ಜಾತ್ಯಾತೀತ ಶಿವಾಜಿ ಒಂದು ಧರ್ಮ, ಪಕ್ಷದ ಸಿದ್ಧಾಂತದ ಸೊತ್ತಲ್ಲ: ಪುತ್ತೂರಿನಲ್ಲಿ ಶಿವಾಜಿಯ 13ನೇ ತಲೆಮಾರಿನ ಕುಡಿ

Update: 2019-01-12 17:14 GMT

“ಅವರ ಆಸ್ಥಾನದಲ್ಲಿ ಮುಸ್ಲಿಮರು, ದಲಿತರಿದ್ದರು”

“ಅಫ್ಝಲ್ ಖಾನ್ ‍ನನ್ನು ಕೊಲ್ಲಲು ವೈರತ್ವವೇ ಕಾರಣ ಹೊರತು ಧರ್ಮವಲ್ಲ”

ಪುತ್ತೂರು, ಜ.12: ಛತ್ರಪತಿ ಶಿವಾಜಿ ಮಹಾರಾಜರು ಜಾತ್ಯಾತೀತ ಸಿದ್ಧಾಂತದಲ್ಲಿ ಬದುಕಿದವರಾಗಿದ್ದು, ಅವರು ಯಾವುದೇ ಒಂದು ಧರ್ಮ ಅಥವಾ ಪಕ್ಷಪಾತದ ಸಿದ್ಧಾಂತವನ್ನು ಮೈಗೂಡಿಸಿಕೊಂಡಿರಲಿಲ್ಲ. ಸರ್ವ ಜನರ ಕಲ್ಯಾಣ ಮಾಡಿದ್ದ ಅವರು ಯಾವುದೇ ಒಂದು ಪಕ್ಷ ಅಥವಾ ಧರ್ಮದ ಸಿದ್ಧಾಂತದ ಸೊತ್ತಲ್ಲ ಎಂದು ಛತ್ರಪತಿ ಶಿವಾಜಿ ಕುಟುಂಬದ 13ನೇ ತಲೆಮಾರಿನ ಕುಡಿಯಾದ ರಂಜಿತ್ ಸಿಂಹ ಬಾಳಸಾಹೇಬ್ ಚೌಹಾಣ್ ಹೇಳಿದರು.

ಅವರು ಪುತ್ತೂರು ಬ್ಲಾಕ್ ಕಾಂಗ್ರೆಸ್ ಸಮಿತಿ ಮತ್ತು ಕಾಂಗ್ರೆಸ್ ಸಾಮಾಜಿಕ ಜಾಲತಾಣ ವಿಭಾಗಗಳ ಜಂಟಿ ಆಶ್ರಯದಲ್ಲಿ ಶನಿವಾರ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ `ಛತ್ರಪತಿ ಶಿವಾಜಿ ಜಾತ್ಯತೀತ ನಾಯಕ' ಎಂಬ ವಿಚಾರದಲ್ಲಿ ಮಾತನಾಡಿದರು.

ಈ ದೇಶದ ಆತ್ಮವಾಗಿರುವ ಜಾತ್ಯಾತೀತತೆ ಎಂಬ ಸಿದ್ಧಾಂತವನ್ನು ಶಿವಾಜಿ ಮಹಾರಾಜರು ಎಂದೂ ಮರೆತಿಲ್ಲ. ಅವರ ಆಸ್ಥಾನದಲ್ಲಿ ಮತ್ತು ಸೈನ್ಯದಲ್ಲಿ ಹಿಂದುಳಿದವರು, ಮುಸ್ಲಿಮರು, ದಲಿತರು ಸೇರಿದಂತೆ ಎಲ್ಲಾ ಸಮುದಾಯದವರನ್ನೂ ನೇಮಿಸಿದ್ದರು. ಯುದ್ಧ ಎಂಬುದು ಕ್ಷತ್ರಿಯರ ಧರ್ಮವಾಗಿದ್ದು, ಅದರಂತೆ ಅವರು ತಮ್ಮ ಶತ್ರುಗಳನ್ನು ಯುದ್ಧದಲ್ಲಿ ಹತ್ಯೆ ಮಾಡಿರುವರೇ ವಿನಃ ಯಾವುದೇ ಜಾತಿ ಅಥವಾ ಧರ್ಮವನ್ನು ನೋಡಿಲ್ಲ. ವೈರಿ ರಾಜರುಗಳ ಜೊತೆ ಸೇರಿಕೊಂಡ ಕಾರಣಕ್ಕೆ ತಮ್ಮ ಸಂಬಂಧಿಗಳನ್ನೂ ಅವರು ವಧಿಸಿದ್ದರು. ಅಫ್ಝಲ್ ಖಾನ್ ‍ನನ್ನು ಕೊಲ್ಲಲು ಆತನ ವಿರುದ್ಧದ ವೈರತ್ವವೇ ಹೊರತು ಆತನ ಧರ್ಮವಲ್ಲ. ಶಿವಾಜಿ ಮಹಾರಾಜರ ಒಂದೇ ಮುಖ ನೋಡಿ ತೀರ್ಪು ನೀಡುವುದು ಸರಿಯಲ್ಲ ಎಂದರು.

500 ವರ್ಷಗಳ ಹಿಂದೆಯೇ ಪ್ರಜಾಪ್ರಭುತ್ವದ ಕಲ್ಪನೆಯನ್ನು ಹೊಂದಿ ಅದರ ಅನುಷ್ಠಾನಗೊಳಿಸಿದ್ದ ಶಿವಾಜಿ ಮಹಾರಾಜರು ಸರ್ವ ಜನರ ಕಲ್ಯಾಣವಾಗಿರುವ ಸ್ವರಾಜ್ಯ ಪದ್ಧತಿಯನ್ನು ಅಂದೇ ಜಾರಿಗೊಳಿಸಿದ್ದರು. ಮಹಾತ್ಮ ಗಾಂಧೀಜಿಯವರು ಇದನ್ನೇ ಪುನರುಚ್ಚರಿಸಿದ್ದಾರೆ. ಶಿವಾಜಿ ದಮನಿತರ, ಶೋಷಿತರ ಕಣ್ಣೀರೊರೆಸಿದರು. ಅವರ ನಂತರ ಬಂದ ಎಲ್ಲ ಮರಾಠ ದೊರೆಗಳು, ಸಾಹುಜಿ ಮಹರಾಜರು ಕೂಡ ಇದೇ ಕೆಲಸ ಮಾಡಿದರು ಎಂದು ಹೇಳಿದರು.

ಜಾತಿ, ಧರ್ಮಗಳ ಹೆಸರಿನಲ್ಲಿ ಜನರನ್ನು ವಿಭಜನೆ ಮಾಡುವ ಕೆಲಸ ಶಿವಾಜಿ ಮಹಾರಾಜರು ಯಾವತ್ತೂ ಮಾಡಿರಲಿಲ್ಲ. ಅವರ ಆಶಯಗಳನ್ನು ಎಲ್ಲರೂ ಅರ್ಥ ಮಾಡಿಕೊಳ್ಳುವುದು ಬಹಳ ಮುಖ್ಯ. ಯಾವುದೇ ಮತ, ಧರ್ಮದ ಆಧಾರದಲ್ಲಿ ದೇಶ ಕಟ್ಟುವ ಕನಸು ಶಿವಾಜಿ ಕಂಡಿರಲಿಲ್ಲ. ಬದಲಾಗಿ ಎಲ್ಲ ಜನರು ಸುಖವಾಗಿ ಬಾಳುವಂಥ ಸ್ವರಾಜ್ಯ ಅವರ ಕನಸಾಗಿತ್ತು. ಅದನ್ನು ಸಾಧಿಸಿ ತೋರಿಸಿದರು ಎಂದು ಹೇಳಿದರು.

ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಮಾತನಾಡಿ, ಒಂದು ಸುಳ್ಳನ್ನು ಹತ್ತು ಬಾರಿ ಹೇಳಿ ಅದನ್ನೇ ನಿಜ ಮಾಡುವ ಗೊಬೆಲ್ ಸೂತ್ರವನ್ನು ಬಿಜೆಪಿ ನಡೆಸುತ್ತಿದ್ದು, ಸ್ವಾಮಿ ವಿವೇಕಾನಂದರು ಹಾಗೂ ಶಿವಾಜಿ ಮಹಾರಾಜರಂತಹ ಜಾತ್ಯಾತೀತ ಮೇರು ವ್ಯಕ್ತಿಗಳ ವ್ಯಕ್ತಿತ್ವವನ್ನೇ ಬದಲಾವಣೆ ಮಾಡಿ ಬೇರೆಯೇ ಚಿತ್ರಣ ಕೊಡುವ ಕೆಲಸವನ್ನು ಮಾಡುತ್ತಾ ಬಂದಿದೆ. ಸತ್ಯ ಎಂದಿಗೂ ಸುಳ್ಳಾಗಲು ಸಾಧ್ಯವಿಲ್ಲ. ಶಿವಾಜಿ ಮಹಾರಾಜದ ಬಗ್ಗೆ ಅವರ ವಂಶಸ್ಥರೇ ಇದೀಗ ಸತ್ಯವನ್ನು ತೆರೆದಿಟ್ಟಿರುವುದರಿಂದ ಇನ್ನು ಸುಳ್ಳು ಪ್ರಚಾರ ನಡೆಸಿ ರಾಜಕೀಯ ಲಾಭ ಪಡೆಯಲು ಯತ್ನಿಸುವವರ ಮೊಹರಿನ ಅಗತ್ಯವಿಲ್ಲ ಎಂದರು.

ಸ್ವಾಮಿ ವಿವೇಕಾನಂದರು ಬಹುದೊಡ್ಡ ಸಮಾಜ ಸುಧಾರಕರು. ಸಮಾಜದ ಅಂಕುಡೊಂಕುಗಳನ್ನು ತಿದ್ದಿದವರು. ಚಿಕಾಗೋ ವಿಶ್ವಧರ್ಮ ಸಮ್ಮೇಳನದಲ್ಲಿ ಭಾರತೀಯ ಸಂಸ್ಕೃತಿಯ ಮೇರು ತತ್ವವನ್ನು ಲೋಕಕ್ಕೆ ತೋರಿಸಿದವರು. ಅಂಥವರನ್ನು ನಿರ್ದಿಷ್ಟ ಸಿದ್ಧಾಂತಕ್ಕೆ ಅಂಟಿಸುವ ಕೆಲಸವನ್ನು ವಿರೋಧ ಪಕ್ಷವರು ಮಾಡುತ್ತಿದ್ದಾರೆ. ಸೋನಿಯಾ ಗಾಂಧಿಯವರನ್ನು ಇಟಲಿ ಮಹಿಳೆ ಎಂದು ಮೂದಲಿಸುವ ಕೆಲಸ ಮಾಡಿದರು. ಆದರೆ ಭಾರತದ ಸೊಸೆಯಾಗಿ ಬಂದ ಹೆಣ್ಣು ಮಗಳು ನಮ್ಮ ಸಂಸ್ಕೃತಿಯ ಪ್ರಕಾರ ನಮ್ಮ ಮನೆಮಗಳಾಗುತ್ತಾಳೆ. ಇದನ್ನು ಕೂಡ ಮರೆತು ವರ್ತಿಸಿದರು.

ಇತ್ತೀಚಿನ ವರ್ಷಗಳಲ್ಲಿ ನೆಹರೂ ಕುಟುಂಬವನ್ನು ವಿಲನ್ ನಂತೆ ಚಿತ್ರಿಸುವ ಕೆಲಸ ನಡೆಯುತ್ತಿದೆ. ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಒಂದು ದಿನವೂ ಭಾಗವಹಿಸದ ಈ ವರ್ಗದವರು ನೆಹರೂ ಅವರಂಥ ಅಪ್ಪಟ ದೇಶಪ್ರೇಮಿಯನ್ನು ದೂಷಿಸುವುದನ್ನು ನೋಡಿದರೆ ಬೇಸರವಾಗುತ್ತದೆ ಎಂದು ಹೇಳಿದ ಸೊರಕೆ, ಇಂದು ಶಿವಾಜಿ ಅವರ ವಂಶಸ್ಥರು ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿರುವುದು ಸತ್ಯದ ಅನಾವರಣ ಆದಂತಾಗಿದೆ ಎಂದರು.

ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ಸಭಾ ಕಾರ್ಯಕ್ರಮದ ಕೊನೆಯಲ್ಲಿ ಕಾಂಗ್ರೆಸ್ ಮುಖಂಡರು ರಂಜಿತ್ ಸಿಂಹ ಬಾಳಸಾಹೇಬ್ ಚೌಹಾಣ್ ಅವರ ಜತೆ ಸಂವಾದ ನಡೆಸಿದರು. ದಕ್ಷಿಣ ಕನ್ನಡದಲ್ಲಿ ಶಿವಾಜಿ ಅವರನ್ನು ಒಂದು ಪಕ್ಷದ ಮುಖವಾಣಿಯಂತೆ ಬಿಂಬಿಸಲಾಗುತ್ತಿದೆ. ಕೋಮು ವ್ಯಕ್ತಿಯಾಗಿ ತೋರಿಸಲಾಗುತ್ತಿದೆ. ಇದು ಸರಿಯಾ ಎಂಬ ಪ್ರಶ್ನೆ ಕೇಳಿ ಬಂತು. ಇದಕ್ಕೆ ಉತ್ತರಿಸಿದ ಚೌಹಾಣ್, ಇದು ಖಂಡಿತಾ ಸರಿಯಲ್ಲ. ಶಿವಾಜಿ ಅವರು ಪಕ್ಷ, ಧರ್ಮ, ಜಾತಿಗಳ ಸೊತ್ತಲ್ಲ. ಅದನ್ನು ಮೀರಿದವರು. ರಾಜಕೀಯ ಪಕ್ಷಗಳು ಆ ರೀತಿ ಮಾಡುತ್ತಿದ್ದರೆ ನಾವೆಲ್ಲ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇರುವ ಕಾರಣ ಅದಕ್ಕೆ ಸೂಕ್ತ ಉತ್ತರ ನೀಡಲು ಸಾಧ್ಯವಿದೆ ಎಂದರು. ನಾವೆಲ್ಲ ಜಾತ್ಯತೀತರಾಗೋಣ. ಜಾತ್ಯತೀತತೆ ನಮ್ಮ ಕೆಲಸದ ಮೂಲಕ ತೋರಿಸೋಣ ಎಂದು ಅವರು ಕರೆ ನೀಡಿದರು.

ಜಿಪಂ ಸದಸ್ಯರಾದ ಎಂ.ಎಸ್. ಮುಹಮ್ಮದ್, ಚೌಹಾಣ್ ಅವರನ್ನು ಪುತ್ತೂರಿಗೆ ಕರೆಸಿದ ರಘುರಾಮ್ ಶೆಣೈ, ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುಹಮ್ಮದ್ ಬಡಗನ್ನೂರು, ವಿಟ್ಲ ಬ್ಲಾಕ್ ಅಧ್ಯಕ್ಷ ಮುರಳಿಧರ ರೈ ಮಠಂತಬೆಟ್ಟು ಉಪಸ್ಥಿತರಿದ್ದರು. ಇಸಾಕ್ ಸಾಲ್ಮರ ಕಾರ್ಯಕ್ರಮ ನಿರ್ವಹಿಸಿದರು. ಬ್ಲಾಕ್ ಪ್ರಧಾನ ಕಾರ್ಯದರ್ಶಿ ಕೃಷ್ಣ ಪ್ರಸಾದ್ ಆಳ್ವ ವಂದಿಸಿದರು.

ನಗರ ಕಾಂಗ್ರೆಸ್ ಅಧ್ಯಕ್ಷ ಸೂತ್ರಬೆಟ್ಟು ಜಗನ್ನಾಥ ರೈ, ಸೇವಾದಳದ ಜೋಕಿಂ ಡಿಸೋಜ, ಸಾಮಾಜಿಕ ಜಾಲತಾಣ ವಿಭಾಗದ ಪೂರ್ಣೇಶ್ ಭಂಡಾರಿ, ಪ್ರಮುಖರಾದ ಎಂ.ಬಿ. ವಿಶ್ವನಾಥ ರೈ, ಅಮಳ ರಾಮಚಂದ್ರ, ಆಕರ್ಷಣ್ ಹಾಜಿ, ವಲೇರಿಯನ್ ಡಯಾಸ್, ವಿಲ್ಮಾ ಗೋನ್ಸಾಲ್ವಿಸ್, ನೂರುದ್ದೀನ್ ಸಾಲ್ಮರ, ಉಲ್ಲಾಸ್ ಕೋಟ್ಯಾನ್, ಸಂತೋಷ್ ಭಂಡಾರಿ ಚಿಲ್ಮೆತ್ತಾರ್, ನಗರಸಭಾ ಸದಸ್ಯರು, ಪಕ್ಷದ ಕಾರ್ಯಕರ್ತರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News