ಉಡುಪಿಯಲ್ಲಿ ಇನ್ನೂ 3 ಮಂಗಗಳ ಶವ ಪತ್ತೆ: ಶಂಕಿತ ರೋಗಿಯ ರಕ್ತ ಪರೀಕ್ಷೆಗೆ ರವಾನೆ

Update: 2019-01-11 15:58 GMT
ಸಾಂದರ್ಭಿಕ ಚಿತ್ರ

ಉಡುಪಿ, ಜ.11: ಜಿಲ್ಲೆಯಲ್ಲಿ ಇಂದು ಇನ್ನೂ ಮೂರು ಮಂಗಗಳ ಶವ ಗಳು ಪತ್ತೆಯಾಗಿದ್ದು, ಇದರಿಂದ ಕಳೆದ ನಾಲ್ಕು ದಿನಗಳಿಂದ ಸತ್ತು ಪತ್ತೆಯಾಗಿರುವ ಮಂಗಗಳ ಶವಗಳ ಸಂಖ್ಯೆ 11ಕ್ಕೇರಿದೆ. ಇವುಗಳಲ್ಲಿ ಆರು ಮಂಗಗಳ ವಿಸೇರಾವನ್ನು ಪರೀಕ್ಷೆಗಾಗಿ ಶಿವಮೊಗ್ಗದಲ್ಲಿರುವ ವಿಡಿಎಲ್ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ (ಡಿಎಚ್‌ಓ) ಡಾ.ರೋಹಿಣಿ ತಿಳಿಸಿದ್ದಾರೆ.

ಈ ನಡುವೆ ಇಂದು ಬ್ರಹ್ಮಾವರದ ಖಾಸಗಿ ಆಸ್ಪತ್ರೆಯಿಂದ ಒಬ್ಬ ರೋಗಿಯ ರಕ್ತವನ್ನು ಶಂಕಿತ ಕ್ಯಾಸನೂರು ಅರಣ್ಯ ಕಾಯಿಲೆ (ಕೆಎಫ್‌ಡಿ- ಮಂಗನ ಕಾಯಿಲೆ) ಪರೀಕ್ಷೆಗಾಗಿ ಶಿವಮೊಗ್ಗಕ್ಕೆ ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ. ಕೊಕ್ಕರ್ಣೆ ಮೂಲದ ಈ ರೋಗಿ ಇತ್ತೀಚೆಗೆ ಸಾಗರದಿಂದ ಮರಳಿದ್ದು, ಜ್ವರದಿಂದ ಬಳಲುತಿದ್ದಾರೆ ಎಂದು ಹೇಳಲಾಗುತ್ತಿದೆ.

ಶುಕ್ರವಾರ ಕುಂದಾಪುರ ತಾಲೂಕಿನ ಹೊಸಂಗಡಿ, ಬೆಳ್ವೆ ಹಾಗೂ ಕಂಡ್ಲೂರು ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ತಲಾ ಒಂದೊಂದು ಮಂಗಗಳ ಶವಗಳು ಪತ್ತೆಯಾಗಿದ್ದು, ಇವುಗಳಲ್ಲಿ ಹೊಸಂಗಡಿ ಹಾಗೂ ಬೆಳ್ವೆಯ ಮಂಗಗಳ ಪೋಸ್ಟ್‌ಮಾರ್ಟಂ ಮಾಡಿ ಅವುಗಳ ವಿಸೇರಾವನ್ನು ಶಿವಮೊಗ್ಗಕ್ಕೆ ಕಳುಹಿಸಲಾಗಿದೆ. ಕಂಡ್ಲೂರಿನ ಕಾವ್ರಾಡಿಯಲ್ಲಿ ಇಂದು ಬೆಳಗ್ಗೆ ಸಂಪೂರ್ಣವಾಗಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿರುವುದರಿಂದ ಅದನ್ನು ಪರೀಕ್ಷೆಗೆ ಕಳುಹಿಸಲಾಗಿಲ್ಲ ಎಂದು ಡಾ.ರೋಹಿಣಿ ತಿಳಿಸಿದರು.

ಬೆಳ್ವೆ ಪಿಎಚ್‌ಸಿ ವ್ಯಾಪ್ತಿಯ ಆಲ್ಬಾಡಿ ಚಿತ್ತೂರು ಕ್ರಾಸ್ ಬಳಿ ಇಂದು ಬೆಳಗ್ಗೆ ಮಂಗನ ಶವ ಪತ್ತೆಯಾಗಿದ್ದು, ತಕ್ಷಣ ಅಲ್ಲಿಗೆ ತೆರಳಿ, ಪಶು ವೈದ್ಯಾಧಿಕಾರಿಗಳು ಅದರ ಪೋಸ್ಟ್ ಮಾರ್ಟಂ ಮಾಡಿ ಪ್ರಮುಖ ಅಂಗಗಳನ್ನು ಶಿವಮೊಗ್ಗಕ್ಕೆ ಕಳುಹಿಸಲು ವ್ಯವಸ್ಥೆ ಮಾಡಲಾಗಿದೆ ಎಂದು ಕುಂದಾಪುರ ತಾಲೂಕು ವೈದ್ಯಾಧಿಕಾರಿ ಡಾ.ನಾಗಭೂಷಣ ಉಡುಪ ತಿಳಿಸಿದ್ದಾರೆ.

ಅದೇ ರೀತಿ ಕಂಡ್ಲೂರಿನ ಕಾವ್ರಾಡಿಯಲ್ಲಿ ಇಂದು ಬೆಳಗ್ಗೆ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ ಮಂಗನ ಶವ ಪತ್ತೆಯಾಗಿದ್ದು, ಅದನ್ನು ಪ್ರಾಥಮಿಕ ಪರೀಕ್ಷೆಯ ಬಳಿಕ ಸುಡಲಾಯಿತು ಎಂದು ಅವರು ತಿಳಿಸಿದರು. ಕುಂದಾಪುರ ತಾಲೂಕು ವ್ಯಾಪ್ತಿಯಲ್ಲಿ ಈವರೆಗೆ ಐದು ಮಂಗಗಳ ವಿಸೇರಾವನ್ನು ಪರೀಕ್ಷೆಗಾಗಿ ಶಿವಮೊಗ್ಗಕ್ಕೆ ರವಾನಿಸಲಾಗಿದೆ. ಶಿವಮೊಗ್ಗದಿಂದ ಅವುಗಳನ್ನು ಹೆಚ್ಚಿನ ಪರೀಕ್ಷೆಗೆ ಪುಣೆಗೆ ಕಳುಹಿಸಲಾಗುತ್ತದೆ. ಪುಣೆಯಿಂದ ಅಂತಿಮ ವರದಿಯನ್ನು ನಿರೀಕ್ಷಿಸಲಾಗುತ್ತಿದೆ ಎಂದವರು.

ಜಿಲ್ಲೆಯಲ್ಲಿ ಶಂಕಿತ ಮಂಗನ ಕಾಯಿಲೆ ಪ್ರಕರಣ ಮನುಷ್ಯನಲ್ಲಿ ಇದುವರೆಗೆ ಎಲ್ಲಿಂದಲೂ ವರದಿಯಾಗಿಲ್ಲ. ಹೀಗಾಗಿ ಜನರು ಗಾಬರಿಯಾಗದೇ ಸಂಪೂರ್ಣ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಡಾ.ರೋಹಿಣಿ ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News