ಬಂದೂಕು ಬಳಕೆ: ಕಾಡುಕೋಣ ಹತ್ಯೆ -ಆರೋಪಿಗಳ ದೋಷಮುಕ್ತಿ

Update: 2019-01-12 15:09 GMT

ಕುಂದಾಪುರ, ಜ.12: ಮೂಕಾಂಬಿಕಾ ಅಭಯಾರಣ್ಯದ ಮಾದಿಬರೇ ಮೀಸಲು ಅರಣ್ಯ ಪ್ರದೇಶದಲ್ಲಿ ಅಕ್ರಮ ಬಂದೂಕಿನಿಂದ ಕಾಡುಕೋಣವನ್ನು ಹತ್ಯೆ ಮಾಡಿದ ಆರೋಪಗಳಿಂದ ಮುದೂರಿನ ಕೊಟ್ಟತಲ್ ಬೇಬಿ, ಶಿಬು, ಜೋಬಾ, ಜಡ್ಕಲ್‌ನ ಅನಿಲ್ ಹಾಗೂ ಲಕ್ಷ್ಮಣ ಬೇಬಿ ಇವರು ದೋಷಮುಕ್ತಿಗೊಂಡಿದ್ದಾರೆ.

ಕೊಲ್ಲೂರಿನ ಅಂದಿನ ಠಾಣಾಧಿಕಾರಿ ಸಂಪತ್ ಅವರು ವನ್ಯಜೀವಿ ಸಂರಕ್ಷಣಾ ಕಾಯಿದೆ ಹಾಗೂ ಭಾರತೀಯ ಶಸ್ತ್ರಾಸ್ತ್ರ ಕಾಯಿದೆಯಡಿ ದೋಷಾರೋಪಣಾ ಪತ್ರ ಸಲ್ಲಿಸಿದ್ದರು. ಬೆಂಗಳೂರಿನ ವಿಧಿವಿಜ್ಞಾನ ಪ್ರಯೋಗಾಲಯದ ಬಂದೂಕು ತಜ್ಞ ಎನ್.ಜೆ.ಪ್ರಭಾಕರ ಇವರು ನ್ಯಾಯಾಲಯದಲ್ಲಿ ಸಾಕ್ಷಿ ನುಡಿದು ವಶಪಡಿ ಸಿಕೊಳ್ಳಲಾದ ಆಯುಧ ಬಂದೂಕು ಎಂದು ದೃಢೀಕರಿಸಿದ್ದರು.

ಒಟ್ಟು 12 ಮಂದಿ ಸಾಕ್ಷಿದಾರರನ್ನು ನ್ಯಾಯಾಲಯದಲ್ಲಿ ವಿಚಾರಣೆ ಮಾಡಲಾಗಿತ್ತು. ಪಶು ವೈದ್ಯ ಡಾ.ಅರುಣ ಕುಮಾರ್ ಶೆಟ್ಟಿ ಹಾಗೂ ವಿಧಿ ವಿಜ್ಞಾನ ತಜ್ಞೆ ಡಾ.ಗೀತಾಲಕ್ಷ್ಮೀ ಅವರು ಮೃತ ಪ್ರಾಣಿ ಕಾಡುಕೋಣವೆಂದು ಸಾಕ್ಷಿ ನುಡಿದಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಕುಂದಾಪುರದ 2ನೇ ಹೆಚ್ಚುವರಿ ನ್ಯಾಯಾಧೀಶ ಚಂದ್ರಶೇಖರ ಬಣಕಾರ ಆರೋಪಿಗಳ ಮೇಲಿನ ಆರೋಪ ರುಜುವಾತಾಗಿಲ್ಲ ಎಂದು ಅಭಿಪ್ರಾಯ ಪಟ್ಟು ಎಲ್ಲಾ ಐವರು ಆರೋಪಿಗಳನ್ನು ದೋಷಮುಕ್ತಗೊಳಿಸಿದರು. ಆರೋಪಿಗಳ ಪರವಾಗಿ ಕುಂದಾಪುರದ ನ್ಯಾಯವಾದಿ ರವಿಕಿರಣ ಮುರ್ಡೇಶ್ವರ ವಾದಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News