ್ರವಾರ ನಡೆದ 101ನೇ ಪೊಲೀಸ್ ಫೋನ್‌ಇನ್ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ ದೂರುಗಳನ್ನು ಸ್ವೀಕರಿಸಿ ಮಾತನಾಡಿದ ಅವರು, ಹೊಸ ಬೀಟ್ ವ್ಯವಸ್ಥೆಯಲ್ಲಿ ಆಯಾ ಪೊಲೀಸ್ ಠಾಣೆಯ ಸಿಬ್ಬಂದಿಗೆ ಅನುಗುಣವಾಗಿ 30ರಿಂದ 40 ಮಂದಿಯನ್ನು ನಿಯೋಜಿಸಲಾಗುತ್ತಿದೆ. ಬೀಟ್ ಪ್ರದೇಶಗಳನ್ನು ಈಗಾಗಲೇ ವಿಂಗಡಿಸಲಾಗಿದೆ. ಪ್ರತಿ ಬೀಟ್ ಸಿಬ್ಬಂದಿ ತಿಂಗಳಿಗೆ ಒಮ್ಮೆ ತನ್ನ ಬೀಟ್ ಪ್ರದೇಶದಲ್ಲಿ ಜನಸಂಪರ್ಕ ಸಭೆ ನಡೆಸಬೇಕು ಎಂದರು.

ಈಗಾಗಲೇ ಜನಸಂಪರ್ಕ ಸಭೆಯನ್ನು ಆರಂಭಿಸಲಾಗಿದೆ. ಸಾಧ್ಯವಾದಷ್ಟು ಸ್ಥಳೀಯ ಸಮಸ್ಯೆಗಳಿಗೆ ಸ್ವಂದಿಸಲು ಬೀಟ್ ಜನಸಂಪರ್ಕ ಸಭೆಯನ್ನು ಕಡ್ಡಾಯಗೊಳಿಸಲಾಗಿದ್ದು, ಇನ್ನಷ್ಟು ಪರಿಣಾಮಕಾರಿಯಾಗಿ ಮಾಡುವಂತೆ ಸೂಚಿಸಲಾಗುವುದು ಎಂದರು.

ಮತ್ತೆ ಟೋವಿಂಗ್ ಸದ್ದು: ನಗರದ ಜನನಿಬಿಡ ಹಾಗೂ ವಾಹನನಿಬಿಡ ಪ್ರದೇಶಗಳಲ್ಲಿ ಅಲ್ಲಲ್ಲಿ ರಸ್ತೆಬದಿ ವಾಹನ ಪಾರ್ಕಿಂಗ್ ಮಾಡಲಾಗುತ್ತಿದೆ. ಇದರಿಂದಾಗಿ ಪಾದಚಾರಿಗಳಿಗೆ, ಇತರ ವಾಹನಗಳಿಗೆ ಸುಗಮವಾಗಿ ಸಂಚರಿಸಲು ಸಾಧ್ಯವಾಗುತ್ತಿಲ್ಲ ಎಂದು ನಾಗರಿಕರೊಬ್ಬರು ದೂರಿದರು.

ಇದಕ್ಕೆ ಪ್ರತಿಕ್ರಿಯಿಸಿದ ಡಿಸಿಪಿ ಹನುಮಂತರಾಯ, ನಗರಕ್ಕೆ ನಾಲ್ಕು ಟೋವಿಂಗ್ ವಾಹನಕ್ಕೆ ಟೆಂಡರ್ ಕರೆಯಲಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಟೋಯಿಂಗ್ ವಾಹನ ರಸ್ತೆಗೆ ಇಳಿಯಲಿದೆ. ಬಳಿಕ ಅನಧಿಕೃತ ವಾಹನ ಪಾರ್ಕಿಂಗ್ ಸಮಸ್ಯೆ ಬಹಳಷ್ಟು ಕಡಿಮೆಯಾಗಲಿದೆ ಎಂದು ಹೇಳಿದರು.

ಹಂಪ್ ಎತ್ತರಿಸಿ: ನಗರದ ಪ್ರಮುಖ ರಸ್ತೆಗಳಲ್ಲಿ ಹಾಕಿರುವ ಹಂಪ್ ಅವೈಜ್ಞಾನಿಕವಾಗಿದೆ. ಹಂಪ್ ಹಾಕಿದರೂ ವಾಹನಗಳ ಮಿತಿಮೀರಿದ ವೇಗಕ್ಕೆ ಕಡಿವಾಣ ಬೀಳುತ್ತಿಲ್ಲ. ಹಂಪ್‌ನ್ನು ಎತ್ತರಿಸುವಂತೆ ನಾಗರಿಕರೊಬ್ಬರು ಆಗ್ರಹಿಸಿದರು. ಈ ಬಗ್ಗೆ ಪರಿಶೀಲನೆ ನಡೆಸುವುದಾಗಿ ಡಿಸಿಪಿ ಹನುಮಂತರಾಯ ಭರವಸೆ ನೀಡಿದರು.

‘ನಗರದ ಕುಂಟಿಕಾನ ಮಾರ್ಗದ ಸುಪ್ರಭಾತ ಕಾಂಪ್ಲೆಕ್ಸ್‌ನಲ್ಲಿ ಝುಂಬಾ ಝುಂಬಾ ನೈತಿಕ ಚಟುವಟಿಕೆ ನಡೆಯುತ್ತಿದೆ’ ಎಂದು ಸಾರ್ವಜನಿಕರೊಬ್ಬರು ದೂರಿದರು. ಇದಕ್ಕೆ ಪ್ರತಿಕ್ರಿಯಿಸಿದ ಡಿಸಿಪಿ ಹನುಮಂತರಾಯ, ಝುಂಬಾ ಝುಂಬಾ ಅಂತರ್‌ರಾಷ್ಟ್ರೀಯ ಮಟ್ಟದ ಚಟುವಟಿಕೆಯಾಗಿದೆ. ಝುಂಬಾಝುಂಬಾ ಚಟುವಟಿಕೆ ನಡೆಸುವವರನ್ನು ಕರೆಸಿ ಈ ಬಗ್ಗೆ ಮಾರ್ಗದರ್ಶನ ನೀಡಲಾಗುವುದು. ಅನೈತಿಕ ಚಟುವಟಿಕೆಗಳು ನಡೆಯುತ್ತಿದ್ದರೆ ನಿರ್ದಿಷ್ಟ ಲಿಖಿತ ದೂರು ನೀಡಿದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

‘ದೇರಳಕಟ್ಟೆಯಿಂದ ದಾವಣಗೆರೆಗೆ ತೆರಳುವ ಬಸ್ಸೊಂದು 12ಕ್ಕೂ ಹೆಚ್ಚು ಎಲ್‌ಇಡಿ ಲೈಟ್‌ಗಳನ್ನು ಹಾಕಿಕೊಂಡು ಚಲಾಯಿಸುತ್ತಿದ್ದು, ಇದರಿಂದ ಎಲ್ಲರಿಗೂ ತೊಂದರೆಯಾಗುತ್ತಿದೆ ಎಂದು ಬಜ್ಪೆಯಿಂದ ಕರೆ ಮಾಡಿದ ನಾಗರಿಕರೊಬ್ಬರು ದೂರಿದರು.

ದೂರಿಗೆ ಸ್ಪಂದಿಸಿದ ಡಿಸಿಪಿ, ಬಸ್ ಸಹಿತ ಎಲ್ಲ ವಾಹನಗಳಲ್ಲಿ ಎಲ್‌ಇಡಿ ಲೈಟ್‌ಗಳನ್ನು ಅಳವಡಿಸಿರುವುದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಕಾರ್ಯಕ್ರಮದಲ್ಲಿ 22 ದೂರುಗಳನ್ನು ಸ್ವೀಕರಿಸಿ ಡಿಸಿಪಿ ಪ್ರತಿಕ್ರಿಯಿಸಿದರು. ಕಾರ್ಯಕ್ರಮದಲ್ಲಿ ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಉಮಾ ಪ್ರಶಾಂತ್, ಪೊಲೀಸ್ ಇನ್‌ಸ್ಪೆಕ್ಟರ್‌ಗಳಾದ ಶಿವಪ್ರಕಾಶ್, ಅಮಾನುಲ್ಲಾ, ರವಿ ಪವಾರ್, ಎಸ್ಸೈ ಯೂಸುಫ್, ಹೆಡ್ ಕಾನ್‌ಸ್ಟೇಬಲ್ ಪುರುಷೋತ್ತಮ ಮತ್ತಿತರರು ಉಪಸ್ಥಿತರಿದ್ದರು.
***

ಮೀನು ವಾಹನಗಳ ಉಪಟಳಕ್ಕೆ ಕಡಿವಾಣ
ನಗರದ ಬಂದರ್, ಲೇಡಿಹಿಲ್, ಕೂಳೂರು, ಕಾವೂರು, ಜೆಪ್ಪು ಸೇರಿದಂತೆ ವಿವಿಧೆಡೆ ಮೀನು ಸಾಗಾಟದ ವಾಹನಗಳಿಂದ ಸೋರಲ್ಪಡುವ ಮೀನಿನ ತ್ಯಾಜ್ಯದಿಂದ ಸಾರ್ವಜನಿಕರಿಗೆ ಸಮಸ್ಯೆಯಾಗುತ್ತಿದ್ದು, ಮೀನು ಸಾಗಾಟ ವಾಹನಗಳ ಉಪಟಳಕ್ಕೆ ಕಡಿವಾಣ ಹಾಕಲಾಗುವುದು ಎಂದು ಡಿಸಿಪಿ ಹನುಮಂತರಾಯ ತಿಳಿಸಿದರು.

ಮೀನು ಸಾಗಾಟ ವಾಹನಗಳ ಮೂಲ ಸಮಸ್ಯೆ ಮಂಗಳೂರಿನ ಬಂದರ್‌ನಿಂದಲೇ ಆರಂಭವಾಗುತ್ತದೆ. ಹಾಗಾಗಿ ಬಂದರ್ ಸೇರಿದಂತೆ ವಿವಿಧೆಡೆ ಎರಡು ಪೊಲೀಸ್ ತಂಡಗಳನ್ನು ನೇಮಿಸಿ ಕಾರ್ಯಾಚರಣೆ ನಡೆಸಲಾಗುವುದು. ಜೊತೆಗೆ ಸ್ಥಳೀಯ ಠಾಣೆಯ ಪೊಲೀಸರನ್ನು ಬಳಸಿಕೊಳ್ಳಬಹುದಾಗಿದೆ. ಈ ಕಾರ್ಯಾಚರಣೆಯನ್ನು 10 ದಿನಗಳವರೆಗೆ ನಿರಂತರವಾಗಿ ನಡೆಸಬೇಕು. ಹೀಗಾದಲ್ಲಿ ಮೀನು ಸಾಗಾಟ ವಾಹನಗಳ ಉಪಟಳಕ್ಕೆ ಕಡಿವಾಣ ಹಾಕಲು ಸಾಧ್ಯವಾಗುತ್ತದೆ ಎಂದು ಅವರು ತಿಳಿಸಿದರು.

ಭಿಕ್ಷುಕರ ಕಾಟ
ನಗರದಲ್ಲಿ ಕ್ಲಾಕ್‌ಟವರ್, ಹಂಪನಕಟ್ಟೆ, ಸ್ಟೇಟ್‌ಬ್ಯಾಂಕ್ ಪರಿಸರದಲ್ಲಿ ದಿನದಿಂದ ದಿನಕ್ಕೆ ಭಿಕ್ಷುಕರ ಕಾಟ ಜಾಸ್ತಿಯಾಗಿದೆ. ಬಸವನ ಕುಣಿಸುವವರೂ ತೊಂದರೆ ಕೊಡುತ್ತಿದ್ದಾರೆ. ನಾಗರಿಕರಿಗೆ ಸಂಚರಿಸಲು ಕಷ್ಟವಾಗುತ್ತಿದೆ ಎಂದು ಮಹಿಳೆಯೊಬ್ಬರು ದೂರು ನೀಡಿದರು. ಈ ಬಗ್ಗೆ ಪೊಲೀಸರನ್ನು ನಿಯೋಜಿಸುವುದಾಗಿ ಡಿಸಿಪಿ ಭರವಸೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News