ಬಾಲಕಿ ಮೇಲೆ ಅತ್ಯಾಚಾರ: ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ ಮಂಗಳೂರು ಪೊಲೀಸರು

Update: 2019-01-12 16:43 GMT

ಮಂಗಳೂರು, ಜ.12: ಕುಖ್ಯಾತ ಕ್ರಿಮಿನಲ್, ರೌಡಿ ಶೀಟರ್ ಓರ್ವ ಬಾಲಕಿಯನ್ನು ಪುಸಲಾಯಿಸಿ ಲಾಡ್ಜ್‌ಗೆ ಕರೆದೊಯ್ದು ಮೂರು ದಿನ ಉಳಿಸಿಕೊಂಡು ಅತ್ಯಾಚಾರ ನಡೆಸಿರುವ ಆರೋಪದ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ.

ನಗರದಲ್ಲಿ ಈ ಹಿಂದೆ ಹಲವು ಅಪರಾಧ ಪ್ರಕರಣಗಳಲ್ಲಿ ಆರೋಪ ಎದುರಿಸಿದ್ದ ಆಕಾಶಭವನದ ಚರಣ್ ಯಾನೆ ಶರಣ್ ಎಂಬಾತನ ಬಂಧನಕ್ಕೆ ಮಂಗಳೂರು ನಗರ ಪೊಲೀಸರು ಬಲೆ ಬೀಸಿದ್ದಾರೆ. ಕೃತ್ಯದಲ್ಲಿ ಆರೋಪಿ ಜೊತೆ ಇನ್ನೂ ಹಲವರು ಭಾಗಿಯಾಗಿದ್ದಾರೆ ಎಂದು ತಿಳಿದುಬಂದಿದ್ದು, ತನಿಖೆ ಚುರುಕುಗೊಂಡಿದೆ.

ಘಟನೆ ಹಿನ್ನೆಲೆ: ಚರಣ್ ಹುಲಿವೇಷ ತರಬೇತಿ ನೀಡುತ್ತಿದ್ದ. ತರಬೇತಿ ಪಡೆಯಲೆಂದು ಬಂದಿದ್ದ ಬಾಲಕಿಯನ್ನು ಪುಸಲಾಯಿಸಿ ಜಿಲ್ಲೆಯ ಹೊರಗಿನ ಲಾಡ್ಜ್ ಒಂದಕ್ಕೆ ಕರೆದೊಯ್ದು ಅಲ್ಲಿ ಮೂರು ದಿನಗಳ ಕಾಲ ಉಳಿಸಿಕೊಂಡಿದ್ದ ವೇಳೆ ಅತ್ಯಾಚಾರ ಎಸಗಿದ್ದನೆಂದು ಆರೋಪಿಸಲಾಗಿದೆ. ಬಾಲಕಿ ಅಸ್ವಸ್ಥಳಾದ ಹಿನ್ನೆಲೆಯಲ್ಲಿ ಪ್ರಕರಣ ಜ. 7ರಂದು ಬೆಳಕಿಗೆ ಬಂದಿದ್ದು, ಬಾಲಕಿಯನ್ನು ಮಂಗಳೂರಿನ ಸರಕಾರಿ ಆಸ್ಪತ್ರೆಯೊಂದಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಘಟನೆ ನಡೆದು ಒಂದು ವಾರ ಕಳೆದಿದ್ದು, ಮಹಿಳಾ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ, ಕೊಲೆ ಬೆದರಿಕೆ ಸೇರಿದಂತೆ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

ಸಂತ್ರಸ್ತ ಬಾಲಕಿಯನ್ನು ಘಟನೆ ಆನಂತರ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪುನರ್ವಸತಿ ಕೇಂದ್ರದಲ್ಲಿ ಆಶ್ರಯ ಒದಗಿಸಲಾಗಿತ್ತು. ಸದ್ಯ ಸಂತ್ರಸ್ತೆ ಮನೆಗೆ ತೆರಳಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

ಆರೋಪಿ ವಿರುದ್ಧ ವಿವಿಧ ಪ್ರಕರಣ: ಮಂಗಳೂರು ನಗರ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿ ಆಕಾಶ ಭವನದ ಚರಣ್ ತಲೆಮರೆಸಿಕೊಂಡಿದ್ದಾನೆ. ಚರಣ್ ವಿರುದ್ಧ ಸುಳ್ಯದ ಕೆವಿಜಿ ಸಂಸ್ಥೆಯ ಡಾ. ರಾಮಕೃಷ್ಣ ಕೊಲೆ ಪ್ರಕರಣ ಸೇರಿದಂತೆ ಕೊಲೆ ಮತ್ತು ಕೊಲೆಯತ್ನ ಪ್ರಕರಣ, ವಯಸ್ಕ ಮಹಿಳೆಯೋರ್ವರ ಅತ್ಯಾಚಾರ ಪ್ರಕರಣ ಸಹಿತ ಹಲವು ಪ್ರಕರಣಗಳ ಆರೋಪಿಯಾಗಿದ್ದಾನೆ.

ಅತ್ಯಾಚಾರ ಪ್ರಕರಣದ ಆರೋಪಿ ತಲೆಮರೆಸಿಕೊಂಡಿದ್ದು, ಪೊಲೀಸರು ಆತನ ವಿರುದ್ಧ ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿ ದ್ದಾರೆ. ಕೊಲೆ, ಸುಲಿಗೆ, ಅತ್ಯಾಚಾರ ಸಹಿತ 20 ಕ್ಕೂ ಅಧಿಕ ಪ್ರಕರಣಗಳಲ್ಲಿ ಭಾಗಿಯಾದ ಆರೋಪ ಚರಣ್ ಮೇಲಿದ್ದು, ಪೊಲೀಸರು ಈಗಾಗಲೇ ಈತನನ್ನು ರೌಡಿಶೀಟರ್ ಪಟ್ಟಿಗೂ ಸೇರಿಸಿದ್ದಾರೆ.

ಕೃತ್ಯದಲ್ಲಿ ಸಂಘಪರಿವಾರದ ವ್ಯಕ್ತಿ ಭಾಗಿ

ಅತ್ಯಾಚಾರ ಆರೋಪ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಆಕಾಶ್ ಭವನದ ಶರಣ್ ಜೊತೆ ಹಲವರು ಭಾಗಿಯಾಗಿದ್ದರು ಎನ್ನಲಾಗಿದ್ದು, ಸಂಘಪರಿವಾರದ ವ್ಯಕ್ತಿಯೋರ್ವನು ಕೃತ್ಯ ನಡೆಸಿದ ಆರೋಪಿಗಳಲ್ಲಿ ಪ್ರಮುಖನಾಗಿದ್ದಾನೆ. ಜೊತೆಗೆ ಮಾದಕ ವಸ್ತುಗಳ ಸಾಗಾಟ ಜಾಲದಲ್ಲೂ ತನ್ನನ್ನು ತೊಡಗಿಸಿಕೊಂಡಿದ್ದಾನೆಂಬ ಮಾಹಿತಿ ತಿಳಿದುಬಂದಿದೆ. ಆದರೆ ಈ ಬಗ್ಗೆ ಪೊಲೀಸರು ಹೆಚ್ಚಿನ ಮಾಹಿತಿಯನ್ನು ಹಂಚಿಕೊಂಡಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News