ಎನ್‌ಎಸ್‌ಇ ಅಧ್ಯಕ್ಷ ಹುದ್ದೆಗೆ ಅಶೋಕ ಚಾವ್ಲಾ ರಾಜೀನಾಮೆ

Update: 2019-01-11 17:35 GMT

ಹೊಸದಿಲ್ಲಿ,ಜ.11: ಏರ್‌ಸೆಲ್-ಮ್ಯಾಕ್ಸಿಸ್ ಪ್ರಕರಣದಲ್ಲಿ ತನ್ನ ವಿರುದ್ಧ ಕಾನೂನು ಕ್ರಮವನ್ನು ಜರುಗಿಸಲು ಸಿಬಿಐಗೆ ಕೇಂದ್ರವು ಅನುಮತಿಯನ್ನು ನೀಡಿರುವ ಹಿನ್ನೆಲೆಯಲ್ಲಿ ರಾಷ್ಟ್ರೀಯ ಶೇರು ವಿನಿಮಯ ಕೇಂದ್ರ(ಎನ್‌ಎಸ್‌ಇ)ದ ಅಧ್ಯಕ್ಷ ಅಶೋಕ ಚಾವ್ಲಾ ಅವರು ಶುಕ್ರವಾರ ರಾಜೀನಾಮೆ ಸಲ್ಲಿಸಿದ್ದು,ಇದು ತಕ್ಷಣದಿಂದಲೇ ಜಾರಿಗೊಂಡಿದೆ.

ಕಾಂಗ್ರೆಸ್ ನಾಯಕ ಪಿ.ಚಿದಂಬರಂ ಮತ್ತು ಅವರ ಪುತ್ರ ಕಾರ್ತಿ ಭಾಗಿಯಾಗಿರುವ ಏರ್‌ಸೆಲ್-ಮ್ಯಾಕ್ಸಿಸ್ ಪ್ರಕರಣದಲ್ಲಿ ಆರೋಪಿಗಳಾಗಿರುವ ಚಾವ್ಲಾ ಸೇರಿದಂತೆ ಐವರು ಹಾಲಿ ಮತ್ತು ಮಾಜಿ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಕೇಂದ್ರವು ಅನುಮತಿ ನೀಡಿದೆ ಎಂದು ಶುಕ್ರವಾರ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ತಿಳಿಸಿತ್ತು.

ಈ ಐವರು ಚಿದಂಬರಂ ಅಧಿಕಾರಾವಧಿಯಲ್ಲಿ ವಿದೇಶಿ ಹೂಡಿಕೆ ಉತ್ತೇಜನ ಮಂಡಳಿಯ ಸದಸ್ಯರಾಗಿದ್ದರು. ಈ ಪೈಕಿ ಮೂವರು ವಿವಿಧ ಸರಕಾರಿ ಇಲಾಖೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದರೆ,ಇಬ್ಬರು ನಿವೃತ್ತಿಗೊಂಡಿದ್ದಾರೆ.

ಮಾಜಿ ವಿತ್ತ ಕಾರ್ಯದರ್ಶಿ ಚಾವ್ಲಾ ಅವರು 2026,ಮಾ.28ರಂದು ಎನ್‌ಎಸ್‌ಇ ಅಧ್ಯಕ್ಷರಾಗಿ ಅಧಿಕಾರವನ್ನು ವಹಿಸಿಕೊಂಡಿದ್ದರು. ಅವರು ಕಳೆದ ವರ್ಷದ ನವಂಬರ್‌ನಲ್ಲಿ ಯೆಸ್ ಬ್ಯಾಂಕ್ ಅಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News