ಉಡುಪಿಯಲ್ಲಿ ಮೂರು ದಿನಗಳ ಹೆಲಿಟೂರಿಸಂಗೆ ಚಾಲನೆ

Update: 2019-01-11 16:32 GMT

ಉಡುಪಿ, ಜ.11: ಪ್ರಕೃತಿ ಸೌಂದರ್ಯಕ್ಕೆ ಹೆಸರಾದ, ಅನೇಕ ಸುಂದರ ರಮಣೀಯ ಸ್ಥಳಗಳನ್ನು ಹೊಂದಿರುವ, ವಿಶಾಲ ಕಡಲು, ಸುಂದರ ಬೀಚ್‌ಗಳನ್ನು ಹೊಂದಿರುವ ಕರ್ನಾಟಕದ ಕರಾವಳಿಯ ಮೂರು ಜಿಲ್ಲೆಗಳನ್ನು ಕೇಂದ್ರೀಕರಿಸಿದಂತೆ ಹೆಲಿಟೂರಿಸಂ ಹಾಗೂ ಪ್ರವಾಸೋದ್ಯಮದ ಅಭಿವೃದ್ಧಿಗೆ ವಿಪುಲ ಅವಕಾಶಗಳಿದ್ದು, ಇದಕ್ಕಾಗಿ ಪ್ರವಾಸೋದ್ಯಮ ಸಚಿವ ಸಾ.ರಾ. ಮಹೇಶ್‌ರೊಂದಿಗೆ ಚರ್ಚಿಸುವುದಾಗಿ ಶಾಸಕ ಕೆ.ರಘುಪತಿ ಭಟ್ ಹೇಳಿದ್ದಾರೆ.

ನಗರದ ಆದಿಉಡುಪಿ ಹೆಲಿಪ್ಯಾಡ್‌ನಲ್ಲಿ ಜಿಲ್ಲಾಡಳಿತದ ವತಿಯಿಂದ ಮೂರು ದಿನಗಳ ಕಾಲ ಆಯೋಜಿಸಲಾದ ಹೆಲಿಟೂರಿಸಂಗೆ ಶುಕ್ರವಾರ ಚಾಲನೆ ನೀಡಿ ಅವರು ಮಾತನಾಡುತಿದ್ದರು.

ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳಿಗೆ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಈ ಮೂರು ಜಿಲ್ಲೆಗಳನ್ನು ಕೇಂದ್ರೀಕರಿಸಿದಂತೆ ಹಾಗೂ ಉಡುಪಿ ಜಿಲ್ಲೆಯೊಳಗೆ ಹೆಲಿಟೂರಿಸಂ ಅಭಿವೃದ್ಧಿಗೆ ಸಾಕಷ್ಟು ಅವಕಾಶಗಳಿವೆ. ಇದನ್ನು ಶೀಘ್ರವೇ ಉಡುಪಿ ಜಿಲ್ಲೆಗೆ ಆಗಮಿಸುವ ಸಚಿವ ಮಹೇಶ್‌ರ ಗಮನಕ್ಕೆ ತಂದು, ಮುಖ್ಯವಾಗಿ ಉಡುಪಿ ಜಿಲ್ಲೆಯಲ್ಲಿ ಪ್ರವಾಸೋದ್ಯಮದ ಅಭಿವೃದ್ದಿಗೆ ಬೇಕಾದ ಕ್ರಮ ಕೈಗೊಳ್ಳುವುದಾಗಿ ರಘುಪತಿ ಭಟ್ ತಿಳಿಸಿದರು.

ಉಡುಪಿ ಹೆಲಿಟೂರಿಸಂನ ಆಯೋಜಕ ಸುದೇಶ್ ಶೆಟ್ಟಿ ಮಾತನಾಡಿ, 2016ರಲ್ಲಿ ಪ್ರಾರಂಭಗೊಂಡು ಇದೀಗ ಉಡುಪಿಯಲ್ಲಿ ನಾಲ್ಕನೇ ಬಾರಿಗೆ ಹೆಲಿಟೂರಿಸಂನ್ನು ಆಯೋಜಿಸಲಾಗುತ್ತಿದೆ. ಈ ಬಾರಿ ಜ.11,12 ಮತ್ತು 13 ರಂದು ಇದು ನಡೆಯಲಿದೆ. ಬೆಂಗಳೂರು ಮೂಲದ ಚಿಪ್ಸನ್ ಏವಿಯೇಷನ್‌ನ ಹೆಲಿಕಾಪ್ಟರ್ ಪ್ರತಿದಿನ 30ರಿಂದ 35 ಹಾರಾಟ ನಡೆಸಲಿದೆ ಎಂದರು.

ಹಾರಾಟದಲ್ಲಿ ಮೂರು ವಿಭಾಗಗಳಿದ್ದು, 8 ನಿಮಿಷದ ಸಾಮಾನ್ಯ ಹಾರಾಟ, 10 ನಿಮಿಷಗಳ ಅಡ್ವೆಂಚರ್ ಹಾರಾಟ ಮತ್ತು 13 ನಿಮಿಷಗಳ ದೀರ್ಘ ಹಾರಾಟದ ಪ್ಯಾಕೇಜ್‌ಗಳಿದ್ದು, ಇವುಗಳಿಗೆ ಕ್ರಮವಾಗಿ 2,500ರೂ., 3,000ರೂ. ಹಾಗೂ 3,500ರೂ. ಶುಲ್ಕ ವಿಧಿಸಲಾಗುತ್ತದೆ. 2ವರ್ಷದ ಕೆಳಗಿನ ಮಗುವಿಗೆ ಶುಲ್ಕವಿರುವುದಿಲ್ಲ. ಒಂದು ಹಾರಾಟದಲ್ಲಿ ಆರು ಮಂದಿಗೆ ಅವಕಾಶಗಳಿವೆ ಎಂದರು.

ಶನಿವಾರ ಮತ್ತು ರವಿವಾರಗಳ ಹಾರಾಟಕ್ಕೆ ಈಗಾಗಲೇ ಮುಂಗಡ ಬುಕ್ಕಿಂಗ್ ಆಗಿದೆ. ಆಸಕ್ತರು ದೂರವಾಣಿ ಸಂಖ್ಯೆ: 9741248716, 9741249328ನ್ನು ಸಂಪರ್ಕಿಸಿ ಹೆಸರು ನೊಂದಾಯಿಸಿಕೊಳ್ಳಬಹುದು. ಅಲ್ಲದೇ ಆದಿಉಡುಪಿ ಹೆಲಿಪ್ಯಾಡ್ ಬಳಿ ಸ್ಥಳದಲ್ಲೇ ಬುಕ್ಕಿಂಗ್‌ಗೂ ಅವಕಾಶವಿದೆ. ಕೋಟೇಶ್ವರದ ಯುವ ಮೆರಿಡಿಯನ್‌ನಲ್ಲಿ ಜ.4ರಿಂದ 6ರವರೆಗೆ ನಡೆದ ಹೆಲಿಟೂರಿಸಂ ಅತ್ಯಂತ ಯಶಸ್ವಿಯಾಗಿದೆ. ಉಡುಪಿಯಲ್ಲೂ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಸುದೇಶ್ ಶೆಟ್ಟಿ ತಿಳಿಸಿದರು.

ಬೆಂಗಳೂರಿನ ಚಿಪ್ಸನ್ ಏವಿಯೇಷನ್ ಸಂಸ್ಥೆಯ ಪೈಲೆಟ್ ರಮೇಶ್ ಭೂಮಿನಾಥನ್ ಮಾತನಾಡಿ, ಸಾರ್ವಜನಿಕರು ಹೆಲಿಕಾಪ್ಟರ್ ಹಾರಾಟದ ರೋಚಕ ಅನುವವನ್ನು ಪಡೆದುಕೊಳ್ಳಬಹುದು ಎಂದರು.

ಕಾರ್ಯಕ್ರಮದಲ್ಲಿ ಮೀನುಗಾರಿಕಾ ಪೆಡರೇಷನ್ ಅಧ್ಯಕ್ಷ ಯಶಪಾಲ್ ಸುವರ್ಣ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ರೋಶನ್ ಕುಮಾರ್ ಶೆಟ್ಟಿ, ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಅರುಣ್‌ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News