ಪಠಾಣ್‌ಕೋಟ್, ಉರಿ, ಅಮರನಾಥದ ದಾಳಿಗಳು ಏನು: ಕಾಂಗ್ರೆಸ್ ಪ್ರಶ್ನೆ

Update: 2019-01-12 16:51 GMT

ಹೊಸದಿಲ್ಲಿ,ಜ.12: 2014ರಿಂದೀಚೆಗೆ ದೇಶದಲ್ಲಿ ಯಾವುದೇ ದೊಡ್ಡ ಪ್ರಮಾಣದಲ್ಲಿ ಉಗ್ರರ ದಾಳಿ ನಡೆದಿಲ್ಲ ಎಂಬ ಹೇಳಿಕೆಗೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ತರಾಟೆಗೆ ತೆಗೆದುಕೊಂಡಿರುವ ಕಾಂಗ್ರೆಸ್ ಹಾಗಾದರೆ ಪಠಾಣ್‌ಕೋಟ್ ಮತ್ತು ಉರಿಯಲ್ಲಿ ನಡೆದಿದ್ದು ಏನು ಎಂದು ಪ್ರಶ್ನಿಸಿದೆ.

ಸೀತಾರಾಮನ್ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ ಕಾಂಗ್ರೆಸ್ ಸಂಸದ ಅಹ್ಮದ್ ಪಟೇಲ್, 2014ರ ನಂತರ ದೇಶದಲ್ಲಿ ಉಗ್ರರ ದಾಳಿ ನಡೆದಿಲ್ಲ ಎಂಬ ರಕ್ಷಣಾ ಸಚಿವೆಯ ಹೇಳಿಕೆಯಿಂದ ಆಶ್ಚರ್ಯವಾಗಿದೆ. ಕಳೆದ 55 ತಿಂಗಳಲ್ಲಿ ಪಠಾಣ್‌ಕೋಟ್, ಉರಿ, ಅಮರನಾಥ ಹಾಗೂ ಇತರ ಕಡೆಗಳಲ್ಲಿ ನಡೆದ ಉಗ್ರರ ದಾಳಿಯಲ್ಲಿ 400 ಯೋಧರು ಹುತಾತ್ಮರಾಗಿದ್ದಾರೆ ಎನ್ನುವುದನ್ನು ನಾನು ಅವರಿಗೆ ನೆನಪಿಸಲು ಇಷ್ಟಪಡುತ್ತೇನೆ ಎಂದು ತಿಳಿಸಿದ್ದಾರೆ.

ಹೊಸದಿಲ್ಲಿಯಲ್ಲಿ ನಡೆದ ಬಿಜೆಪಿ ರಾಷ್ಟ್ರೀಯ ಸಮ್ಮೇಳನದಲ್ಲಿ ಮಾತನಾಡಿದ ಸೀತಾರಾಮನ್, ಉಗ್ರರು ಭಾರತದ ಶಾಂತಿಯನ್ನು ಕದಡಲು ಉಗ್ರರಿಗೆ ಯಾವುದೇ ಅವಕಾಶ ದೊರೆಯದಂತೆ ಪ್ರಧಾನಿ ಮೋದಿ ನೋಡಿಕೊಂಡಿದ್ದಾರೆ ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ಸರಕಾರದ ವಿರುದ್ಧ ಟೀಕೆಗಳ ಸುರಿಮಳೆಗರೆದಿರುವ ಕಾಂಗ್ರೆಸ್ ವಕ್ತಾರ ಮನೀಶ್ ತಿವಾರಿ, ಮೋದಿ ಉದ್ದೇಶಪೂರ್ವಕವಾಗಿ ದೇಶದ ಜನರಿಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ದೇಶದಲ್ಲಿ ಕಳೆದ 55 ತಿಂಗಳಲ್ಲಿ ಉಗ್ರರ ದಾಳಿ ನಡೆದಿಲ್ಲವಾದರೆ ಸರ್ಜಿಕಲ್ ಸ್ಟ್ರೈಕ್ ನಡೆಸುವ ಅಗತ್ಯವೇನಿತ್ತು. ಪಠಾಣ್‌ಕೋಟ್ ಮತ್ತು ಉರಿಯಲ್ಲಿ ನಡೆದ ಉಗ್ರರ ದಾಳಿಯ ಬಗ್ಗೆ ಏನು ಹೇಳುವಿರಿ? ಜಮ್ಮು ಮತ್ತು ಕಾಶ್ಮೀರದಲ್ಲಿರುವ ಪರಿಸ್ಥಿತಿಗೆ ಕಾರಣ ಯಾರು ಎಂದು ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News