×
Ad

ಬೈಕ್‌ನಲ್ಲಿ ಅಂಗಾಂಗ ದಾನದ ಮಹತ್ವದ ಜಾಗೃತಿ: 67ರ ಹರೆಯದ ಪ್ರಮೋದ್ ಮಹಾಜನ್‌ಗೆ ಮಂಗಳೂರಿನಲ್ಲಿ ಸ್ವಾಗತ

Update: 2019-01-14 18:29 IST

ಮಂಗಳೂರು, ಜ.14: ಬೈಕ್ ಮೂಲಕವೇ ದೇಶ ಸುತ್ತಿ ಅಂಗಾಂಗ ದಾನದ ಮಹತ್ವ ಸಾರುತ್ತಿರುವ 67ರ ಹರೆಯದ ರೈತ ಪ್ರಮೋದ್ ಲಕ್ಷ್ಮಣ್ ಮಹಾಜನ್ ಸೋಮವಾರ ಮಂಗಳೂರಿಗೆ ಆಗಮಿಸಿದ್ದು, ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಮತ್ತು ಜಿಲ್ಲಾ ವೆನ್ಲಾಕ್ ಆಸ್ಪತ್ರೆ ವತಿಯಿಂದ ಅವರನ್ನು ಜಿಲ್ಲಾಕಾರಿ ಕಚೇರಿ ಮುಂಭಾಗ ಸ್ವಾಗತಿಸಲಾಯಿತು.

ಬಳಿಕ ವೆನ್ಲಾಕ್ ಆಸ್ಪತ್ರೆಯ ಮಕ್ಕಳ ವಿಭಾಗದ ಆರ್‌ಎಪಿಸಿಸಿ ಸಭಾಂಗಣದಲ್ಲಿ ಅವರನ್ನು ಅಭಿನಂದಿಸಲಾಯಿತು. ಬಳಿಕ ಮಾತನಾಡಿದ ಮಾಹಾಜನ್, ಅಂಗಾಂಗ ದಾನ ಇದು ಸಹಬಾಳ್ವೆಯ ಆಶಯವಾಗಿದೆ. ಜಾತಿ, ಧರ್ಮಗಳ ಮುಖ ನೋಡದೆ ಜನರು ಅಂಗಾಂಗ ದಾನಕ್ಕೆ ಮುಂದಾಗಬೇಕು ಎಂದು ಕರೆ ನೀಡಿದರು.

2000ನೇ ಇಸವಿಯಲ್ಲಿ ಕಿಡ್ನಿಗಳೆರಡನ್ನೂ ಕಳೆದುಕೊಂಡ ಯೋಧನಿಗೆ ನನ್ನ ಒಂದು ಕಿಡ್ನಿ ನೀಡಲು ಮುಂದಾದೆ. ಕಿಡ್ನಿ ದಾನ ಮಾಡಬೇಕಾದರೆ ತಂದೆ, ತಾಯಿ, ಮಕ್ಕಳು, ಪತ್ನಿ ಯಾರಾದರೊಬ್ಬರ ಸಹಿಯ ಅಗತ್ಯವಿತ್ತು. ಸಹಿ ಹಾಕಲು ನನ್ನವರಾರೂ ಒಪ್ಪಲಿಲ್ಲ. ಕೊನೆಗೆ ಸಮಾಧಾನವಾಗಿ ವಿವರಿಸಿ ಹೇಳಿದ ಬಳಿಕ ಒಪ್ಪಿದರು ಎಂದವರು ತನ್ನ ಜೀವನಗಾಥೆಯನ್ನು ಬಿಚ್ಚಿಟ್ಟರು.

ವೆನ್ಲಾಕ್ ಆಸ್ಪತ್ರೆ ಅಧೀಕ್ಷಕಿ ಡಾ. ರಾಜೇಶ್ವರಿ ದೇವಿ ಮಾತನಾಡಿ, ಅಂಗಾಂಗ ದಾನದ ಪ್ರಕ್ರಿಯೆ ನಡೆಸಲು ಜಿಲ್ಲಾ ವೆನ್ಲಾಕ್ ಆಸ್ಪತ್ರೆಯು 8 ವೈದ್ಯಕೀಯ ಕಾಲೇಜುಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಇದಕ್ಕಾಗಿ ಆಸ್ಪತ್ರೆಯಲ್ಲಿ ಕಚೇರಿಯನ್ನೂ ತೆರೆಯಲಾಗಿದೆ. ಆದರೆ ಈ ಪ್ರಕ್ರಿಯೆ ನಿರ್ವಹಿಸಲು ವೈದ್ಯರ ತಂಡವೊಂದು ಬೇಕಾಗಿದೆ ಎಂದರು.

ವೆನ್ಲಾಕ್ ಆರ್‌ಎಂಒ ಜ್ಯೂಲಿಯನ್ ಸಲ್ದಾನ್ಹಾ, ನಿವೃತ್ತ ಅಧಿಕಾರಿ ಪ್ರಭಾಕರ ಶರ್ಮ, ಮಂಗಳೂರು ಐಎಂಎ ಅಧ್ಯಕ್ಷ ಸಚ್ಚಿದಾನಂದ ರೈ, ರಾಜೇಶ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

18 ರಾಜ್ಯ ಸುತ್ತಿದ ಮಹಾಜನ್

ಪ್ರಮೋದ್ ಲಕ್ಷ್ಮಣ್ ಮಹಾಜನ್ ಅವರು ರೀಬರ್ತ್ ಫೌಂಡೇಶನ್‌ನೊಂದಿಗೆ ಗುರುತಿಸಿಕೊಂಡಿದ್ದು, ಅಂಗಾಂಗ ದಾನದ ಮಹತ್ವದ ಕುರಿತು ಜನರಲ್ಲಿ ಅರಿವು ಮೂಡಿಸಲು ದೇಶಾದ್ಯಂತೆ ಬೈಕ್ ಮೂಲಕವೇ ಸಂಚರಿಸುತ್ತಿದ್ದಾರೆ. ಈಗಾಗಲೇ 18 ರಾಜ್ಯಗಳಲ್ಲಿ 100 ದಿನಗಳವರೆಗೆ 10 ಸಾವಿರ ಕಿ.ಮೀ. ದೂರವನ್ನು ಕ್ರಮಿಸಿದ್ದಾರೆ. ಗೋವಾ ಮಾರ್ಗವಾಗಿ ಪುಣೆ ತಲುಪಲಿದ್ದಾರೆ. 2018ರ ಅ.21ರಂದು ಪುಣೆಯಲ್ಲಿ ಯಾತ್ರೆ ಆರಂಭಿಸಿದ್ದರು. ಈ ಯಾತ್ರೆ ಜ.26ರಂದು ಪುಣೆಯಲ್ಲಿಯೇ ಮುಕ್ತಾಯವಾಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News