ನವೆಂಬರ್‌ ನಲ್ಲಿ ಶೇ.0.5ಕ್ಕೆ ಕುಸಿದ ಕೈಗಾರಿಕಾ ಉತ್ಪಾದನೆ

Update: 2019-01-11 16:51 GMT

ಹೊಸದಿಲ್ಲಿ,ಜ.11: ಉತ್ಪಾದನಾ ಚಟುವಟಿಕೆಗಳಲ್ಲಿ ಉಂಟಾದ ಕುಸಿತದ ಪರಿಣಾಮವಾಗಿ ನವೆಂಬರ್ ತಿಂಗಳಲ್ಲಿ ಕೈಗಾರಿಕಾ ಉತ್ಪಾದನೆ ಪ್ರಗತಿಯು ಶೇ.0.5 ಆಗಿದೆ ಎಂದು ಸರಕಾರ ಶುಕ್ರವಾರ ತಿಳಿಸಿದೆ.

ಇದು ಜೂನ್ 2017ರಿಂದೀಚೆಗೆ ದಾಖಲಾದ ಕೈಗಾರಿಕಾ ಉತ್ಪಾದನೆಯ ಅತ್ಯಂತ ನಿಧಾನ ಪ್ರಗತಿದರವಾಗಿದೆ. ಕೈಗಾರಿಕೆ ಉತ್ಪಾದನೆ ಸೂಚಿ (ಐಐಪಿ) ನಿಗದಿಪಡಿಸುವ ಕೈಗಾರಿಕಾ ಉತ್ಪಾದನೆ ಅಥವಾ ಫ್ಯಾಕ್ಟರಿ ಹೊರಹರಿವು ಆರ್ಥಿಕ ತಜ್ಞರ ನಿರೀಕ್ಷೆಯನ್ನು ಬೃಹತ್ ಅಂತರದಲ್ಲಿ ಹುಸಿಯಾಗಿಸಿದೆ. ನವೆಂಬರ್‌ನಲ್ಲಿ ಕೈಗಾರಿಕಾ ಉತ್ಪಾದನೆಯು ಶೇ.4.1ರ ದರದಲ್ಲಿ ಪ್ರಗತಿ ಕಾಣುವುದು ಎಂಬ ನಿರೀಕ್ಷೆಯನ್ನು ಆರ್ಥಿಕ ತಜ್ಞರು ಹೊಂದಿದ್ದರು ಎಂದು ರಾಯ್ಟರ್ಸ್ ವರದಿ ಮಾಡಿದೆ.

ಅಕ್ಟೋಬರ್ ತಿಂಗಳಲ್ಲಿ ಕೈಗಾರಿಕಾ ಉತ್ಪಾದನೆಯನ್ನು ಶೇ.8.1ರಿಂದ ಶೇ.8.4ಕ್ಕೆ ಪರಿಷ್ಕರಿಸಲಾಗಿದೆ ಎನ್ನುವ ಅಂಶ ಕೇಂದ್ರ ಅಂಕಿಅಂಶಗಳ ಕಚೇರಿ (ಸಿಎಸ್‌ಒ)ನ ದತ್ತಾಂಶದಿಂದ ತಿಳಿದುಬರುತ್ತದೆ. ನವೆಂಬರ್‌ನಲ್ಲಿ ಗಣಿಗಾರಿಕೆ ಮತ್ತು ವಿದ್ಯುತ್‌ಚಕ್ತಿಯಲ್ಲಿ ಪ್ರಗತಿ ಕ್ರಮವಾಗಿ ಶೇ.2.7 ಮತ್ತು ಶೇ. 5.1 ಆಗಿದೆ. ಕೈಗಾರಿಕಾ ಉತ್ಪಾದನೆ ಸೂಚಿಯಲ್ಲಿ ಗಣಿಗಾರಿಕೆಯ ಪಾಲು ಶೇ.14.4 ಆಗಿದೆ. ಪ್ರಸಕ್ತ ವಿತ್ತ ವರ್ಷದ ಮೊದಲ ಎಂಟು ತಿಂಗಳಲ್ಲಿ ಕೈಗಾರಿಕಾ ಉತ್ಪಾದನೆಯು ಶೇ.5ರ ದರದಲ್ಲಿ ಪ್ರಗತಿ ಕಂಡಿದೆ ಎಂದು ಸರಕಾರ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News