ಪೌರತ್ವ ತಿದ್ದುಪಡಿ ಮಸೂದೆಗೆ ವಿರೋಧ: ಸಮಿತಿ ನೇತೃತ್ವ ವಹಿಸಲು ನಿರಾಕರಿಸಿದ ಬೆಝ್ಬರುವ

Update: 2019-01-12 16:37 GMT

ಹೊಸದಿಲ್ಲಿ,ಜ.12: ಅಸ್ಸಾಂ ಒಪ್ಪಂದದ ವಿಧಿ 6ರ ಅನುಷ್ಠಾನಕ್ಕೆ ದಾರಿಗಳನ್ನು ಸೂಚಿಸಲು ರಚಿಸಲಾಗಿರುವ ಒಂಬತ್ತು ಸದಸ್ಯರ ಸಮಿತಿಯ ನೇತೃತ್ವವಹಿಸಲು ನಿವೃತ್ತ ಅಧಿಕಾರಿ ಎಂ.ಪಿ ಬೆಝ್ಬರುವ ನಿರಾಕರಿಸಿದ್ದಾರೆ. ಈ ಸಮಿತಿಯು ಸದ್ಯ ಕಾರ್ಯಾಚರಿಸುತ್ತಿಲ್ಲ ಮತ್ತು ಹಾಗಾಗಿ ನಿಷ್ಕ್ರಿಯವಾಗಿದೆ ಎಂದು ಬೆಝ್ಬರುವ ಆಂಗ್ಲ ಪತ್ರಿಕೆ ತಿಳಿಸಿದ್ದಾರೆ.

ಸಮಿತಿಯ ಕೆಲವು ಸದಸ್ಯರು ಹೊರ ನಡೆದ ನಂತರ ನಾನು ನನ್ನ ನಿರ್ಧಾರವನ್ನು ಗೃಹ ಸಚಿವಾಲಯಕ್ಕೆ ತಿಳಿಸಿದ್ದೆ. ಸಮಿತಿಯು ಸದ್ಯ ನಿಷ್ಕ್ರಿಯವಾಗಿದ್ದು ನನ್ನ ಅಧ್ಯಕ್ಷಸ್ಥಾನವೂ ಸಮರ್ಥನೀಯವಲ್ಲ ಎಂದು ಅವರು ತಿಳಿಸಿದ್ದಾರೆ. 1985ರ ಅಸ್ಸಾಂ ಒಪ್ಪಂದದ ವಿಧಿ6ರ ಅನುಷ್ಠಾನದ ಬಗ್ಗೆ ಸಲಹೆಗಳನ್ನು ನೀಡಲು ಉನ್ನತ ಮಟ್ಟದ ಸಮಿತಿಯನ್ನು ರಚಿಸುವ ಪ್ರಸ್ತಾವವನ್ನು ಕೇಂದ್ರ ಸಂಪುಟ ಈ ತಿಂಗಳ ಆರಂಭದಲ್ಲಿ ಅಂಗೀಕರಿಸಿತ್ತು. ವಿಧಿ 6ನ್ನು ಸಂಪೂರ್ಣವಾಗಿ ಅನುಷ್ಠಾನಗೊಳಿಸಿಲ್ಲ ಎಂದು ಅಂದು ಗೃಹ ಸಚಿವ ರಾಜನಾಥ್ ಸಿಂಗ್ ತಿಳಿಸಿದ್ದರು. ನಾಗರಿಕರ ರಾಷ್ಟ್ರೀಯ ನೋಂದಣಿ ನವೀಕರಿಸಲಾಗುತ್ತಿರುವ ಮತ್ತು ಪೌರತ್ವದ ಬಗ್ಗೆ ಕೇಂದ್ರ ವಿವಾದಾತ್ಮಕ ಮಸೂದೆ ಜಾರಿಗೆ ತರಲು ಪ್ರಯತ್ನಿಸುತ್ತಿರುವ ಸಮಯದಲ್ಲೇ ವಿಧಿ 6ರ ಅನುಷ್ಠಾನಕ್ಕೆ ಸಮಿತಿಯನ್ನು ರಚಿಸುವ ನಿರ್ಧಾರವನ್ನು ಸರಕಾರ ತೆಗೆದುಕೊಂಡಿದೆ. ಸಮಿತಿಗೆ ತನ್ನ ಪ್ರತಿನಿಧಿಯನ್ನು ಕಳುಹಿಸುವುದಿಲ್ಲ ಎಂದು ಅಖಿಲ ಅಸ್ಸಾಂ ವಿದ್ಯಾರ್ಥಿಗಳ ಒಕ್ಕೂಟ ತಿಳಿಸಿದ ನಂತರ ನೇಮಕಗೊಂಡಿದ್ದ ಮೂವರು ವ್ಯಕ್ತಿಗಳು ಸಮಿತಿಯಿಂದ ಹೊರನಡೆದಿದ್ದರು.

ಅಸ್ಸಾಂ ಒಪ್ಪಂದದ ವಿಧಿ 6ರ ಪ್ರಕಾರ, ಅಸ್ಸಾಂ ಜನರ ಸಾಂಸ್ಕೃತಿಕ, ಸಾಮಾಜಿಕ, ಭಾಷಾ ಗುರುತು ಮತ್ತು ಪರಂಪರೆಯ ರಕ್ಷಣೆ ಮತ್ತು ಪ್ರೋತ್ಸಾಹಕ್ಕಾಗಿ ಸಾಂವಿಧಾನಿಕ, ಶಾಸನಬದ್ಧ ಮತ್ತು ಆಡಳಿತಾತ್ಮಕ ರಕ್ಷಣೆಯನ್ನು ಒದಗಿಸಬೇಕು. ನಾಗರಿಕರು ಎಂದು ಗುರುತಿಸಿಕೊಳ್ಳಲು ಈ ಒಪ್ಪಂದದಲ್ಲಿ 1971ರ ಮಾರ್ಚ್ 24ರ ಗಡುವನ್ನು ವಿಧಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News