'ಸಮಾಜದ ವಿನ್ಯಾಸ ಬದಲಾದಂತೆ ಹೊಸ ಸಾಹಿತ್ಯದ ಸೃಷ್ಟಿ ಅಗತ್ಯ'

Update: 2019-01-13 14:40 GMT

ಬೆಳ್ಮಣ್, ಜ.13: ಸಮಾಜದ ವಿನ್ಯಾಸ ಬದಲಾದಂತೆ ಸಮಾಜದ ಸತ್ಯ ಮತ್ತು ಋತಗಳನ್ನು ಅರಿಯುವ ಮಾನದಂಡಗಳು ಬೇರೆಯಾಗುತ್ತ ಹೋಗುವುದ ರಿಂದ ಹೊಸ ಹೊಸ ಸಾಹಿತ್ಯದ ಸೃಷ್ಟಿ ಆಗಬೇಕಾಗುತ್ತದೆ ಎಂದು ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿರುವ ಸಾಹಿತಿ, ಲೇಖಕ, ಕವಿ ಡಾ.ಬಿ. ಜನಾರ್ದನ ಭಟ್ ಹೇಳಿದ್ದಾರೆ.

ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ಕಾರ್ಕಳ ತಾಲೂಕಿನ ಮುಂಡ್ಕೂರು ದುರ್ಗಾಪರಮೇಶ್ವರೀ ದೇವಸ್ಥಾನದ ನಾನಾ ಪಾಟೇಕರ್ ಸಭಾಂಗಣದಲ್ಲಿ ಆಯೋಜಿಸಲಾದ ಎರಡು ದಿನಗಳ 13ನೆ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಸಮಾರಂಭದ ಅಧ್ಯಕ್ಷ ಸ್ಥಾನದಿಂದ ಅವರು ಮಾತನಾಡುತಿದ್ದರು.

ಸಾಹಿತ್ಯ ಸಮಾಜದಲ್ಲಿ ಸದಾಚಾರ ಮತ್ತು ಜನರಲ್ಲಿ ಸದ್ಗುಣಗಳನ್ನು ನೆಲೆಗೊಳಿಸುವುದಕ್ಕಾಗಿ ಇರುವ ಭಾಷಾ ಮಾಧ್ಯಮವಾಗಿದೆ. ಸಾಹಿತ್ಯದಲ್ಲಿ ಆದರ್ಶ ಕಥನ ಮತ್ತು ವಾಸ್ತವ ಕಥನ ಎಂಬ ಎರಡು ಪ್ರಮುಖ ಮಾದರಿಗಳಿವೆ. ಒಂದು ಸಾಹಿತ್ಯ ಕೃತಿಯು ಸತ್ಯ ಮತ್ತು ಋತ ಎಂಬ ಆಯಾಮಗಳನ್ನು ಅರ್ಥ ಮಾಡಿಸಿದರೆ ಅದು ಶಾಶ್ವತವಾಗಿ ಉಳಿಯುತ್ತದೆ ಎಂದರು.

ಈಗ ಸೃಜನಶೀಲ ಸಾಹಿತ್ಯಕ್ಕಿಂತ ಸೃಜನೇತರ ಸಾಹಿತ್ಯವೇ ಹೆಚ್ಚಾಗಿದೆ. ಸಾಹಿತ್ಯಕ್ಕೆ ಹಿಂದೆ ಇದ್ದ ನಾಯಕ ಸ್ಥಾನ ಕಳೆದುಹೋಗಿದೆ. ಹಿಂದೆ ಸಮಾಜದ ಎಲ್ಲ ಆಗುಹೋಗುಗಳಿಗೂ ಸಾಹಿತಿಗಳೇ ಪ್ರತಿಕ್ರಿಯೆ ನೀಡುತ್ತಿದ್ದರು. ಈಗ ಸಾಹಿತ್ಯಕ್ಕೆ ಸಮಾಜದಲ್ಲಿ ಹಿಂದೆ ಇದ್ದ ಪ್ರಾಮುಖ್ಯ ಇಲ್ಲ ಎಂದು ಅವರು ತಿಳಿಸಿದರು.

ಸಾಹಿತ್ಯದ ಪ್ರಸಾರಕ್ಕೆ ಸಾಮಾಜಿಕ ಜಾಲತಾಣಗಳ ಸಾಧ್ಯತೆ ಅಪಾರ. ಆದರೆ ಇಲ್ಲಿ ಸಮನ್ವಯಕಾರರ ಕೊರತೆ ಇದೆ. ಮುಖ್ಯವಾಗಿ ಎಡಪಂಥ ಮತ್ತು ಬಲಪಂಥ ಎಂಬ ಎರಡು ಬಣಗಳನ್ನು ಇಲ್ಲಿ ಕಾಣಬಹುದು. ಮಧ್ಯಮ ಪಂಥ ಎಂಬುದು ಇಂದು ಅಗತ್ಯ ಇದೆ. ಆ ಮೂಲಕ ಸಮನ್ವಯಕ್ಕೆ ಕೆಲವರು ಪ್ರಯತ್ನಿಸಿದರೂ ಉಳಿದ ಎರಡು ಪಂಥಗಳು ಅದನ್ನು ಸಮನ್ವಯಕಾರನಂತೆ ಭಾವಿಸದೆ ವಿರೋಧಿಯೆಂದು ಭಾವಿಸುತ್ತದೆ ಎಂದು ಅವರು ಹೇಳಿದರು.

ಪತ್ರಿಕೆಗಳಲ್ಲಿ ಪುಸ್ತಕ ಸಂಸ್ಕೃತಿಗೆ ಅವಕಾಶ ಕಡಿಮೆಯಾಗಿದೆ. ಹಾಗಾಗಿ ಸಾಹಿತ್ಯಾಸಕ್ತರು ಜಾಲತಾಣಗಳ ಮೂಲಕ ಪುಸ್ತಕ ಸಂಸ್ಕೃತಿಯನ್ನು ಉಳಿಸಿ ಕೊಳ್ಳುವ ಪ್ರಯತ್ನವನ್ನು ಮಾಡುತ್ತಿದ್ದಾರೆ. ಕವಿತೆ ಎಂಬ ಪ್ರಕಾರ ತನ್ನ ಪ್ರಸ್ತುತತೆ ಕಳೆದುಕೊಳ್ಳುತ್ತಿದ್ದಂತೆಯೇ ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ಮತ್ತೆ ಜನಪ್ರಿಯತೆ ಗಳಿಸುತ್ತಿರುವುದು ಸಂತೋಷ ಸಂಗತಿ ಎಂದು ಅವರು ತಿಳಿಸಿದರು.

ಕೆಳದಿಯ ನಾಯಕರು, ಟಿಪ್ಪುಸುಲ್ತಾನ ಹಾಗೂ ಬ್ರಿಟಿಷರ ಆಳ್ವಿಕೆಯ ಪ್ರಾರಂಭದ ಘಟ್ಟದಲ್ಲಿ ರಾಜಕೀಯ ಅಸ್ಥಿರತೆಯ ಕಾರಣದಿಂದ ಇಲ್ಲಿ ಸಾಹಿತ್ಯ ಕಲೆಗಳಿಗೆ ಪ್ರೋತ್ಸಾಹ ಇರಲಿಲ್ಲ. ಮಿಷನರಿಗಳ ಪ್ರಯತ್ನದಿಂದಾಗಿ ಆಧುನಿಕ ಶಿಕ್ಷಣ ವ್ಯವಸ್ಥೆ ಪ್ರಾರಂಭವಾಗಿ ಅನುವಾದಗಳ, ಪತ್ರಿಕೆಗಳ ಮೂಲಕ ಹೊಸ ಸಾಹಿತ್ಯ ಪ್ರಕಾರಗಳಿಗೆ ಇಲ್ಲಿನ ಜನ ತೆರೆದುಕೊಂಡರು. 19ನೆ ಶತಮಾನದ ಕೊನೆಗೆ ಮತ್ತು 20ನೆ ಶತಮಾನದ ಪ್ರಾರಂಭದಲ್ಲಿ ಹೊಸಗನ್ನಡದ ಅರುಣೋದ ಯವಾಯಿತು ಎಂದರು.

ಪ್ರಾಚೀನ ಕಾಲದಿಂದಲೂ ಉಡುಪಿ ಜಿಲ್ಲೆ ವಿವಿಧ ಬಗೆಯ ಸಾಮರಸ್ಯಕ್ಕೆ ಹೆಸರಾಗಿದೆ. ಇದು ಇತಿಹಾಸ ಕಾಲದಲ್ಲಿಯೂ ಮತ, ಧರ್ಮಗಳ ಪರಂಪರೆ ಯಲ್ಲಿ ಮುಂದುವರಿದುಕೊಂಡು ಬಂದಿರುವುದನ್ನು ಕಾಣಬಹುದು. ಇಲ್ಲಿ ಭಾಷಾ ಸಾಮರಸ್ಯ ಕೂಡ ಇದೆ. ಕನ್ನಡ, ತುಳು, ಕೊಂಕಣಿ ಮತ್ತು ಬ್ಯಾರಿ ಭಾಷೆಗಳು ಇಲ್ಲಿನ ಪ್ರಧಾನ ಜನನುಡಿಗಳಾಗಿವೆ ಎಂದು ಅವರು ಹೇಳಿದರು.

ಮಹಾ-ಕಿರಿಯ ಸಮುದಾಯಗಳ ಮಧ್ಯೆ ಸಂಘರ್ಷ

20ನೆ ಶತಮಾನದಲ್ಲಿ ಶೋಷಕ ಪ್ರವೃತ್ತಿಯನ್ನು ಬೆಳೆಸಿಕೊಂಡ ಮಹಾ ಸಮುದಾಯ ಮತ್ತು ಹೊಸ ಸಾಧ್ಯತೆಗಳನ್ನು ಅನ್ವೇಷಿಸುತ್ತ ಹೊಸ ಸಂಬಂಧ ಗಳನ್ನು ಬೆಸೆಯುವ ಕಿರಿಯ ಸಮುದಾಯಗಳ ನಡುವಿನ ಸಂಘರ್ಷಗಳ ವಿವಿಧ ಸ್ವರೂಪಗಳನ್ನು ಆಧುನಿಕ ಸಾಹಿತ್ಯ ಕೃತಿಗಳು ದಾಖಲಿಸುತ್ತ ಬಂದಿವೆ ಎಂದು ಡಾ.ಬಿ.ಜನಾರ್ದನ ಭಟ್ ಹೇಳಿದರು.

ಭೂಹಿಡುವಳಿದಾರರು, ಉದ್ಯಮಿಗಳು, ಸಮುದಾಯಗಳ ಪಾರಂಪರಿಕ ಗುರಿಕಾರರು ಮತ್ತು ಆರಾಧನಾ ಸ್ಥಳಗಳ ಆಡಳಿತವರ್ಗದವರ ಮಹಾ ಸಮುದಾಯ ಶೋಷಕ ಪ್ರವೃತ್ತಿ ಹೊಂದಿತ್ತು. ಇದಕ್ಕೆ ಪ್ರತಿಯಾಗಿರುವ ಬಡವರು, ಶೋಷಿತರು ಮತ್ತು ನವವಿದ್ಯಾವಂತರ ಕಿರಿಯ ಸಮುದಾಯ ರೂಪುಗೊಂಡಿತ್ತು. ಇದರ ಪ್ರತಿನಿಧಿಗಳು ಪಾರಂಪರಿಕ ಶಕ್ತಿಯ ಕೇಂದ್ರಗಳ ಹಿಡಿತವನ್ನು ಪ್ರಶ್ನಿಸುತ್ತಾರೆ. ಅವುಗಳನ್ನು ದುರ್ಬಲ ಗೊಳಿಸುವುದರ ಮೂಲಕ ಶೋಷಣೆಯಿಲ್ಲದ ಸಮಾಜವೊಂದರ ನಿರ್ಮಾಣಕ್ಕೆ ಪ್ರಯತ್ನಿಸುತ್ತಾರೆ. ಈ ಕಿರಿಯ ಸಮುದಾಯದ ಪ್ರತಿನಿಧಿಗಳು ಜಾತಿ ಕಟ್ಟಳೆ ಯನ್ನು ಕೂಡ ಮೀರಿ ಒಂದು ಆದರ್ಶ ಸಮಾಜದ ಸ್ಥಾಪನೆಗೆ ಮುಂದಾಗುತ್ತಾರೆ. ಈ ಹಂತದಲ್ಲಿ ಕೆಲವು ಕೃತಿಗಳು ಆದರ್ಶವಾದಿ ನಿಲುವನ್ನು ತಳೆಯುತ್ತವೆ. ಇನ್ನು ಕೆಲವು ದುರಂತದಲ್ಲಿ ಕೊನೆಗೊಳ್ಳುತ್ತವೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News