ಅಜಿತ್ ಬಂಧನಕ್ಕೆ ಒತ್ತಾಯ: ಸುರತ್ಕಲ್ ಮುಸ್ಲಿಂ ಐಕ್ಯತಾ ವೇದಿಕೆಯಿಂದ ಪ್ರತಿಭಟನಾ ಸಭೆ

Update: 2019-01-12 08:37 GMT

ಮಂಗಳೂರು, ಜ.11: ಪ್ರವಾದಿ ಮುಹಮ್ಮದ್ ಅವರನ್ನು ನಿಂದಿಸಿದ ಆರೋಪ ಎದುರಿಸುತ್ತಿರುವ ಖಾಸಗಿ ಸುದ್ದಿವಾಹಿನಿಯ ನಿರೂಪಕ ಅಜಿತ್ ಹನುಮಕ್ಕನವರ್ ವಿರುದ್ಧ ಸುರತ್ಕಲ್ ಮುಸ್ಲಿಂ ಐಕ್ಯತಾ ವೇದಿಕೆಯಿಂದ ಕೃಷ್ಣಾಪುರದ ಪ್ಯಾರಡೈಸ್ ಮೈದಾನದಲ್ಲಿ ಶುಕ್ರವಾರ ಪ್ರತಿಭಟನಾ ಸಭೆ ನಡೆಯಿತು.

ಸಭೆಯನ್ನುದ್ದೇಶಿಸಿ ಮಾತನಾಡಿದ ಚೊಕ್ಕಬೆಟ್ಟು ಮುಹಿಯುದ್ದೀನ್ ಜುಮ್ಮಾ ಮಸೀದಿಯ ಖತೀಬರಾದ ಅಬ್ದುಲ್ ಅಝೀಝ್ ದಾರಿಮಿ, ಇಸ್ಲಾಂ ಒಂದು ಶಾಂತಿಯ ಧರ್ಮವಾಗಿದೆ. ಮುಹಮ್ಮದ್ ಪೈಗಂಬರ್ ಶಾಂತಿಯ ಸಾರಿದ ಪ್ರವಾದಿಯಾಗಿದ್ದಾರೆ. ಅಂತಹ ಪ್ರವಾದಿಯ ಬಗ್ಗೆ ಅವಹೇಳನಕಾರಿಯಾಗಿ ನಿಂದಿಸಿದ ಅಜಿತ್ ಹನುಮಕ್ಕನವರ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸರಕಾರವನ್ನು ಒತ್ತಾಯಿಸಿದರು.

ಪಿಎಫ್‌ಐ ರಾಜ್ಯ ಸಮಿತಿ ಸದಸ್ಯ ಶಾಫಿ ಬೆಳ್ಳಾರೆ ಮಾತನಾಡಿ, ಭಗವಾನ್ ಸ್ವಧರ್ಮ ನಿಂದಕ, ಯಾವ ಮುಸ್ಲಿಮರು ಕೂಡ ಆತನ ಪರ ವಹಿಸಿ ಮಾತನಾಡಲು ಬಯಸುವುದಿಲ್ಲ. ಹಾಗಿದ್ದು ಖಾಸಗಿ ಸುದ್ದಿ ವಾಹಿನಿಯ ನಿರೂಪಕ ಅಜಿತ್ ಹನುಮಕ್ಕನವರ್ ಧರ್ಮ ನಿಂದನೆಯನ್ನು ಖಂಡಿಸುವುದನ್ನು ಬಿಟ್ಟು ಸ್ವತಃ ಒಬ್ಬ ಪತ್ರಕರ್ತರಾಗಿ ಇನ್ನೊಂದು ಧರ್ಮದ ಪ್ರವಾದಿಯನ್ನು ನಿಂದಿಸುವುದು ಇಡೀ ಪತ್ರಿಕೋದ್ಯಮಕ್ಕೆ ಕಳಂಕ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಎಂಐವಿ ಸುರತ್ಕಲ್ ಅಧ್ಯಕ್ಷ ಮುಹಮ್ಮದ್ ಅಶ್ರಫ್ ಬದ್ರಿಯಾ ಅಧ್ಯಕ್ಷತೆ ವಹಿಸಿದ್ದರು. ಕೃಷ್ಣಾಪುರ 7ನೇ ಬ್ಲಾಕ್ ಕೇಂದ್ರ ಜುಮಾ ಮಸೀದಿಯ ಖತೀಬ್ ಫಾರೂಕ್ ಸಖಾಫಿ, ಸುರತ್ಕಲ್ ಮುಹಿಯುದ್ದೀನ್ ಜುಮಾ ಮಸೀದಿಯ ಖತೀಬ್ ಮುಹಿನುದ್ದೀನ್ ರಝ್ವಿ ಅಲ್ ಅಮ್ಜದಿ, ಸೂರಿಂಜೆ ಮಸೀದಿಯ ಖತೀಬ್ ಅಬೀಬುರ್ರಹ್ಮಾನ್ ತಂಙಳ್, 7ನೆ ಬ್ಲಾಕ್ ಬದ್ರಿಯಾ ಮಸೀದಿ ಅಧ್ಯಕ್ಷ ಮುಮ್ತಾಝ್ ಅಲಿ, ಮುಸ್ಲಿಂ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಅಶ್ರಫ್,  ಮತ್ತಿತರರು ಉಪಸ್ಥಿತರಿದ್ದರು.

ಸಭೆಯಲ್ಲಿ ಪ್ರವಾದಿಯನ್ನು ನಿಂದಿಸಿದ ಖಾಸಗಿ ಸುದ್ದಿ ವಾಹಿನಿಯ ನಿರೂಪಕ ಅಜಿತ್ ಹನುಮಕ್ಕನವರ್ ವಿರುದ್ಧ ದೇಶ ವಿದೇಶಗಳಲ್ಲಿ ಸುಮಾರು ಎಂಟು ನೂರಕ್ಕೂ ಅಧಿಕ ದೂರುಗಳನ್ನು ದಾಖಲಿಸಿದರೂ ಪೊಲೀಸರು ಬಂಧಿಸದಿರುವ ಬಗ್ಗೆ ಅಸಮಾಧಾನ ವ್ಯಕ್ತವಾಯಿತು. ನಿರೂಪಕನ ಬಂಧನದವರೆಗೂ ಕಾನೂನು ಹೋರಾಟಗಳನ್ನು ನಡೆಸುವುದಾಗಿ ಇದೇ ಸಂದರ್ಭ ತೀರ್ಮಾನಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News