ತೆಂಕನಿಡಿಯೂರು ಕಾಲೇಜು: ಸ್ವಾಮಿ ವಿವೇಕಾನಂದ ಜಯಂತಿ ಆಚರಣೆ
ಉಡುಪಿ, ಜ.14: ತೆಂಕನಿಡಿಯೂರಿನ ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಸೋಮವಾರ ರಾಷ್ಟ್ರೀಯ ಯುವ ದಿನವನ್ನು ಆಚರಿಸಲಾಯಿತು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಅಜ್ಜರಕಾಡು ಡಾ.ಜಿ.ಶಂಕರ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ಸಹ ಪ್ರಾಧ್ಯಾಪಕ ಡಾ.ರಾಮದಾಸ ಪ್ರಭು ಸ್ವಾಮಿ ವಿವೇಕಾನಂದರ ವಿಚಾರಧಾರೆಗಳ ಕುರಿತು ಮಾತನಾಡಿದರು. ಇಂದಿನ ಯುವ ಜನಾಂಗ ತಮ್ಮಾಳಗಿರುವ ಶಕ್ತಿಯನ್ನು ಜಾಗೃತಗೊಳಿಸಿಕೊಂಡು ಸಾಧನೆ ಮಾಡಬೇಕೆಂದರು. ವಿದ್ಯಾರ್ಥಿಗಳು ವಿವೇಕಾನಂದರನ್ನು ಆದರ್ಶ ವಾಗಿಟ್ಟುಕೊಂಡು ತಮ್ಮ ಇಚ್ಛಾ ಶಕ್ತಿ, ಸ್ಮರಣ ಶಕ್ತಿ, ಗ್ರಹಣ ಶಕ್ತಿಗಳನ್ನು ಹೆಚ್ಚಿಸಿ ಕೊಂಡು ಬೆಳೆಯಬೇಕೆಂದರು. ತಮ್ಮಲ್ಲಿರುವ ಶಕ್ತಿಯನ್ನು ನಿರಂತರವಾಗಿ ಬೆಳೆಸಿಕೊಳ್ಳುತ್ತಾ ತಮ್ಮನ್ನು ದೇಶದ ಒಂದು ದೊಡ್ಡ ಆಸ್ತಿಯಾಗಿ ರೂಪಿಸಿ ಕೊಳ್ಳಬೇಕೆಂದು ಕರೆ ನೀಡಿದರು.
ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಪ್ರೊ. ಬಾಲಕೃಷ್ಣ ಎಸ್. ಹೆಗ್ಡೆ ವಹಿಸಿದ್ದರು. ಆಂಗ್ಲ ವಿಭಾಗದ ಸಹ ಪ್ರಾಧ್ಯಾಪಕಿ ಗೀತಾ ಉಪಸ್ಥಿತರಿದ್ದರು. ಕನ್ನಡ ಸಹಾಯಕ ಪ್ರಾಧ್ಯಾಪಕ ಡಾ. ಎಚ್.ಕೆ ವೆಂಕಟೇಶ ಅತಿಥಿಗಳ್ನು ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನು ಆಡಿದರೆ, ಸಂಖ್ಯಾಶಾಸ್ತ್ರ ಪ್ರಾಧ್ಯಾಪಕ ಪ್ರೊ. ಉಮೇಶ ಪೈ ವಂದಿಸಿದರು. ವಿದ್ಯಾರ್ಥಿನಿ ಚೈತ್ರ ಕಾರ್ಯಕ್ರಮ ನಿರೂಪಿಸಿದರು.