ಮನುಷ್ಯ ಜೀವನ ಶ್ರೇಷ್ಠವಾಗಿದೆ: ಸಬಿಹಾ ಫಾತಿಮಾ

Update: 2019-01-14 13:20 GMT

ಭಟ್ಕಳ, ಜ. 14: ಮನುಷ್ಯ ಜೀವನ ಅತ್ಯಂತ ಶ್ರೇಷ್ಠವಾಗಿದ್ದು ಅದನ್ನು ದೈವಿಕ ಮಾರ್ಗದರ್ಶನದಂತೆ ಪ್ರವಾದಿಗಳ ಬೋಧನೆಯಂತೆ ಮುನ್ನೆಡೆಸಬೇಕಾಗಿದೆ ಎಂದು ಮಂಗಳೂರು ಅನುಪಮಾ ಮಹಿಳಾ ಮಾಸಿಕದ ಉಪಸಂಪಾದಕಿ ಸಬಿಹಾ ಫಾತಿಮಾ ಹೇಳಿದರು.

ಅವರು ಭಟ್ಕಳದ ಜಮಾಅತೆ ಇಸ್ಲಾಮಿ ಹಿಂದ್ ಮಹಿಳಾ ಘಟಕ ಅಲ್ ಕೌಸರ್ ಗಲ್ಸ್ ಕಾಲೇಜಿನಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ಸೀರತ್ ಕ್ವಿಝ್ ಮತ್ತು ಪ್ರಬಂಧ ಸ್ಪರ್ಧೆಯ ಬಹುಮಾನ ವಿತರಣಾ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿದರು.

ಅನ್ಯಾಯ ದಬ್ಬಾಳಿ, ಶೋಷಣೆ ಮುಕ್ತ ಸಮಾಜ ನಿರ್ಮಾಣವೇ ಪ್ರವಾದಿ ಮುಹಮ್ಮದ್(ಸ) ರ ಜೀವನದ ದ್ಯೇಯವಾಗಿತ್ತು ಎಂದ ಅವರು, ಪ್ರವಾದಿಗಳು ಅತ್ಯಂತ ಸರಳ ಸಜ್ಜನ ಬದುಕನ್ನು ಬದುಕಿ ಇಡೀ ಲೋಕಕ್ಕೆ ಮಾದರಿಯಾಗಿದ್ದರು. ಸ್ತ್ರೀ ಸಮಾನತೆಯ ಪ್ರತಿಪಾದಕರು, ಸ್ತ್ರೀಯರನ್ನು, ವೃದ್ಧರನ್ನು ಮಕ್ಕಳನ್ನು ಗೌರವಿಸುವಂತೆ ಸಮಾಜಕ್ಕೆ ಪಾಠ ಕಲಿಸಿದ ಗುರುವಾಗಿದ್ದರು. ಪ್ರವಾದಿ ಮುಹಮ್ಮದ್ ರು ಕೋಮುವಾದದ ವಿರುದ್ಧ ಸಮರ ಸಾರಿದ್ದು ಕೋಮುವಾದಕ್ಕ ಸಹಾಯ ಮಾಡುವ ವ್ಯಕ್ತಿ ಇಸ್ಲಾಮಿನಿಂದ ಹೊರಗುಳಿಯುತ್ತಾನೆ ಎಂದು ಸಾರಿದರು. ತನ್ನ ಸಮುದಾಯ ಕೆಟ್ಟಕೆಲಸ ಮಾಡಿದರೆ ಅದನ್ನು ಬೆಂಬಲಿಸುವಾತನೆ ನಿಜವಾದ ಕೋಮುವಾದಿಯಾಗಿದ್ದು ಮುಸ್ಲಿಮರು ಕೋಮುವಾದದಿಂದ ದೂರವಿರುವಂತೆ ಆದೇಶಿಸಿದ್ದಾರೆ ಎಂದ ಅವರು, ಪ್ರವಾದಿ ಮುಹಮ್ಮದ್ ಇಸ್ಲಾಮ್ ಧರ್ಮದ ಸ್ಥಾಪಕರಲ್ಲ, ಅವರು ಅಂತಿಮ ಪ್ರವಾದಿಯಾಗಿದ್ದಾರೆ. ಅವರ ಶಿಕ್ಷಣವು ಎಲ್ಲ ಕಾಲಗಳಿಗೂ ಅನ್ವಯವಾಗುತ್ತದೆ. ಭಾರತೀಯರು ಪರಸ್ಪರನ್ನು ಅರಿತು ಸೌಹಾರ್ದಯುತ ಜೀವನ ನಡೆಸಲು ಇಂತಹ ಕಾರ್ಯಕ್ರಮಗಳ ಮೂಲಕ ಸಾಧ್ಯವಾಗುತ್ತದೆ ಎಂದರು.

ಬಹುಮಾನ ವಿತರಕರಾಗಿ ಆಗಮಿಸಿದ್ದ ಭಟ್ಕಳ ಕ್ಷೇತ್ರ ಸಂಪನ್ಮೂಲಾಧಿಕಾರಿ ಶ್ರೀಮತಿ ಎಲ್ಲಮ್ಮ ಮರಿಸ್ವಾಮಿ ಮಾತನಾಡಿ ಮಾನವೀಯತೆಯೇ ಎಲ್ಲ ಧರ್ಮಗಳಿಗೂ ಮಿಗಿಲಾಗಿದ್ದು ನಾವೆಲ್ಲರೂ ಮಾನವೀಯ ಗುಣಗಳನ್ನು ಬೆಳೆಸಿಕೊಂಡು ಪರಸ್ಪರರು ಪ್ರೀತಿಯಿಂದ ಬಾಳುವುದನ್ನು ಕಲಿತುಕೊಳ್ಳಬೇಕೆಂದು ಕರೆ ನೀಡಿದರು.

ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಭಟ್ಕಳ ತಾಲೂಕಾಸ್ಪತ್ತೆಯ ವೈದ್ಯಾಧಿಕಾರಿ ಅರವಳಿಕೆ ತಜ್ಞೆ ಡಾ.ಸವಿತಾ ಕಾಮತ್ ಮಾತನಾಡಿ, ಭಟ್ಕಳದಲ್ಲಿ ಹಲವು ವರ್ಷಗಳಿಂದಲೂ ಹಿಂದೂ-ಮುಸ್ಲಿಮರು ಸೌಹಾರ್ದತೆಯಿಂದ ಬಾಳುತ್ತಿದ್ದಾರೆ ಎಂಬುದನ್ನು ಹಲವು ಉದಾಹರಣೆಗಳ ಮೂಲಕ ವಿವರಿಸಿ ಇಂತಹ ಕಾರ್ಯಕ್ರಮಗಳ ಮೂಲಕ ನಾವು ಶಾಂತಿ ಸೌಹಾರ್ದತೆಯನ್ನು ಸಾಧಿಸಬಹುದಾಗಿದೆ ಎಂದರು.

‘ಪ್ರವಾದಿ ಮುಹಮ್ಮದ್ ಮಾನವ ಕುಲದ ಶ್ರೇಷ್ಠ ಮಾರ್ಗದರ್ಶಕ’ ಎಂಬ  ವಿಷಯದಲ್ಲಿ  ತಾಲೂಕಿನ ಮಹಿಳೆಯರಿಗಾಗಿ ಆಯೋಜಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ 70ಕ್ಕೂ ಅಧಿಕ ಮಹಿಳೆಯರು ಭಾಗವಹಿಸಿದ್ದು, ನ್ಯೂ ಇಂಗ್ಲಿಷ್ ಪಿ.ಯು.ಕಾಲೇಜಿನ ಉಪನ್ಯಾಸಕಿ ನೂತನಾ ವಿ.ಭುಜಲೆ ಪ್ರಥಮ ಸ್ಥಾನ, ಜ್ಯೋತಿ ಹೆಬ್ಬಾರ್ ನ್ಯಾಶನಲ್ ಪಿಯು ಕಾಲೇಜ್ ಮುರುಡೇಶ್ವರ ದ್ವಿತೀಯಾ ಹಾಗೂ  ಮುರುಡೇಶ್ವರದ ಇಕ್ರಾ ಪ್ರೌಢಶಾಲೆಯ ನೊವೆಲ್ಲಾ ಅಸಿಸ್ ಲೂಯೀಸ್ ತೃತೀಯಾ ಬಹುಮಾನ ಪಡೆದುಕೊಂಡಿದ್ದಾರೆ. ವಿದ್ಯಾರ್ಥಿನೀಯರಿಗಾಗಿ ನಡೆದ ಸೀರತ್ ಕ್ವಿಝ್ ಸ್ಪರ್ಧೆಯಲ್ಲಿ ನ್ಯೂ ಇಂಗ್ಲಿಷ್ ಪಿಯು ಕಾಲೇಜಿನ ವಿದ್ಯಾರ್ಥಿನಿ ಜಯಶ್ರೀ ಕೃಷ್ಣ ಪ್ರಭು ಪ್ರಥಮ, ಇಕ್ರಾ ಪ್ರೌಢಾಲೆಯ ಸವಿತಾ ಕೆ.ಟಿ. ದ್ವಿತೀಯಾ ಹಾಗೂ ನ್ಯಾಶನಲ್ ಕಾಲೇಜಿನ ನಾಗರತ್ನ ಎಂ.ನಾಯ್ಕ ಮತ್ತು ನ್ಯೂ ಇಂಗ್ಲಿಷ್ ಪಿಯು ಕಾಲೇಜಿನ ಕುಸುಮಾ ಸುರೇಶ್ ನಾಯಕ್ ತೃತೀಯ ಬಹುಮಾನವನ್ನು ಪಡೆದುಕೊಂಡರು. ಅಲ್ಲದೆ ಸರ್ಕಾರಿ ಪ್ರಾಥಮಿಕ ಶಾಲೆ ಹರಿಜನ್ ಕೇರಿ ಮುರುಡೇಶ್ವರದ ಹರ್ಷಿತಾ ನಾಯಕ ಹಾಗೂ ವಿನಿತಾ ದೇವಾಡಿಗ ಇವರಿಗೆ ವಿಶೇಷ ಬಹುಮಾನವನ್ನು ನೀಡಲಾಯಿತು.

ಸಬಿಹಾ ಕೌಡಾ ಅತಿಥಿಗಳನ್ನು ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡಿದರು. ನದೀಮಾ ಟೀಚರ್ ನಿರೂಪಿಸಿದರು. ನಬೀರಾ ವಂದಿಸಿದರು. ಜಮಾಅತೆ ಇಸ್ಲಾಮಿ ಹಿಂದ್ ಭಟ್ಕಳ ಮಹಿಳಾ ಘಟಕದ ಸಂಚಾಲಕಿ ಫೌಝೀಯಾ ಶಕೀಲ್, ವಿದ್ಯಾಭಾರತಿ ಪ್ರೌಢಶಾಲೆಯ ಮುಖ್ಯಾಧ್ಯಾಪಕಿ ರೂಪಾ ಖಾರ್ವಿ, ಇಕ್ರಾ ಪ್ರೌಢಶಾಲೆಯ ಮುಖ್ಯಾಧ್ಯಾಪಕಿ ಶಾಹಿನ ಸುಲ್ತಾನ ವೇದಿಕೆಯಲ್ಲಿ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News