ಖಾಸಗಿ ಸುದ್ದಿವಾಹಿನಿ ನಿರೂಪಕನ ಬಂಧನಕ್ಕೆ ಒತ್ತಾಯ: ವಿಟ್ಲ ಹೋಬಳಿ ಮುಸ್ಲಿಂ ಒಕ್ಕೂಟದಿಂದ ಪ್ರತಿಭಟನೆ

Update: 2019-01-11 18:05 GMT

ಬಂಟ್ವಾಳ, ಜ.11: ಪ್ರವಾದಿಯನ್ನು ನಿಂದಿಸಿದ ಖಾಸಗಿ ಸುದ್ದಿವಾಹಿನಿ ನಿರೂಪಕನ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳುವಂತೆ ಒತ್ತಾಯಿಸಿ ವಿಟ್ಲ ಹೋಬಳಿ ಮುಸ್ಲಿಂ ಒಕ್ಕೂಟ ವತಿಯಿಂದ ವಿಟ್ಲದಲ್ಲಿ ಸಾರ್ವಜನಿಕ ಪ್ರತಿಭಟನಾ ಸಭೆ ಶುಕ್ರವಾರ ಸಂಜೆ ನಡೆಯಿತು. 

ವಿಟ್ಲದ ಮೇಗಿನಪೇಟೆಯಿಂದ ಮೆರವಣಿಗೆ ಹೊರಟು ವಿಟ್ಲದ ಮುಖ್ಯ ರಸ್ತೆಯಲ್ಲಿ ಸಂಚರಿಸಿ ಸಾಲೆತ್ತೂರು ರಸ್ತೆಯಲ್ಲಿ ಸಮಾಪನಗೊಂಡಿತು.
ಕೆಐಸಿ ನಿರ್ದೇಶಕ ಹುಸೈನ್ ದಾರಿಮಿ ಮಾತನಾಡಿ, ಪ್ರವಾದಿ ಅವರು ಅನಾಥ, ನಿರ್ಗತಿಕರ ಜೊತೆ ಕರುಣೆ ತೋರಿ, ಇಡೀ ವಿಶ್ವಕ್ಕೆ ಮಾದರಿಯಾಗಿದ್ದರು. ಅಜಿತ್‍ನನ್ನು ಮುಸ್ಲಿಂ ಸಮುದಾಯ ಕ್ಷಮಿಸುವುದು ಬಿಡಿ, ಆತನ ಬಂಧನವಾಗುವವರೆಗೂ ನಮ್ಮ ಹೋರಾಟ ನಡೆಯಲಿದೆ. ಇದು ಸಾಂಕೇತಿಕ ಪ್ರತಿಭಟನೆಯಾಗಿದ್ದು, ಆತನ ವಿರುದ್ಧ ಕ್ರಮ ಜರಗಿಸದಿದ್ದಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಹೇಳಿದರು. 

ಎಸ್‍ಎಸ್‍ಎಫ್ ಮಾಣಿ ಸೆಕ್ಟರ್ ಅಧ್ಯಕ್ಷ ಮಾಹಿನ್ ಸಖಾಫಿ ಮಾಣಿ ಮಾತನಾಡಿ, ನಮ್ಮ ಈ ಪ್ರತಿಭಟನೆ ನಿರೂಪಕ ಅಜಿತ್ ಹಾಗೂ ಧರ್ಮದ ಬಗ್ಗೆ ವಿವಿಧ ಹೇಳಿಕೆಗಳನ್ನು ನೀಡುತ್ತಿರುವ ವಿಚಾರವಾದಿಗಳ ವಿರುದ್ಧವಾಗಿದೆ. ಯಾವುದೇ ಕಾರಣಗಳಿಲ್ಲದೇ ಚರ್ಚೆ ವೇಳೆ ಪ್ರವಾದಿ ಅವರ ಹೆಸರನ್ನು ಎಳೆದು ತಂದಿರುವುದು ಖಂಡನೀಯ. ಇದನ್ನು ಮುಸ್ಲಿಂ ಸಮುದಾಯ ಎಂದಿಗೂ ಕ್ಷಮಿಸುವುದಿಲ್ಲ ಎಂದರು. 

ಎಸ್‍ಡಿಪಿಐ ಜಿಲ್ಲಾ ಕಾಯದರ್ಶಿ ಶಾಫಿ ಬೆಳ್ಳಾರೆ ಮಾತನಾಡಿ, ಅಜಿತ್ ಅವರ ಈ ಹೇಳಿಕೆ ಹಿಂದೂ ಹಾಗೂ ಮುಸ್ಲಿಮರನ್ನು ಎತ್ತಿ ಕಟ್ಟುವ ಉದ್ದೇಶವಾಗಿದೆ. ಪ್ರವಾದಿ ಅವರು ವಿಶ್ವಕ್ಕೆ ಶಾಂತಿ ಸಹೋದರತೆಯನ್ನು ಸಾರಿದ್ದಾರೆ. ಅವರ ಆದರ್ಶಗಳನ್ನು ಮೈಗೂಡಿಸಿಕೊಂಡು ಮುಸ್ಲಿಮರು ಮುನ್ನಡೆಯುತ್ತಿದ್ದಾರೆ. ಮುಸ್ಲಿಮರು ಜಗತ್ತಿನಾದ್ಯಂತ ಸೌಹಾರ್ದತೆಯಿಂದ ಬದುಕುತ್ತಿದ್ದಾರೆ. ಅವುಗಳಿಗೆ ಧಕ್ಕೆ ತರುವ ಷಡ್ಯಂತ್ರಗಳು ನಡೆಯುತ್ತಿದೆ ಎಂದರು. 

ಜಿಪಂ ಸದಸ್ಯ ಎಂ.ಎಸ್. ಮುಹಮ್ಮದ್ ಮಾತನಾಡಿ, ಲೋಕ ಪ್ರವಾದಿ ಅವರು ಮಾನವ ಸಮೂಹಕ್ಕೆ ಉದತ್ತ ಸಂದೇಶ ನೀಡಿದ್ದಾರೆ. ಅವರನ್ನು ನಿಂದಿಸಿದ ಅಜಿತ್‍ನನ್ನು ಬಂಧಿಸುವವರೆಗೂ ನಮ್ಮ ಹೋರಾಟ ಮುಂದುವರೆಯಲಿದೆ ಎಂದು ಹೇಳಿದರು. 

ಮಜೀದ್ ದಾರಿಮಿ ಸಾಲೆತ್ತೂರು ಮಾತನಾಡಿದರು. ಈ ಸಂದರ್ಭ ಅಶ್ರಫ್ ಮುಹಮ್ಮದ್ ಪೊನ್ನೋಟ್ಟು, ಶಮೀರ್ ಪಳಿಕೆ, ವಿಕೆಎಂ ಅಶ್ರಫ್, ವಿ.ಎಸ್ ಇಬ್ರಾಹಿಂ ಒಕ್ಕೆತ್ತೂರು, ಜಾಫರ್ ಖಾನ್ ವಿಟ್ಲ, ಅಬೂಬಕರ್, ಹಕೀಂ ಪರ್ತಿಪ್ಪಾಡಿ, ಹಂಝ ವಿಕೆಎಂ, ಹಾಜಿ ಕೆ.ಎ ಹಮೀದ್ ಕೊಡಂಗಾಯಿ, ಮುಹಮ್ಮದ್ ಇಕ್ಬಾಲ್ ಹಾಗೂ ವಿಟ್ಲ ಹೋಬಳಿಯ ಸಾಮಾಜಿಕ, ಧಾರ್ಮಿಕ ಸಂಘಟನೆಗಳ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು. 

ಶಾಕೀರ್ ಅಳಕೆಮಜಲು ಸ್ವಾಗತಿಸಿದರು. ಕಲಂದರ್ ಪರ್ತಿಪ್ಪಾಡಿ ನಿರೂಪಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News