ಉಡುಪಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ: ಡಾ.ಗಣನಾಥ ಎಕ್ಕಾರು ಸಮ್ಮೇಳನಾಧ್ಯಕ್ಷ

Update: 2019-01-12 15:15 GMT
 ಡಾ. ಗಣನಾಥ ಎಕ್ಕಾರು

ಉಡುಪಿ, ಜ.12: 12ನೇ ಉಡುಪಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಜ.18ರಂದು ಉಡುಪಿ ಬ್ರಹ್ಮಗಿರಿಯ ಲಯನ್ಸ್ ಭವನದಲ್ಲಿ ನಡೆಯಲಿದೆ ಎಂದು ಉಡುಪಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ವಸಂತಿ ಶೆಟ್ಟಿ ಬ್ರಹ್ಮಾವರ ತಿಳಿಸಿದ್ದಾರೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕನ್ನಡದ ಖ್ಯಾತ ಜಾನಪದ ವಿದ್ವಾಂಸ ಹಾಗೂ ಸಾಹಿತಿ ಡಾ. ಗಣನಾಥ ಎಕ್ಕಾರು ಅವರು ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದರು.

18ರ ಬೆಳಗ್ಗೆ 10 ಗಂಟೆಗೆ ಸಮ್ಮೇಳನವನ್ನು ಉಡುಪಿ ಶಾಸಕ ಕೆ.ರಘುಪತಿ ಭಟ್ ಉದ್ಘಾಟಿಸಲಿದ್ದಾರೆ. ಹೊಸ ಪುಸ್ತಕಗಳನ್ನು ಬಿಡುಗಡೆಗೊಳಿಸುವ ಬೆಂಗಳೂರಿನ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿರ್ದೇಶಕ ಡಾ.ಸತೀಶ್ ಕುಮಾರ್ ಎಸ್.ಹೊಸಮನಿ ಅವರು ಪುಸ್ತಕ ದಾನ ಅಭಿಯಾನವನ್ನು ಸಹ ಉದ್ಘಾಟಿಸುವರು ಎಂದರು.

ಬೆಳಗ್ಗೆ 11ಕ್ಕೆ ಮೊದಲ ವಿಚಾರಗೋಷ್ಠಿ ನಡೆಯಲಿದ್ದು, ಮಕ್ಕಳಲ್ಲಿ ಸಾಹಿತ್ಯ ಅಭಿರುಚಿ ಮತ್ತು ಮುಗ್ಧತೆ ಮರೆಯಾಗಲು ಕಾರಣ ಮತ್ತು ಉಳಿಸುವ ಪರಿ ಎಂಬ ವಿಷಯದ ಕುರಿತು ತಜ್ಞರು ವಿಷಯ ಮಂಡಿಸಲಿದ್ದಾರೆ. ಅಪರಾಹ್ನ 2 ಕ್ಕೆ ಕವಯಿತ್ರಿ ಡಾ.ಕಾತ್ಯಾಯಿನಿ ಕುಂಜಿಬೆಟ್ಟು ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಲಿದೆ.

ಅಪರಾಹ್ನ 3 ಕ್ಕೆ ಸಮ್ಮೇಳನಾಧ್ಯಕ್ಷರೊಂದಿಗೆ ಸಂವಾದ ನಡೆಯಲಿದ್ದು, 3:30ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ನಿವೃತ್ತ ಪ್ರಾಧ್ಯಾಪಕ ಸಿ.ನಾರಾಯಣ ಎಂ.ಹೆಗಡೆ ಸಮಾರೋಪ ಭಾಷಣ ಮಾಡಲಿದ್ದಾರೆ. ವಿವಿಧ ಕ್ಷೇತ್ರಗಳ 12 ಮಂದಿ ಸಾಧಕರು ಹಾಗೂ ತುಳುಕೂಟ ಉಡುಪಿ ಸಂಸ್ಥೆಗೆ ಸನ್ಮಾನ ನಡೆಯಲಿದೆ ಎಂದು ವಸಂತಿ ಶೆಟ್ಟಿ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ, ತಾಲೂಕು ಗೌರವ ಕಾರ್ಯದರ್ಶಿ ಮುರಳೀಧರ ಕೆ., ಕೋಶಾಧಿಕಾರಿ ಗಣೇಶ್ ಬ್ರಹ್ಮಾವರ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News