ಮುಂಡ್ಕೂರು ಸೇತುವೆಯಿಂದ ನದಿಗೆ ಉರುಳಿದ ಬೊಲೇರೊ; ಮಹಿಳೆ ಮೃತ್ಯು: ಇಬ್ಬರು ಮಕ್ಕಳು ಗಂಭೀರ

Update: 2019-01-12 16:33 GMT

ಕಾರ್ಕಳ, ಜ.12: ಮುಂಡ್ಕೂರು ಗ್ರಾಮದ ಸಂಕಲಕರಿಯ ಶಾಂಭವಿ ನದಿ ಸೇತುವೆಯ ದಂಡೆಗೆ ಢಿಕ್ಕಿ ಹೊಡೆದ ಮಹೇಂದ್ರ ಬೊಲೇರೊ ವಾಹನ ನಿಯಂತ್ರಣ ತಪ್ಪಿ ಕೆಳಗೆ ನೀರಿಗೆ ಬಿದ್ದು ಮುಳುಗಿದ ಪರಿಣಾಮ ಮಹಿಳೆ ಯೊಬ್ಬರು ಮೃತಪಟ್ಟ ಘಟನೆ ಡಿ.12ರಂದು ಬೆಳಗ್ಗೆ 8:50ರ ಸುಮಾರಿಗೆ ನಡೆದಿದೆ.

ಮೃತರನ್ನು ಕಾರ್ಕಳ ಬೋಳಕೋಡಿ ನಿವಾಸಿ ಡೈನಾ ಮಸ್ಕರೇನಸ್(44) ಎಂದು ಗುರುತಿಸಲಾಗಿದೆ. ಜೀಪು ಚಲಾಯಿಸುತ್ತಿದ್ದ ಮೃತರ ಪತಿ ಸ್ಟಾನಿ ಮಸ್ಕರೇನಸ್ (48), ಮಕ್ಕಳಾದ ಶಲ್ಡನ್(19) ಹಾಗೂ ಶರ್ಮನ್(19) ಎಂಬವರು ಗಾಯಗೊಂಡಿದ್ದಾರೆ. ಗಂಭೀರ ಸ್ಥಿತಿಯಲ್ಲಿರುವ ಮಕ್ಕಳಿಬ್ಬರು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿ ದ್ದಾರೆ.

ಇವರು ಮಂಗಳೂರಿನಲ್ಲಿ ನಡೆಯುವ ವಿವಾಹ ಸಮಾರಂಭದಲ್ಲಿ ಪಾಲ್ಗೊಳ್ಳಲು ಬೆಳ್ಮಣ್ ಕಡೆಯಿಂದ ಕಿನ್ನಿಗೋಳಿ ಕಡೆಗೆ ಬೋಲೆರೋ ವಾಹನದಲ್ಲಿ ಹೋಗುತ್ತಿದ್ದರು. ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ಕೊಂಡು ಬಂದ ವಾಹನವು ಸೇತುವೆಯ ದಂಡೆಯ ಮೇಲೆ ಅಳವಡಿಸಿರುವ ಸಿಮೆಂಟ್ ಕಂಬಗಳಿಗೆ ಡಿಕ್ಕಿ ಹೊಡೆಯಿತ್ತೆನ್ನಲಾಗಿದೆ.

ಇದರ ಪರಿಣಾಮ ಸಿಮೆಂಟ್ ಕಂಬಗಳು ತುಂಡಾಗಿ ವಾಹನವು ಸುಮಾರು 30 ಅಡಿ ಕೆಳಗೆ ಶಾಂಭವಿ ನದಿಗೆ ಉರುಳಿ ಬಿತ್ತೆನ್ನಲಾಗಿದೆ. ಇದರಿಂದ ವಾಹನ ನೀರಿನಲ್ಲಿ ಮುಳುಗಿದ್ದು ಕೂಡಲೇ ನದಿಗೆ ಹಾರಿದ ಮುಳುಗು ತಜ್ಞರು ಜೀಪಿನಲ್ಲಿದ್ದ ಮೂವರನ್ನು ಮೇಲಕ್ಕೆತ್ತಿ ಪಾರು ಮಾಡಿದರು. ಆದರೆ ಸೀಟ್ ಬೆಲ್ಟ್ ಧರಿಸಿದ್ದ ಡೈನಾ ಕುಳಿತಿದ್ದ ಸೀಟಿನ ಡೋರ್‌ಲಾಕ್ ಆಗಿದ್ದ ಪರಿಣಾಮ ಮೇಲಕ್ಕೆ ಎತ್ತಲು ಸಾಧ್ಯವಾಗಲಿಲ್ಲ. ಇದರಿಂದ ಅವರು ನೀರಿನೊಳಗೆ ಮೃತ ಪಟ್ಟರೆಂದು ತಿಳಿದುಬಂದಿದೆ.

ಬಳಿಕ ನೀರಿನಲ್ಲಿ ಮುಳುಗಿದ ಜೀಪನ್ನು ಪೊಲೀಸರು ಹಾಗೂ ಸ್ಥಳೀಯರ ಸಹಕಾರದೊಂದಿಗೆ ಮೇಲಕ್ಕೆ ಎತ್ತಲಾಯಿತು. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News