ದೇಶದಲ್ಲಿ ಇದೇ ಮೊದಲ ಬಾರಿ ಸರಕಾರದ ಮೇಲೆ ಭ್ರಷ್ಟಾಚಾರ ಆರೋಪವಿಲ್ಲ: ಪ್ರಧಾನಿ ಮೋದಿ

Update: 2019-01-12 16:23 GMT

ಹೊಸದಿಲ್ಲಿ,ಜ.12: ಬಿಜೆಪಿಯನ್ನು ಸೋಲಿಸಲು ಹಲವು ರಾಜಕೀಯ ಪಕ್ಷಗಳು ಒಟ್ಟಾಗಿ ರೂಪಿಸುತ್ತಿರುವ ಮಹಾಮೈತ್ರಿ ಒಂದು ವಿಫಲ ಪ್ರಯೋಗವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ. ವಿಪಕ್ಷಗಳು ಸ್ವಜನಪಕ್ಷಪಾತ ಮತ್ತು ಭ್ರಷ್ಟಾಚಾರವನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಒಂದು ದುರ್ಬಲ ಸರಕಾರವನ್ನು ರಚಿಸಲು ಬಯಸುತ್ತಿವೆ. ಆದರೆ ಇದೇ ವೇಳೆ ಬಿಜೆಪಿ ಎಲ್ಲ ದಿಶೆಯಲ್ಲೂ ಅಭಿವೃದ್ಧಿ ಮಾಡುವಂಥ ಸದೃಢ ಸರಕಾರ ರಚಿಸಲಿದೆ ಎಂದು ಅವರು ತಿಳಿಸಿದ್ದಾರೆ. ದಿಲ್ಲಿಯ ರಾಮಲೀಲಾ ಮೈದಾನದಲ್ಲಿ ಬಿಜೆಪಿ ರಾಷ್ಟ್ರೀಯ ಸಮ್ಮೇಳನದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಭ್ರಷ್ಟಾಚಾರವನ್ನು ಕೊನೆಗೊಳಿಸಲು ನಾವು ಸದೃಢ ಸರಕಾರ ರಚಿಸಲು ಬಯಸುತ್ತೇವೆ. ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ಮಹಾಮೈತ್ರಿ ಎಂಬ ವಿಫಲ ಪ್ರಯೋಗ ನಡೆಯುತ್ತಿದೆ. ಅವರೆಲ್ಲರೂ ಜೊತೆಯಾಗಿ ನಿಸ್ಸಹಾಯಕ, ದುರ್ಬಲ ಸರಕಾರ ರಚಿಸಲು ಮುಂದಾಗಿದ್ದಾರೆ. ಸದೃಢ ಸರಕಾರ ಅವರಿಗೆ ಬೇಕಿಲ್ಲ ಯಾಕೆಂದರೆ ಅದರಿಂದ ಅವರ ಬಣ್ಣ ಬಯಲಾಗುತ್ತದೆ. ಅವರಿಗೆ ಬೇಕಾಗಿರುವುದು ದುರ್ಬಲ ಸರಕಾರ. ಅದರಿಂದ ಅವರು ತಮ್ಮ ಸಂಬಂಧಿಗಳಿಗೆ ಸಹಾಯ ಮಾಡಲು ಸುಲಭವಾಗುತ್ತದೆ ಎಂದು ತಿಳಿಸಿದ್ದಾರೆ.

ತನ್ನ ಮಾತನ್ನು ಮುಂದುವರಿಸಲು ಹೆಚ್ಚಿನ ಕಾಲಾವಕಾಶ ಕೋರಿದ ಮೋದಿ,ದೇಶದ ಇತಿಹಾಸದಲ್ಲಿ ಇದೇ ಮೊದಲ ಬಾರಿ ಒಂದು ಸರಕಾರದ ವಿರುದ್ಧ ಯಾವುದೇ ಭ್ರಷ್ಟಾಚಾರ ಆರೋಪ ಇಲ್ಲ. ಇದರಿಂದ ಭ್ರಷ್ಟಾಚಾರ ನಡೆಸದೆಯೂ ಸರಕಾರ ನಡೆಸಬಹುದು ಎಂಬುವುದು ಸಾಬೀತಾಗುತ್ತದೆ. ಭ್ರಷ್ಟಾಚಾರ ತೊಲಗಿಸಲು ಬಿಜೆಪಿ ನೇತೃತ್ವದ ಸರಕಾರದಿಂದ ಮಾತ್ರ ಸಾಧ್ಯ ಎಂದು ತಿಳಿಸಿದ್ದಾರೆ. ಇದೇ ವೇಳೆ ಕಾಂಗ್ರೆಸನ್ನು ಟೀಕಿಸಿದ ಮೋದಿ, ಕಾಂಗ್ರೆಸ್ ಸರಕಾರ ದೇಶವನ್ನು ಕತ್ತಲೆಯತ್ತ ದೂಡಿತ್ತು. ಹತ್ತು ಅಮೂಲ್ಯ ವರ್ಷಗಳನ್ನು ಹಗರಣಗಳು ಮತ್ತು ಭ್ರಷ್ಟಾಚಾರದಲ್ಲೇ ಭಾರತ ಕಳೆಯುವಂತಾಯಿತು ಎಂದರೆ ತಪ್ಪಾಗಲಾರದು ಎಂದು ಮೋದಿ ಅಭಿಪ್ರಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News