'ಶೇ. 3ರಷ್ಟಿರುವ ಮೇಲ್ಪರ್ಗದವರಿಗೆ ಶೇ.10 ಮೀಸಲಾತಿ ಯಾವ ನ್ಯಾಯ?'

Update: 2019-01-12 15:24 GMT

ಉಡುಪಿ, ಜ.12: ಆರ್ಥಿಕವಾಗಿ ಹಿಂದುಳಿದ ಮೇಲ್ಪರ್ಗದವರಿಗೆ ಶೇ.10 ಮೀಸಲಾತಿಯನ್ನು ನೀಡುವ ಮಸೂದೆ ವಿರೋಧಿಸಿ ಎಸ್‌ಐಓ ಹಾಗೂ ವೆಲ್‌ಫೇರ್ ಪಾರ್ಟಿ ಆಫ್ ಇಂಡಿಯಾ ಉಡುಪಿ ಜಿಲ್ಲೆಯ ನೇತೃತ್ವದಲ್ಲಿ ಶನಿವಾರ ಅಜ್ಜರಕಾಡು ಹುತಾತ್ಮ ಸ್ಮಾರಕದ ಎದುರು ಧರಣಿ ನಡೆಸಲಾಯಿತು.

ಧರಣಿಯನ್ನುದ್ದೇಶಿಸಿ ಮಾತನಾಡಿದ ದಸಂಸ ಮುಖಂಡ ಶ್ಯಾಮ್‌ರಾಜ್ ಬಿರ್ತಿ, ಮೀಸಲಾತಿ ವಿರೋಧಿಸುತ್ತಿದ್ದ ಮೇಲ್ವರ್ಗದವರು ಇಂದು ಅವರಿಗೆ ನೀಡಿದ ಮೀಸಲಾತಿಯನ್ನು ಸ್ವಾಗತಿಸುತ್ತಿರುವುದು ನಾಚಿಕೆಗೇಡು. ಮೀಸಲಾತಿ ಎಂಬುದು ಆರ್ಥಿಕವಾಗಿ ಹಿಂದುಳಿದವರನ್ನು ಮೇಲಕ್ಕೆ ತರುವ ಕಾರ್ಯಕ್ರಮ ಅಲ್ಲ. ಬದಲಾಗಿ ಸಾಮಾಜಿಕ, ಶೈಕ್ಷಣಿಕ ಸೇರಿದಂತೆ ಎಲ್ಲ ಕ್ಷೇತ್ರಗಳಿಂದ ವಂಚಿತ ರಾದವರಿಗೆ ಸಮಾಜದ ಮುಖ್ಯವಾಹಿನಿಗೆ ತರುವ ಕಾರ್ಯಕ್ರಮವಾಗಿದೆ ಎಂದು ಹೇಳಿದರು.

ದೇಶದಲ್ಲಿರುವ 101 ವಿವಿಧ ಜಾತಿಗಳನ್ನೊಳಗೊಂಡ ಪರಿಶಿಷ್ಟ ಜಾತಿಗೆ ಶೇ.15, 49 ಜಾತಿಗಳನ್ನೊಳಗೊಂಡ ಪರಿಶಿಷ್ಟ ಪಂಗಡಕ್ಕೆ ಶೇ.3ರಷ್ಟು ಮೀಸ ಲಾತಿ ನೀಡಿದರೆ, ಇಡೀ ದೇಶದಲ್ಲಿ ಕೇವಲ ಶೇ.3ರಷ್ಟಿರುವ ಮೇಲ್ವರ್ಗದವರಿಗೆ ಶೇ.10 ಮೀಸಲಾತಿ ನೀಡುತ್ತಿರುವುದು ಯಾವ ನ್ಯಾಯ. ಮುಂದೆ ಹಿಂದುಳಿದ ವರ್ಗಗಳ ಮೀಸಲಾತಿಯ ಪಾಲನ್ನು ಮೇಲ್ವರ್ಗದವರಿಗೆ ನೀಡುವುದರಲ್ಲಿ ಯಾವುದೇ ಸಂಶಯ ಇಲ್ಲ. ಆದುದರಿಂದ ಈ ಮೀಸಲಾತಿ ವಿರುದ್ದ ಎಲ್ಲ ವರ್ಗದವರು ಹೋರಾಟ ಮಾಡಬೇಾಗಿದೆ ಎಂದು ಅವರು ಒತ್ತಾಯಿಸಿದರು.

ಹಿರಿಯ ಚಿಂತಕ ಪ್ರೊ. ಕೆ.ಫಣಿರಾಜ್, ಎಸ್‌ಐಒ ರಾಷ್ಟ್ರೀಯ ಸಲಹಾ ಸಮಿತಿ ಸದಸ್ಯ ಸಾದತ್ ಕಲೀಫಾ, ಸಾಮಾಜಿಕ ಹೋರಾಟಗಾರ ಇದ್ರೀಸ್ ಹೂಡೆ, ನಿವೃತ್ತ ಪ್ರಾಧ್ಯಾಪಕ ಸಿರಿಲ್ ಮಾಥಾಯಿಸ್, ವೆಲ್‌ಫೇರ್ ಪಾರ್ಟಿಯ ಜಿಲ್ಲಾಧ್ಯಕ್ಷ ಅಬ್ದುಲ್ ಅಝೀಝ್ ಉದ್ಯಾವರ ಮಾತನಾಡಿದರು.

ಧರಣಿಯಲ್ಲಿ ಎಸ್‌ಐಒ ರಾಜ್ಯ ಕಾರ್ಯದರ್ಶಿ ಯಾಸೀನ್ ಕೋಡಿಬೆಂಗ್ರೆ, ಉಡುಪಿ ಜಿಲ್ಲಾಧ್ಯಕ್ಷ ಅಫ್ವಾನ್ ಹೂಡೆ, ಜಿಲ್ಲಾ ಕಾರ್ಯದರ್ಶಿ ಮುಹಮ್ಮದ್ ಶಾರೂಕ್, ಜಿಐಒ ಜಿಲ್ಲಾಧ್ಯಕ್ಷೆ ಸುಹಾ ಫಾತಿಮಾ, ಪ್ರಮುಖರಾದ ಅಕ್ಬರ್ ಅಲಿ, ಅನ್ವರ್ ಅಲಿ ಕಾಪು, ಶಬ್ಬೀರ್ ಮಲ್ಪೆ, ವಾಸು ನೇಜಾರು, ಡಿ.ಎಸ್. ಬೇಂಗ್ರೆ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News