ತಾಲಿಬಾನ್ ಜೊತೆ ಮಾತುಕತೆ ಸಾಧ್ಯವಿದ್ದರೆ ಹುರಿಯತ್ ಜೊತೆ ಯಾಕಿಲ್ಲ: ಫಾರೂಕ್ ಅಬ್ದುಲ್ಲಾ

Update: 2019-01-11 16:45 GMT

ಕೊಲ್ಕತಾ,ಜ.11: ಅಪ್ಘಾನಿಸ್ತಾನದಲ್ಲಿ ತಾಲಿಬಾನ್ ಜೊತೆ ಶಾಂತಿ ಮಾತುಕತೆ ನಡೆಸಬೇಕಿದೆ ಎಂಬ ಭಾರತೀಯ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ, ತಾಲಿಬಾನ್ ಜೊತೆ ಮಾತುಕತೆ ಸಾಧ್ಯವಾದರೆ ಹುರಿಯತ್ ಜೊತೆ ಯಾಕೆ ಸಾಧ್ಯವಿಲ್ಲ ಎಂದು ಪ್ರಶ್ನಿಸಿದ್ದಾರೆ.

ಕೊಲ್ಕತಾದಲ್ಲಿ ಜಮ್ಮು ಆ್ಯಂಡ್ ಕಾಶ್ಮೀರ್-ದ ರೋಡ್ ಎಹೆಡ್ ಎಂಬ ಕಾರ್ಯಾಗಾರದಲ್ಲಿ ಮಾತನಾಡುತ್ತಿದ್ದ ಅಬ್ದುಲ್ಲಾ, ರಾಜ್ಯದಲ್ಲಿ ಹಿಂಸಾಚಾರವನ್ನು ಕೊನೆಗೊಳಿಸಲು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯಂಥ ನಾಯಕರು ಪ್ರತ್ಯೇಕತಾವಾದಿಗಳ ಜೊತೆ ಮಾತುಕತೆ ನಡೆಸಿದ್ದರು ಎಂದು ತಿಳಿಸಿದ್ದಾರೆ. ಅಫ್ಘಾನಿಸ್ತಾನದಲ್ಲಿ ಶಾಂತಿ ನೆಲೆಸಲು ತಾಲಿಬಾನ್ ಜೊತೆ ಮಾತುಕತೆ ನಡೆಸಬೇಕು ಎಂದು ಜನರಲ್ ರಾವತ್ ಬುಧವಾರ ಅಭಿಪ್ರಾಯಿಸಿದ್ದರು.

ಆದರೆ ಈ ಮಾತುಕತೆ ಯಾವುದೇ ಪೂರ್ವ ಷರತ್ತಿಲ್ಲದೆ ನಡೆಯಬೇಕು ಎಂದು ಅವರು ತಿಳಿಸಿದ್ದರು. ಸೇನೆ ಅಥವಾ ಒತ್ತಡದಿಂದ ಕಾಶ್ಮೀರದ ಆಂತರಿಕ ಸಮಸ್ಯೆಯನ್ನು ಬಗೆಹರಿಸಲು ಸಾಧ್ಯವಿಲ್ಲ ಎಂದು ತಿಳಿಸಿರುವ ನ್ಯಾಶನಲ್ ಕಾನ್ಫರೆನ್ಸ್ ಪಕ್ಷದ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಲೋಕಸಭೆ ಚುನಾವಣೆಯ ನಂತರ ಮಾತುಕತೆ ಪುನರಾರಂಭಿಸಲಾಗುವುದು ಎಂಬ ಭರವಸೆಯನ್ನು ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News