×
Ad

ನದಿ ಉತ್ಸವಕ್ಕೆ ಮುಂದಿನ ಬಜೆಟ್‌ನಲ್ಲಿ ಅನುದಾನ: ಸಚಿವ ಯು.ಟಿ. ಖಾದರ್

Update: 2019-01-12 17:40 IST

ಮಂಗಳೂರು, ಜ.12: ಮೀನುಗಾರಿಕಾ ಜೆಟ್ಟಿ ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯಗಳೊಂದಿಗೆ ನದಿ ಉತ್ಸವವನ್ನು ಇನ್ನೂ ಉತ್ತಮ ರೀತಿಯಲ್ಲಿ ನಡೆಸಲು ಅನುಕೂಲವಾಗುವಂತೆ ಮುಂದಿನ ಬಜೆಟ್‌ನಲ್ಲಿ ಅನುದಾನ ನೀಡಲು ಕ್ರಮ ವಹಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಮತ್ತು ರಾಜ್ಯ ನಗರಾಭಿವೃದ್ಧಿ ಸಚಿವ ಯು.ಟಿ. ಖಾದರ್ ಹೇಳಿದ್ದಾರೆ.

ಪ್ರವಾಸೋದ್ಯಮ ಇಲಾಖೆ, ದ.ಕ. ಜಿಲ್ಲಾಡಳಿತ ಹಾಗೂ ಸಂಘ ಸಂಸ್ಥೆಗಳ ಸಹಕಾರದಲ್ಲಿ ರಾಜ್ಯದ ಪ್ರಥಮ ನದಿ ಉತ್ಸವಕ್ಕೆ ನಗರದ ಕೂಳೂರು ಸೇತುವೆ ಸಮೀಪದ ಫಲ್ಗುಣಿ ನದಿ ಬಳಿ ಚಾಲನೆ ನೀಡಿ ಅವರು ಮಾತನಾಡಿದರು.

ನದಿಗಳ ಸಂರಕ್ಷಣೆ ಹಾಗೂ ಅಭಿವೃದ್ಧಿಗೆ ಪೂರಕವಾಗಿ ನಡೆಸಲಾಗುವ ಈ ನದಿ ಉತ್ಸವ ಪ್ರಥಮ ಹೆಜ್ಜೆಯಾಗಿದ್ದು, ಮುಂದಿನ ದಿನಗಳಲ್ಲಿ ಸ್ಥಳೀಯ ಸಂಘ ಸಂಸ್ಥೆಗಳು ಸ್ಥಳೀಯಾಡಳಿತದ ಜತೆ ಸೇರಿ ಇಂತಹ ಉತ್ಸವಗಳನ್ನು ನಡೆಸುವಲ್ಲಿ ಇದು ತರಬೇತಿ ಕಾರ್ಯಕ್ರಮವಾಗಬೇಕಾಗಿದೆ. ಪ್ರವಾಸೋದ್ಯಮ ಇಲಾಖೆಯಿಂದ ಇನ್ನಷ್ಟು ಪರಿಣಾಮಕಾರಿ ರೀತಿಯಲ್ಲಿ ಈ ಉತ್ಸವವನ್ನು ನಡೆಸಲು ಕ್ರಮ ವಹಿಸಲಾಗುವುದು. ಜಿಲ್ಲೆಯಲ್ಲಿ ಸಾಕಷ್ಟು ನದಿ ಪ್ರದೇಶಗಳಿದ್ದು, ಅಲ್ಲಿ ಇಂತಹ ಉತ್ಸವಗಳನ್ನು ನಡೆಸುವ ಮೂಲಕ ಪ್ರವಾಸೋದ್ಯಮಕ್ಕೆ ಒತ್ತು ನೀಡುವ ಜತೆಗೆ ನದಿಯ ಸಂರಕ್ಷಣೆಗೆ ಮುಂದಾಗಲು ಜಿಲ್ಲಾ ಮಟ್ಟದಲ್ಲಿ ನೀತಿಯೊಂದನ್ನು ರೂಪಿಸಲು ಜಿಲ್ಲಾಧಿಕಾರಿಗೆ ಈಗಾಗಲೇ ಸೂಚನೆ ನೀಡಿರುವುದಾಗಿ ಸಚಿವ ಖಾದರ್ ತಿಳಿಸಿದರು.

ಬೋಟ್‌ಹೌಸ್‌ಗೆ ಸಬ್ಸಿಡಿ ಸೇರಿದಂತೆ ಈ ಉತ್ಸವವನ್ನು ಶಾಶ್ವತವಾಗಿ ಮುಂದುವರಿಸಲು ಅಗತ್ಯವಾದ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು. ಸ್ವಾಗತಿಸಿ ಮಾತನಾಡಿದ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್, ನದಿಗಳ ಬಗ್ಗೆ ಜನರಿಗೆ ಜಾಗೃತಿ ಹಾಗೂ ಅರಿವು ಮೂಡಿಸುವ ಜತೆಗೆ ನದಿಗಳ ಸಂರಕ್ಷಣೆಯನ್ನು ಇನ್ನಷ್ಟು ಉತ್ತಮವಾಗಿ ನಿರ್ವಹಿಸಲು ಇದೊಂದು ಪ್ರಯತ್ನ ಎಂದರು. ಮೇಯರ್ ಭಾಸ್ಕರ ಕೆ., ಪೊಲೀಸ್ ಆಯುಕ್ತ ಟಿ.ಆರ್. ಸುರೇಶ್, ಅಪರ ಜಿಲ್ಲಾಧಿಕಾರಿ ಕುಮಾರ್, ತುಳು ಅಕಾಡೆಮಿ ಅಧ್ಯಕ್ಷ ಎ.ಸಿ. ಭಂಡಾರಿ ಮೊದಲಾದವರು ಉಪಸ್ಥಿತರಿದ್ದರು.

ಮಂಗಳೂರಿಗೆ ನಮ್ಮ ಕೊಡುಗೆ ಬಗ್ಗೆ ಚರ್ಚೆ

ಮುಂಗಡ ಪತ್ರದ ಪೂರ್ವಭಾವಿ ಸಭೆಗೆ ಪೂರಕವಾಗಿ ಜ. 14ರಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲೆಗೆ ಸಂಬಂಧಿಸಿದ ಯೋಜನೆಗಳ ಬಗ್ಗೆ ಪೂರಕ ಮಾಹಿತಿಯನ್ನು ಕಲೆ ಹಾಕಲಾಗುವುದು. ಈ ಬಗ್ಗೆ ಜಿಲ್ಲಾಡಳಿತಕ್ಕೆ ಮುಂಚಿತವಾಗಿ ಯೋಜನೆಗಳ ರೂಪು ರೇಷೆಯನ್ನು ಒದಗಿಸಬಹುದು ಎಂದು ಸಚಿವ ಯು.ಟಿ.ಖಾದರ್ ತಿಳಿಸಿದರು.

ಇದೇ ವೇಳೆ ಅಭಿವೃದ್ಧಿಗೆ ಸಂಬಂಧಿಸಿ ಮಂಗಳೂರಿಗೆ ನಮ್ಮ ಕೊಡುಗೆ ಬಗ್ಗೆ ಜಿಲ್ಲೆಯ ಉದ್ಯಮಿಗಳು ಹಾಗೂ ಚಿಂತಕರ ಸಭೆಯು ಮುಂದಿನ ವಾರ ನಡೆಸಲಾಗುವುದು ಎಂದು ಸಚಿವ ಖಾದರ್ ಈ ಸಂದರ್ಭ ತಿಳಿಸಿದರು.

ಆತಂಕ ಮುಕ್ತ ಸಮಾಜ ನಿರ್ಮಾಣ ಸರಕಾರದ ಹೊಣೆ

ಜೀವ ಬೆದರಿಕೆ ವದಂತಿ ಕುರಿತಂತೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವ ಯು.ಟಿ.ಖಾದರ್, ಅಂತಹ ಯಾವುದೇ ಘಟನೆಗೆ ಅವಕಾಶ ಇರುವುದಿಲ್ಲ. ಕೇಂದ್ರ ರಾಜ್ಯ ಹಾಗೂ ಗುಪ್ತಚರ ಇಲಾಖೆ ಈ ಬಗ್ಗೆ ಕಾರ್ಯನಿರ್ವಹಿಸುತ್ತದೆ. ಭಯ ರಹಿತ, ಆತಂಕ ಮುಕ್ತ ಸಮಾಜ ನಿರ್ಮಾಣ ಸರಕಾರದ ಹೊಣೆ ಎಂದು ಹೇಳಿದರು.

ಎಲ್ಲರ ಜೀವವೂ ಅಮೂಲ್ಯವಾದದು. ಯಾವುದೇ ರೀತಿಯ ಸಂಶಯಾಸ್ಪದ ಸುಳಿವಿನ ಬಗ್ಗೆ ಜನಸಾಮಾನ್ಯರು ಕೂಡಾ ಮಾಹಿತಿ ನೀಡುವ ಮೂಲಕ ಇಲಾಖೆ ಜತೆ ಸಹಕರಿಸಬೇಕು ಎಂದರು.

ಮಲ್ಪೆ ಮೀನುಗಾರರ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿ ಮಹಾರಾಷ್ಟ್ರದಲ್ಲಿ ಕೆಲವೊಂದು ಕುರುಹಗಳು ಪತ್ತೆಯಾಗಿರುವ ಬಗ್ಗೆ ಅಲ್ಲಿನ ಮೀನುಗಾರರ ಮುಖಂಡರನ್ನು ಕರೆಸಿ ಚರ್ಚಿಸಲು ಮನವಿ ಮಾಡಲಾಗಿದೆ. ಅಪಹರಣ ಶಂಕೆಯ ಕುರಿತಂತೆ ಕೇಂದ್ರ ಸರಕಾರ, ನೌಕಾಪಡೆ, ತಟ ರಕ್ಷಣಾ ಪಡೆಗಳು ಕ್ರಮ ಕೈಗೊಂಡು ಸ್ಪಷ್ಟ ಚಿತ್ರಣವನ್ನು ಒದಗಿಸಬೇಕು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News