ಲೋಕಸಭಾ ಚುನಾವಣೆಯಲ್ಲಿ ಕೇಜ್ರಿವಾಲ್ ಸ್ಪರ್ಧಿಸುವುದಿಲ್ಲ: ಆಮ್ ಆದ್ಮಿ ಪಾರ್ಟಿ

Update: 2019-01-13 14:30 GMT

ಲಕ್ನೋ,ಜ.13: ಆಪ್ ಸಂಚಾಲಕ ಹಾಗೂ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ವಾರಣಾಸಿಯಿಂದ ಸ್ಪರ್ಧಿಸುವುದಿಲ್ಲ,ಆದರೆ ಆ ಕ್ಷೇತ್ರದಲ್ಲಿ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಲಾಗುವುದು ಎಂದು ಪಕ್ಷವು ಹೇಳಿದೆ.

ಕೇಜ್ರಿವಾಲ್ ತನ್ನ ರಾಜ್ಯಕ್ಕೆ ವಿಶೇಷ ಗಮನ ನೀಡಲು ಬಯಸಿರುವುದರಿಂದ ಅವರು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ಆಪ್ ದಿಲ್ಲಿ,ಪಂಜಾಬ್,ಹರ್ಯಾಣ ಮತ್ತು ಗೋವಾ ರಾಜ್ಯಗಳಲ್ಲಿ ಎಲ್ಲ ಲೋಕಸಭಾ ಸ್ಥಾನಗಳಿಗೆ ಮತ್ತು ಉತ್ತರ ಪ್ರದೇಶದ ಕೆಲವು ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ. ಈ ಬಗ್ಗೆ ವಿವರಗಳನ್ನು ಫೆಬ್ರವರಿಯೊಳಗೆ ಅಂತಿಮಗೊಳಿಸಲಾಗುವುದು. ವಾರಣಾಸಿಯ ಜೊತೆಗೆ ಪಕ್ಷದ ಸಂಘಟನೆ ಬಲವಾಗಿರುವ ಪೂರ್ವ ಮತ್ತು ಪಶ್ಚಿಮ ಉತ್ತರ ಪ್ರದೇಶಗಳ ಕೆಲವು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು ಎಂದು ಆಪ್ ವಕ್ತಾರ ಹಾಗೂ ರಾಜ್ಯಸಭಾ ಸದಸ್ಯ ಸಂಜಯ ಸಿಂಗ್ ಅವರು ರವಿವಾರ ಸುದ್ದಿಸಂಸ್ಥೆಗೆ ತಿಳಿಸಿದರು.

ದಿಲ್ಲಿಯಲ್ಲಿ ತನ್ನ ಪಕ್ಷವು ಶಿಕ್ಷಣ,ಆರೋಗ್ಯ,ಕೃಷಿ,ವಿದ್ಯುತ್ ಮತ್ತು ಕುಡಿಯುವ ನೀರು ಪೂರೈಕೆ ಕ್ಷೇತ್ರಗಳಲ್ಲಿ ಶ್ರಮಿಸುತ್ತಿದೆ. ನಾವು ರಾಷ್ಟ್ರ ರಾಜಕಾರಣವನ್ನು ಪ್ರವೇಶಿಸಿದರೆ ಎಲ್ಲರಿಗೂ ಶಿಕ್ಷಣ,ಸಮಾಜದ ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ ಉಚಿತ ಶಿಕ್ಷಣ,ನಿರುದ್ಯೋಗಕ್ಕೆ ಅಂತ್ಯ ಮತ್ತು ಸ್ವಾಮಿನಾಥನ್ ಆಯೋಗದ ಶಿಫಾರಸುಗಳ ಜಾರಿ ಇವು ಪಕ್ಷದ ಮೊದಲ ಆದ್ಯತೆಗಳಾಗಲಿವೆ ಎಂದು ಸಿಂಗ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News