ನ್ಯಾ. ಸಿಕ್ರಿ ಸಿಬಿಐ ನಿರ್ದೇಶಕ ವರ್ಮಾ ವಜಾಗೆ ಬೆಂಬಲ ನೀಡಿದ್ದು ಯಾಕೆ?

Update: 2019-01-11 17:51 GMT

ಹೊಸದಿಲ್ಲಿ, ಜ.11: ಅಲೋಕ್ ವರ್ಮರನ್ನು ಸಿಬಿಐ ಮುಖ್ಯಸ್ಥರ ಸ್ಥಾನದಿಂದ ವಜಾಗೊಳಿಸಿದ ನಿರ್ಧಾರದ ಪರವಾಗಿದ್ದ ನ್ಯಾ. ಎಕೆ ಸಿಕ್ರಿ ಅವರನ್ನು ಸುಪ್ರೀಂಕೋರ್ಟ್‌ನ ಮಾಜಿ ನ್ಯಾಯಾಧೀಶ ಮಾರ್ಕಾಂಡೇಯ ಕಾಟ್ಜು ಸಮರ್ಥಿಸಿಕೊಂಡಿದ್ದಾರೆ.

ವರ್ಮ ವಿರುದ್ಧ ಬಲವಾದ ಪುರಾವೆಗಳಿದ್ದ ಹಿನ್ನೆಲೆಯಲ್ಲಿ ಸಿಕ್ರಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಕಾಟ್ಜು ಹೇಳಿದ್ದಾರೆ. ತಾನು ಸಿಕ್ರಿಯವರೊಂದಿಗೆ ನಡೆಸಿದ ದೂರವಾಣಿ ಸಂಭಾಷಣೆಯ ಬಗ್ಗೆ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿರುವ ಹೇಳಿಕೆಯಲ್ಲಿ ಕಾಟ್ಜು ವಿವರಿಸಿದ್ದಾರೆ.

ಪದಚ್ಯುತಿಗೊಳಿಸುವ ನಿರ್ಧಾರ ಕೈಗೊಂಡ ಸಭೆಗೆ ವರ್ಮರನ್ನು ಆಹ್ವಾನಿಸಿಲ್ಲ ಮತ್ತು ಅವರ ಅಭಿಪ್ರಾಯವನ್ನು ಕೇಳಿಲ್ಲ ಎಂಬ ವರದಿಗಳ ಬಗ್ಗೆ ಉತ್ತರಿಸಿದ ಸಿಕ್ರಿ, “ವರ್ಮ ವಿರುದ್ಧದ ಆರೋಪವನ್ನು ಸಾಬೀತುಪಡಿಸಲು ಪ್ರಾಥಮಿಕ ಸಾಕ್ಷಿಗಳು ಲಭ್ಯವಾದ ಕಾರಣ, ಅವರ ವಿರುದ್ಧದ ವಿಚಾರಣೆ ಪೂರ್ಣಗೊಳ್ಳುವವರೆಗೆ ಅವರು ಮುಖ್ಯಸ್ಥನ ಸ್ಥಾನದಲ್ಲಿ ಮುಂದುವರಿಯುವುದು ಬೇಡ ಎಂಬ ಅಭಿಪ್ರಾಯಕ್ಕೆ ಸಮಿತಿ ಬಂದಿದೆ ಎಂದು ತಿಳಿಸಿದ್ದಾರೆ. ಅಲ್ಲದೆ ಅಮಾನತುಗೊಳಿಸುವಾಗ ಆರೋಪಿಯ ಅಭಿಪ್ರಾಯ ಕೇಳುವ ಅಗತ್ಯವಿರುವುದಿಲ್ಲ. ತನಿಖೆ ಪೂರ್ಣಗೊಳ್ಳುವವರೆಗೆ ಅಮಾನತು ಎಂಬುದು ಸಾಮಾನ್ಯ ಪದ್ದತಿಯಾಗಿದೆ. ವಜಾಗೊಳಿಸುವಾಗ ಮಾತ್ರ ಆರೋಪಿಯ ಅಭಿಪ್ರಾಯ ಕೇಳಲಾಗುತ್ತದೆ. ವರ್ಮಾರನ್ನು ವಜಾಗೊಳಿಸಿಲ್ಲ. ಅವರನ್ನು ಈಗಿರುವ ವೇತನ ಹಾಗೂ ಭತ್ಯೆ ಸಹಿತ ಸಮಾನ ಹುದ್ದೆಗೆ ವರ್ಗಾಯಿಸಲಾಗಿದೆ” ಎಂದು ಸಿಕ್ರಿ ದೂರವಾಣಿ ಸಂಭಾಷಣೆಯಲ್ಲಿ ಹೇಳಿದ್ದಾರೆ.

ವರ್ಮರನ್ನು ಸಿಬಿಐ ಮುಖ್ಯಸ್ಥರಾಗಿ ಮುಂದುವರಿಸುವ ಕುರಿತು ನಿರ್ಧರಿಸಿದ್ದ ಉನ್ನತ ಮಟ್ಟದ ಸಮಿತಿಯಲ್ಲಿ ಪ್ರಧಾನಿ ಮೋದಿ ಮತ್ತು ನ್ಯಾ. ಎಕೆ ಸಿಕ್ರಿ ವರ್ಮರ ಪದಚ್ಯುತಿಯನ್ನು ಬೆಂಬಲಿಸಿದ್ದರೆ, ಮತ್ತೊಬ್ಬ ಸದಸ್ಯರಾಗಿದ್ದ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ವಿರೋಧಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News