ಕಾಶ್ಮೀರಿಗಳ ವಿರುದ್ಧದ ಅನ್ಯಾಯವನ್ನು ಪ್ರತಿಭಟಿಸಲು ರಾಜೀನಾಮೆ: ಐಎಎಸ್ ಟಾಪರ್ ಶಾ ಫೈಝಲ್

Update: 2019-01-11 17:30 GMT

ಶ್ರೀನಗರ, ಜ.11: ಕೇಂದ್ರ ಸರಕಾರಕ್ಕೆ ರಾಜ್ಯದ ಬಗ್ಗೆ ಇರುವ ಜವಾಬ್ದಾರಿಯನ್ನು ನೆನಪಿಸುವ ಉದ್ದೇಶದಿಂದ ನಾನು ನಾಗರಿಕ ಸೇವೆಗೆ ರಾಜೀನಾಮೆ ನೀಡಿರುವುದಾಗಿ ಐಎಎಸ್ ಟಾಪರ್ ಶಾ ಫೈಝಲ್ ಶುಕ್ರವಾರ ತಿಳಿಸಿದ್ದಾರೆ. “ನಾನು ಎಂದಿಗೂ ಐಎಎಸ್‌ನ ಹೆಮ್ಮೆಯ ಮಾಜಿ ಸದಸ್ಯನಾಗಿರುತ್ತೇನೆ. ಆದರೆ ಕಾಶ್ಮೀರಿ ಯುವಕರ ಬದುಕುವ ಹಕ್ಕನ್ನೂ ನಾವು ಗೌರವಿಸಬೇಕು. ಕಾಶ್ಮೀರದ ನನ್ನ ಗೆಳೆಯರಿಗೆ ನ್ಯಾಯ ನಿರಾಕರಿಸಿದ್ದಕ್ಕಾಗಿ ಮತ್ತು ರಾಜ್ಯದಲ್ಲಿ ರಾಜಕೀಯ ಇಚ್ಛಾಶಕ್ತಿಯ ಕೊರತೆಯ ವಿರುದ್ಧ ನಾನು ರಾಜೀನಾಮೆ ನೀಡುತ್ತಿದ್ದೇನೆ” ಎಂದು ಶ್ರೀನಗರದಲ್ಲಿ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಫೈಝಲ್ ತಿಳಿಸಿದ್ದಾರೆ.

ಫೈಝಲ್ ಐಎಎಸ್‌ಗೆ ರಾಜಿನಾಮೆ ನೀಡಿದ ಬೆನ್ನಿಗೇ ಅವರು ಮಾಜಿ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾರ ನ್ಯಾಶನಲ್ ಕಾನ್ಫರೆನ್ಸ್ ಪಕ್ಷ ಸೇರಲಿದ್ದಾರೆ ಎಂದು ವರದಿಯಾಗಿತ್ತು. ಇದಕ್ಕೆ ಪ್ರತಿಕ್ರಿಯಿಸಿದ ಫೈಝಲ್, ಸದ್ಯ ಇದು ಜಮ್ಮು ಮತ್ತು ಕಾಶ್ಮೀರದಲ್ಲಿ ರಾಜಕೀಯವನ್ನು ಮರುಯೋಚಿಸುವ ಕಾಲವಾಗಿದೆ. ಯಾವುದೇ ರಾಜಕೀಯ ಪಕ್ಷವನ್ನು ಸೇರುವುದಕ್ಕೂ ಮೊದಲು ಒಮ್ಮತವನ್ನು ಉಂಟುಮಾಡಿ ರಾಜ್ಯದ ಯುವಕರನ್ನು ತಲುಪಲು ಪ್ರಯತ್ನಿಸುತ್ತೇನೆ ಎಂದು ತಿಳಿಸಿದ್ದಾರೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ದೊರೆತರೆ ಸಂತೋಷದಿಂದ ಸ್ಪರ್ಧಿಸುತ್ತೇನೆ. ರಾಜ್ಯದ ಯುವಕರ ಜೊತೆ ಮಾತುಕತೆ ನಡೆಸಿ ನಂತರ ಪಕ್ಷಗಳ ಜೊತೆ ಚರ್ಚಿಸುತ್ತೇನೆ ಎಂದು ಫೈಝಲ್ ತಿಳಿಸಿದ್ದಾರೆ.

2010ರಲ್ಲಿ ಕೇಂದ್ರ ಸಾರ್ವಜನಿಕ ಸೇವೆ ಆಯೋಗ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ಫೈಝಲ್ 2016ರಲ್ಲಿ ತನ್ನ ಹಾಗೂ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಬುರ್ಹಾನ್ ವಾನಿ ಮಧ್ಯೆ ಹೋಲಿಕೆ ಮಾಡದಿರುವಂತೆ ಮಾಧ್ಯಮಗಳಿಗೆ ಸೂಚಿಸಿದ್ದರು. “ರಾಜಕೀಯದಲ್ಲಿ ನಾನು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಮತ್ತು ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಂದ ಪ್ರಭಾವಿತನಾಗಿರುವುದಾಗಿ” ತಿಳಿಸಿರುವ ಫೈಝಲ್, ಆದರೆ ಕಾಶ್ಮೀರದಲ್ಲಿ ಸಂಪೂರ್ಣ ಭಿನ್ನ ವಾತಾವರಣವಿದೆ ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News