ಮಧುಕರ್ ಶೆಟ್ಟಿ ಕಟ್ಟಿದ ಸೈನ್ಯದಿಂದ ಇಲಾಖೆಯಲ್ಲಿ ಪರಿಣಾಮಕಾರಿ ಕೆಲಸ: ಐಜಿಪಿ ಅರುಣ್ ಚಕ್ರವರ್ತಿ

Update: 2019-01-11 16:30 GMT

ಉಡುಪಿ, ಜ.11: ಪ್ರಾಮಾಣಿಕ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ಧ ಮಧುಕರ್ ಶೆಟ್ಟಿ ಒಬ್ಬ ವ್ಯಕ್ತಿಯಾಗಿರದೆ ಅದ್ಭುತ ಆಗಿದ್ದರು. ಅವರು ಈಗಾಗಲೇ ಸೃಷ್ಠಿಸಿದ ತನ್ನದೇ ಆದ ಸೈನ್ಯವು ಅವರ ಹಾಗೆಯೇ ಸದ್ದಿಲ್ಲದೆ ಹಾಗೂ ಪರಿಣಾಮಕಾರಿಯಾಗಿ ಸಮಾಜ ಮತ್ತು ಇಲಾಖೆಯಲ್ಲಿ ಕೆಲಸ ಮಾಡುತ್ತಿದೆ ಎಂದು ಮಂಗಳೂರು ಪಶ್ಚಿಮ ವಲಯ ಐಜಿಪಿ ಅರುಣ್ ಚಕ್ರವರ್ತಿ ಹೇಳಿದ್ದಾರೆ.

ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ವತಿಯಿಂದ ಶುಕ್ರವಾರ ಉಡುಪಿ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಭವನದಲ್ಲಿ ಆಯೋಜಿಸಲಾದ ಐಪಿಎಸ್ ಅಧಿಕಾರಿ ದಿವಂಗತ ಮಧುಕರ್ ಶೆಟ್ಟಿಗೆ ನುಡಿ ಗೌರವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.

ಮಧುಕರ್ ಶೆಟ್ಟಿ ಭ್ರಷ್ಟಾಚಾರವನ್ನು ಒಂದು ಕಾಯಿಲೆಯಾಗಿ ನೋಡದೆ ಮಾನವೀಯ ದೃಷ್ಠಿಕೋನದಲ್ಲಿ ಕಂಡ ಏಕೈಕ ಹಾಗೂ ಪ್ರಥಮ ಅಧಿಕಾರಿಯಾಗಿದ್ದಾರೆ. ಲೋಕಾಯುಕ್ತದಲ್ಲಿ ಕೆಲಸ ಮಾಡುವುದು ಅಷ್ಟು ಸುಲಭ ಅಲ್ಲ. ಅದು ಬಹಳ ಸವಾಲಿನ ಕೆಲಸ ಆಗಿದೆ. ಅದಕ್ಕೆ ಪ್ರತಿದಿನ ತಪಸ್ಸು ಮಾಡಬೇಕು. ಆದುದರಿಂದ ಅವರು ದೊಡ್ಡ ತಪಸ್ವಿ ಅಧಿಕಾರಿಯಾಗಿದ್ದರು ಎಂದರು.

ಮಧುಕರ್ ಶೆಟ್ಟಿ ಎಲ್ಲರ ಸ್ನೇಹ ಬಯಸದೆ, ತನಗೆ ಬೇಕಾದ ಬಡವರು, ದೀನದಲಿತರನ್ನು ಹುಡುಕಿಕೊಂಡು ಹೋಗಿ ಅವರ ಸ್ನೇಹ ಬೆಳೆಸಿ ಅವರೊಂದಿಗೆ ಚರ್ಚಿಸಿ ಪ್ರಸ್ತುತ ಸಮಸ್ಯೆಗಳಿಗೆ ಪರಿಹಾರ ಹುಡುಕುತ್ತಿದ್ದರು. ಅವರ ಈ ವಿಚಾರ ಧಾರೆಯಿಂದಲೇ ಅವರು ಇಷ್ಟು ಎತ್ತರಕ್ಕೆ ಬೆಳೆಯಲು ಸಾಧ್ಯವಾಯಿತು ಎಂದು ಐಜಿಪಿ ಹೇಳಿದರು.

ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟ ಅಧ್ಯಕ್ಷ ಮುಹಮ್ಮದ್ ಯಾಸೀನ್ ಮಾತನಾಡಿ, ಓರ್ವ ಪೊಲೀಸ್ ಅಧಿಕಾರಿ ದಕ್ಷ, ಪ್ರಾಮಾಣಿಕನಾಗುವುದು ಬಹಳ ಕಷ್ಟದ ಕೆಲಸ. ಇಂದು ಯಾರು ದಕ್ಷ ಅಧಿಕಾರಿಗಳೆಂದು ಗುರುತಿಸಿ ಕೊಂಡಿದ್ದಾರೋ ಅವರೆಲ್ಲರೂ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಮುಸ್ಲಿಂ ಸಮುದಾಯದ ಇತಿಹಾಸದಲ್ಲಿ ಮರಣೋತ್ತರವಾಗಿ ಓರ್ವ ಅಧಿಕಾರಿಯನ್ನು ಗೌರವಿಸುತ್ತಿರುವುದು ಇದೇ ಪ್ರಥಮ. ಒಳ್ಳೆಯತನ, ದಕ್ಷತೆ ಹಾಗೂ ಪ್ರಾಮಾಣಿಕತೆಯನ್ನು ಗುರುತಿಸುವುದು ದೊಡ್ಡದು. ಪ್ರತಿಯೊಂದನ್ನು ಜಾತಿ, ಧರ್ಮದ ಕನ್ನಡಕ ಹಾಕಿಕೊಂಡು ನೋಡಬಾರದು. ಮಧುಕರ್ ಶೆಟ್ಟಿ ಈ ದೇಶದ ಸೊತ್ತು. ನೂರಾರು ಸಂಖ್ಯೆಯ ಮಧುಕರ್ ಶೆಟ್ಟಿ ಹುಟ್ಟಿಬರಬೇಕು ಎಂದು ತಿಳಿಸಿದರು.

ಉಡುಪಿ ರಥಬೀದಿ ಗೆಳೆಯರು ಅಧ್ಯಕ್ಷ ಮುರಳೀಧರ ಉಪಾಧ್ಯ ಮಾತನಾಡಿ, ಮಧುಕರ್ ಶೆಟ್ಟಿಯಂತಹ ಅಧಿಕಾರಿಗಳ ಆದರ್ಶಗಳನ್ನು ದಾಖಲೀಕರಣ ಮಾಡಬೇಕು. ಅವರ ಹೆಸರಿನಲ್ಲಿ ಕನ್ನಡದಲ್ಲಿ ಐಪಿಎಸ್ ಬರೆಯುವ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಕೊಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳ ಬೇಕು ಎಂದರು.

ನಿವೃತ್ತ ಹೆಡ್‌ಕಾನ್ಸ್‌ಸ್ಟೇಬಲ್ ದಯಾನಂದ, ಉಡುಪಿ ಶೋಕಮಾತಾ ಇಗರ್ಜಿಯ ಧರ್ಮಗುರು ಫಾ.ವಲೇರಿಯನ್ ಮೆಂಡೋನ್ಸಾ, ಉಡುಪಿ ಬಂಟರ ಸಂಘದ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ಮಲ್ಪೆ ಅಬೂಬಕರ್ ಸಿದ್ಧೀಕ್ ಮಸೀದಿಯ ಖತೀಬ್ ಮೌಲಾನ ಇಮ್ರಾನುಲ್ಲಾ ಖಾನ್ ಮನ್ಸೂರಿ, ಉದ್ಯಮಿ ಮನೋಹರ್ ಶೆಟ್ಟಿ ನುಡಿನಮನ ಸಲ್ಲಿಸಿದರು.

ಒಕ್ಕೂಟದ ಹಿರಿಯ ಉಪಾಧ್ಯಕ್ಷ ಹಾಜಿ ಅಬ್ದುಲ್ಲಾ ಪರ್ಕಳ ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಎಂ.ಎ.ಮೌಲಾ ಸ್ವಾಗತಿಸಿದರು. ಕಾರ್ಯಕ್ರಮದ ಸಂಚಾಲಕ ಇಸ್ಮಾಯಿಲ್ ಹುಸೈನ್ ವಂದಿಸಿದರು. ಅಬ್ದುಲ್ ಅಝೀಝ್ ಉದ್ಯಾವರ ಕಾರ್ಯಕ್ರಮ ನಿರೂಪಿಸಿದರು.

ಹುದ್ದೆಗಳನ್ನು ಅವರೇ ಆರಿಸಿದರು
ಮಧುಕರ್ ಶೆಟ್ಟಿಗೆ ಬೇಕಾದ ಹುದ್ದೆ, ನ್ಯಾಯ ಸಿಕ್ಕಿಲ್ಲ ಎಂಬುದಕ್ಕಿಂತ ಅವರಾಗಿಯೇ ತನ್ನ ತತ್ವ, ಸಿದ್ಧಾಂತಕ್ಕೆ ಸರಿಹೊಂದುವ ಹುದ್ದೆಯನ್ನು ಹುಡುಕಿಕೊಂಡು ಹೋಗಿ ಆಯ್ಕೆ ಮಾಡಿಕೊಂಡರು. ಅದರಲ್ಲಿ ಪ್ರಥಮವಾಗಿ ವೀರಪ್ಪನ್ ವಿರುದ್ಧ ಕಾರ್ಯಾಚರಣೆ ನಡೆಸುವ ವಿಶೇಷ ಕಾರ್ಯ ಪಡೆ ಹಾಗೂ ಎರಡನೆ ಹುದ್ದೆ ನಕ್ಸಲ್ ನಿಗ್ರಹ ಪಡೆ. ಈ ಎರಡು ಹುದ್ದೆಗಳನ್ನು ಸಮರ್ಥವಾಗಿ ನಿಭಾಯಿಸಿದ ಪರಿಣಾಮ ಅವರು ಲೋಕಾಯುಕ್ತಕ್ಕೆ ಆಯ್ಕೆಯಾದರು ಎಂದು ಐಜಿಪಿ ಅರುಣ್ ಚಕ್ರವರ್ತಿ ತಿಳಿಸಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News