‘ರಾಷ್ಟ್ರೀಯ ಹೆದ್ದಾರಿ ಪೂರ್ಣಗೊಳಿಸಿ, ಜನರ ಪ್ರಾಣ ಉಳಿಸಿ’: ಕಾಂಗ್ರೆಸ್ ಪಾದಯಾತ್ರೆಯ ಕರಪತ್ರ ಬಿಡುಗಡೆ

Update: 2019-01-12 12:58 GMT

ಮಂಗಳೂರು, ಜ.11: ಬೆಂಗಳೂರು- ಮಂಗಳೂರು ನಡುವೆ ಅಡ್ಡಹೊಳೆಯಿಂದ ಬಿ.ಸಿ.ರೋಡ್‌ವರೆಗಿನ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಸ್ಥಗಿತಗೊಂಡಿರುವುದನ್ನು ತಕ್ಷಣ ಆರಂಭಿಸಿ ಪೂರ್ಣಗೊಳಿಸಬೇಕೆಂದು ಒತ್ತಾಯಿಸಿ ದ.ಕ. ಜಿಲ್ಲಾ ಕಾಂಗ್ರೆಸ್‌ಜ.14ರಿಂದ 16ರವರೆಗೆ ಹಮ್ಮಿಕೊಂಡಿರುವ ‘ರಾಷ್ಟ್ರೀಯ ಹೆದ್ದಾರಿ ಪೂರ್ಣಗೊಳಿಸಿ, ಜನರ ಪ್ರಾಣ ಉಳಿಸಿ’ ಪಾದಯಾತ್ರೆಯ ಕರಪತ್ರವನ್ನು ಇಂದು ಕಾಂಗ್ರೆಸ್ ಭವನದಲ್ಲಿ ಮಾಜಿ ಸಚಿವ ಬಿ.ರಮಾನಾಥ ರೈ ಬಿಡುಗಡೆಗೊಳಿಸಿದರು.

ಈ ಸಂದರ್ಭ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸುಮಾರು 42 ಕಿ.ಮೀ. ಉದ್ದದ ಈ ಮೂರು ದಿನಗಳ ಪಾದಯಾತ್ರೆಯಲ್ಲಿ ಪಕ್ಷದ ರಾಜ್ಯ ಮಟ್ಟದ ನಾಯಕರು ಭಾಗವಹಿಸಲಿದ್ದಾರೆ ಎಂದರು.

ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಸ್ಥಗಿತಗೊಂಡಿರುವುದರಿಂದ ಜನರಿಗೆ ಆಗುತ್ತಿರುವ ಸಮಸ್ಯೆಯ ಬಗ್ಗೆ ಕೇಂದ್ರ ಸರಕಾರದ ಗಮನ ಸೆಳೆಯುವ ನಿಟ್ಟಿನಲ್ಲಿ ನಡೆಯಲಿರುವ ಈ ಪಾದಯಾತ್ರೆಗೆ ಜ.14ರಂದು ಬೆಳಗ್ಗೆ 9ಕ್ಕೆ ನೆಲ್ಯಾಡಿಯ ಬಸ್ಸು ನಿಲ್ದಾಣದ ಸಮೀಪ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಚಾಲನೆ ನೀಡಲಿದ್ದಾರೆ.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಅಧ್ಯಕ್ಷತೆ ವಹಿಸಲಿದ್ದು, ಹಾಸನ ಜಿಲ್ಲಾಧ್ಯಕ್ಷ ಮಂಜುನಾಥ ಜಾವುಕಲ್, ಹಾಸನ ವಿಧಾನ ಪರಿಷತ್‌ನ ಸದಸ್ಯ ಎಂ.ಇ.ಗೋಪಾಲಸ್ವಾಮಿ, ಕಾಂಗ್ರೆಸ್ ನಾಯಕರಪಾದ ಎಚ್.ಕೆ.ಮಹೇಶ್, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಡಾ.ರಘು ಭಾಗವಹಿಸಲಿದ್ದಾರೆ. ಅಂದು ಸಂಜೆ 4:30ಕ್ಕೆ ಉಪ್ಪಿನಂಗಡಿ ಬಸ್ಸು ನಿಲ್ದಾಣಕ್ಕೆ ತಲುಪಿ ಅಲ್ಲಿ ಪ್ರತಿಭಟನಾ ಸಭೆ ನಡೆಯಲಿದೆ. ಮಾಜಿ ಶಾಸಕ ವಸಂತ ಬಂಗೇರ, ಜೆ.ಆರ್.ಲೋಬೋ, ನಾಯಕರಾದ ಎಚ್.ಎಂ. ವಿಶ್ವನಾಥ್, ಹರೀಶ್ ಬಾಬು, ಸುಧೀರ್ ಕುಮಾರ್ ಮೊದಲಾದವರು ಭಾಗವಹಿಸಲಿದ್ದಾರೆ.

ಜ.15ರಂದು ಬೆಳಗ್ಗೆ 8:30ಕ್ಕೆ ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಸ್ಥಾನ ಬಳಿಯಿಂದ ಪಾದಯಾತ್ರೆ ಆರಂಭಗೊಂಡು ಸಂಜೆ 4:30ಕ್ಕೆ ಮಾಣಿ ಜಂಕ್ಷನ್ ಬಳಿ ಬಹಿರಂಗ ಸಭೆ ನಡೆಯಲಿದೆ. ಮಾಜಿ ಸಚಿವರಾದ ವಿನಯ ಕುಮಾರ್ ಸೊರಕೆ, ಅಭಯಚಂದ್ರ ಜೈನ್‌ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ನಾಯಕರಾದ ಪುಷ್ಪಾ ಅಮರನಾಥ್, ಅಮೃತ್ ಮೊದಲಾದವರು ಭಾಗವಹಿಸಲಿದ್ದಾರೆ.

ಜ.16ರಂದು ಬೆಳಗ್ಗೆ ಮಾಣಿ ಜಂಕ್ಷನ್‌ನಿಂದ ಪಾದಯಾತ್ರೆ ಆರಂಭಗೊಂಡು ಸಂಜೆ 4:30ಕ್ಕೆ ಬಿಸಿರೋಡು ಬ್ರಹ್ಮಶ್ರೀ ನಾರಾಯಣಗುರು ವೃತ್ತದ ಬಳಿ ಬಹಿರಂಗ ಸಭೆಯೊಂದಿಗೆ ಸಮಾರೋಪಗೊಳ್ಳಲಿದೆ. ಇದರಲ್ಲಿ ನಾಯಕರಾದ ದಿನೇಶ್ ಗುಂಡೂರಾವ್, ನಾರಾಯಣ ರಾವ್, ಅರುಣ್ ಮಾಚಯ್ಯ, ಮೊಯ್ದಿನ್ ಬಾವ, ಸವಿತಾ ರಮೇಶ್ ಮೊದಲಾದವರು ಭಾಗವಹಿಸಲಿದ್ದಾರೆ ಎಂದು ರಮಾನಾಥ ರೈ ವಿವರಿಸಿದರು.

ವಿಜಯಾ ಬ್ಯಾಂಕ್ ವಿಲೀನವನ್ನು ವಿರೋಧಿಸಿ ಈಗಾಗಲೇ ಕಾಂಗ್ರೆಸ್ ವತಿಯಿಂದ ಜಿಲ್ಲೆಯಲ್ಲಿರುವ ಬ್ಯಾಂಕಿನ 79 ಶಾಖೆಗಳ ಎದುರು ಪ್ರತಿಭಟನೆ ನಡೆಸಲಾಗಿದೆ. ಮುಂದಿನ ಹೋರಾಟದ ಬಗ್ಗೆ ತಿಳಿಸಲಾಗುವುದು ಎಂದು ಮಾಜಿ ಸಚಿವ ರೈ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಬಿ.ಎಚ್. ಖಾದರ್, ಇಬ್ರಾಹಿಂ ಕೋಡಿಜಾಲ್, ಸಂತೋಷ್ ಕುಮಾರ್ ಶೆಟ್ಟಿ, ಪ್ರವೀಣ್ ಚಂದ್ರ ಆಳ್ವ, ರಾಜಶೇಖರ ಕೋಟ್ಯಾನ್, ಮಾಧವ ಮಾವೆ, ಸಲೀಂ, ಅಬ್ಬಾಸ್ ಅಲಿ ಮೊದಲಾವದರು ಉಪಸ್ಥಿತರಿದ್ದರು. ಬಾಕ್ಸ್ ಮಾಡಬಹುದು.


ತಪ್ಪು ಮಾಡಿದವರಿಗೆ ಭಯ ಇದ್ದೇ ಇರುತ್ತದೆ!
ಆರೆಸ್ಸೆಸ್ ಮುಖಂಡರ ಕೊಲೆ ಸಂಚು ವದಂತಿ ಕುರಿತಂತೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮಾಜಿ ಸಚಿವ ರಮಾನಾಥ ರೈ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಈ ವದಂತಿಯನ್ನು ಅಲ್ಲಗಳೆದಿರುವ ಬಗ್ಗೆ ಮಾತ್ರ ನನಗೆ ತಿಳಿದಿದೆ. ತಪ್ಪು ಮಾಡಿದವರಿಗೆ ಭಯ ಇದ್ದೇ ಇರುತ್ತದೆ. ಜನಸಾಮಾನ್ಯರಿಗೆ ಜೀವ ಭಯ ಇರುವುದಿಲ್ಲ ಎಂದು ಹೇಳಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News