ಸಂವಿಧಾನದಿಂದ ನಿಜವಾದ ಭಾರತ ನಿರ್ಮಾಣ: ನ್ಯಾ.ನಾಗಮೋಹದಾಸ್

Update: 2019-01-12 15:18 GMT

ಮಂಗಳೂರು, ಜ.12: ಭಾರತ ದೇಶ ಸ್ವಾತಂತ್ರಕ್ಕೂ ಮೊದಲು ಗುಪ್ತರ, ವೌರ್ಯರ, ಮೊಘಲರ, ಬ್ರಿಟಿಷರ ದೇಶವಾಗಿತ್ತು. ಸ್ವಾತಂತ್ರ ದೊರೆತ ಬಳಿಕ ಪಾಳೇಗಾರಿಕೆ ರದ್ದುಗೊಳಿಸಿ ಇಡೀ ದೇಶವನ್ನು ರಾಜಕೀಯ ಆಡಳಿತಕ್ಕೆ ಒಳಪಡಿಸಿ ನಿಜವಾದ ಭಾರತ ನಿರ್ಮಾಣ ಮಾಡಲು ಸಂವಿಧಾನದಿಂದ ಸಾಧ್ಯವಾಯಿತು ಎಂದು ರಾಜ್ಯ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹದಾಸ್ ಹೇಳಿದ್ದಾರೆ.

ಸಮುದಾಯ ಕರ್ನಾಟಕ ವತಿಯಿಂದ ನಗರದ ಸೈಂಟ್ ಅಲೋಶಿಯಸ್ ಕಾಲೇಜಿನಲ್ಲಿ ಶನಿವಾರ ‘ಸಂವಿಧಾನ ಓದು ಅಭಿಯಾನ’ ಕಾರ್ಯಾಗಾರದಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು.

ಬಳಿಕ ಈ 69 ವರ್ಷಗಳಲ್ಲಿ ಭೂಸುಧಾರಣೆ, ಕೈಗಾರಿಕೆ, ಕೃಷಿ, ಆರೋಗ್ಯ, ಶಿಕ್ಷಣ ಕ್ಷೇತ್ರಗಳಲ್ಲಿ ಅಮೂಲಾಗ್ರ ಬದಲಾವಣೆಯಾಗಿದೆ. ದಲಿತರು, ಹಿಂದುಳಿದವರು, ಮಹಿಳೆಯರ ಜೀವನ ಮಟ್ಟ ಸುಧಾರಿಸಿದೆ. ಮಾಹಿತಿ ತಂತ್ರಜ್ಞಾನ, ಬಾಹ್ಯಾಕಾಶ ತಂತ್ರಜ್ಞಾನ, ಅಣು ವಿಜ್ಞಾನದಲ್ಲಿ ಜಗತ್ತಿನ ಟಾಪ್ 10 ದೇಶಗಳ ಪೈಕಿ ಒಂದಾಗಿದ್ದೇವೆ ಎಂದು ಹೇಳಿದರು.

ಈ ದೇಶದ ಸಾಮಾನ್ಯ ನಾಗರಿಕನಿಗೂ ಬಟ್ಟೆ, ಆರೋಗ್ಯ, ಶಿಕ್ಷಣ, ವಸತಿ ಕಲ್ಪಿಸುವಲ್ಲಿ ಪ್ರಗತಿ ಸಾಧಿಸಿದ್ದೇವೆ. ಸ್ವಾತಂತ್ರ ದೊರೆತಾಗ ಶೇ.20ರಷ್ಟಿದ್ದ ಅಕ್ಷರಸ್ಥರ ಸಂಖ್ಯೆಯೀಗ ಶೇ.80ಕ್ಕೇರಿದೆ. ಇದೆಲ್ಲವೂ ಪ್ರಗತಿಯಲ್ಲವೇ ಎಂದು ನ್ಯಾ.ನಾಗಮೋಹನ್‌ದಾಸ್ ಪ್ರಶ್ನಿಸಿದರು.

ಸಂವಿಧಾನ ದೇಶದಲ್ಲಿ ಜಾರಿಯಾಗುವುದಕ್ಕೆ ಮೊದಲು ಪಾಳೇಗಾರಿಕೆ ಪದ್ಧತಿಯಿತ್ತು. ದೋಭಿಯ ಮಗ ದೋಭಿಯೇ ಆಗಬೇಕಿತ್ತು, ರೈತನ ಮಗ ರೈತನೇ ಆಗಬೇಕಿತ್ತು. ಜಾತಿಯ ಉದ್ಯೋಗ ಬದಲಾಯಿಸುವಂತಿರಲಿಲ್ಲ. ಸತ್ತ ಹೆಣಗಳನ್ನೂ ಒಂದೇ ಸ್ಮಶಾನದಲ್ಲಿ ಸುಡುವಂತಿರಲಿಲ್ಲ. ಈ ಅನಿಷ್ಟ ಪದ್ಧತಿ ತೊಲಗಿ ಟೀ ಮಾರುವ ಹುಡುಗನೂ ದೇಶದ ಪ್ರಧಾನಿಯಾದ. ಸಾಮಾನ್ಯ ರೈತನ ಮಗನಾದ ನಾನು ನ್ಯಾಯಾಧೀಶನಾದೆ. ಇದೆಲ್ಲವನ್ನೂ ನೀಡಿದ್ದು ದೇಶದ ಸಂವಿಧಾನ. ಅದರ ಬಗ್ಗೆ ಹೆಮ್ಮೆಯಿರಲಿ ಎಂದು ಪರೋಕ್ಷವಾಗಿ ನರೇಂದ್ರ ಮೋದಿ ಮತ್ತು ಬಿಜೆಪಿ ಆರೋಪಗಳಿಗೆ ಪ್ರತಿಕ್ರಿಯಿಸಿದರು.

ಇದುವರೆಗೆ ಆಡಳಿತ ನಡೆಸಿದ ಕೇಂದ್ರ ಸರಕಾರಗಳು, ರಾಜ್ಯ ಸರಕಾರಗಳು ಅನೇಕ ಕಾನೂನುಗಳನ್ನು ತಂದಿವೆ. ನಿತ್ಯದ ಬದುಕು ಒಂದಲ್ಲ ಒಂದು ಕಾನೂನಿನ ನಿಯಂತ್ರಣಕ್ಕೆ ಒಳಪಟ್ಟಿದೆ. ಈ ಎಲ್ಲ ಕಾನೂನುಗಳ ತಾಯಿ ಭಾರತದ ಸಂವಿಧಾನವಾಗಿದೆ. ಆ ತಾಯಿಯನ್ನು ರಕ್ಷಿಸಬೇಕಾಗಿದೆ. ಆದರೆ ದುರದೃಷ್ಟವಶಾತ್ ಅನೇಕರು ಸಂವಿಧಾನವನ್ನು ಯಾಕೆ ಓದಬೇಕು ಎಂದು ಪ್ರಶ್ನಿಸುತ್ತಾರೆ ಎಂದು ಅವರು ವಿಷಾದ ವ್ಯಕ್ತಪಡಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಸರಕಾರಿ ಪ್ಲೀಡರ್ ಉದಯಾನಂದ ಎ. ಮಾತನಾಡಿದರು.

ಸಂವಿಧಾನ ಓದು ಅಭಿಯಾನದ ದ.ಕ. ಜಿಲ್ಲಾಧ್ಯಕ್ಷ, ನ್ಯಾಯವಾದಿ ಯಶವಂತ ಮರೋಳಿ, ಮಂಗಳೂರು ವಕೀಲರ ಸಂಘದ ಅಧ್ಯಕ್ಷ ಎಂ.ಆರ್. ಬಲ್ಲಾಳ್, ಚಿಂತಕಿ ವಿಮಲಾ, ಬದ್ರಿಯಾ ಕಾಲೇಜು ಪ್ರಾಂಶುಪಾಲ ಇಸ್ಮಾಯೀಲ್ ಮತ್ತಿತರರಿದ್ದರು.

ದುರದೃಷ್ಟವಶಾತ್ ಕಳೆದ 70 ವರ್ಷಗಳಲ್ಲಿ ಸರಕಾರವು ಜನರಿಗೆ ಸಂವಿಧಾನವನ್ನು ತಿಳಿಹೇಳುವ ಕೆಲಸ ಮಾಡಿಲ್ಲ. 10 ವರ್ಷಗಳ ಹಿಂದಷ್ಟೆ ವಿದ್ಯಾರ್ಥಿಗಳಿಗೆ ತಿಳಿಹೇಳುವ ಕೆಲಸ ಸಾಗಿದೆ. ಆದರೆ ಕೇವಲ ಮಾರ್ಕ್ಸ್‌ಗಾಗಿ ಓದುವಂತಾಗಿದೆ. ಸಂವಿಧಾನವನ್ನು ಅರ್ಥೈಸುವಲ್ಲಿ ಮಕ್ಕಳು ಹಿಂದುಳಿದಿದ್ದಾರೆ.

- ನ್ಯಾ.ಎಚ್.ಎನ್. ನಾಗಮೋಹದಾಸ್,
ರಾಜ್ಯ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News